'ಇದೇ ತಂಡ ವಿಶ್ವಕಪ್ ಗೆಲ್ಲಲಿದೆ': 2023ರ ಒನ್‌ಡೇ ವಿಶ್ವಕಪ್ ಫೈನಲ್ ಫಲಿತಾಂಶ ಭವಿಷ್ಯ ನುಡಿದ ನೇಥನ್ ಲಯನ್..!

First Published | Oct 31, 2023, 2:48 PM IST

ಬೆಂಗಳೂರು: 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದ 30 ಪಂದ್ಯಗಳು ಮುಕ್ತಾಯವಾಗಿದ್ದು, ಇನ್ನು ಯಾವ ತಂಡವು ಸೆಮೀಸ್ ಪ್ರವೇಶಿಸಿಲ್ಲ ಹಾಗೂ ಯಾವ ತಂಡವು ಅಧಿಕೃತವಾಗಿ ಸೆಮೀಸ್ ರೇಸ್‌ನಿಂದ ಹೊರಬಿದ್ದಿಲ್ಲ. ಹೀಗಿರುವಾಗಲೇ ಆಸ್ಟ್ರೇಲಿಯಾದ ದಿಗ್ಗಜ ಸ್ಪಿನ್ನರ್ ನೇಥನ್ ಲಯನ್, 2023ರ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲುವ ತಂಡ ಯಾವುದು ಎನ್ನುವುದನ್ನು ಭವಿಷ್ಯ ನುಡಿದಿದ್ದಾರೆ.
 

2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಭಾರತದಲ್ಲಿ ಭರ್ಜರಿಯಾಗಿ ಸಾಗುತ್ತಿದ್ದು, ಈಗಾಗಲೇ ಹಲವು ಅಚ್ಚರಿಗಳಿಗೆ ಈ ವಿಶ್ವಕಪ್ ಸಾಕ್ಷಿಯಾಗಿದೆ. ಸದ್ಯ 45 ಲೀಗ್ ಪಂದ್ಯಗಳ ಪೈಕಿ ಅಕ್ಟೋಬರ್ 30ರ ಅಂತ್ಯದ ವೇಳೆಗೆ 30 ಪಂದ್ಯಗಳು ಮುಕ್ತಾಯವಾಗಿವೆ.

ಲೀಗ್ ಹಂತವು ಕೊನೆಯ ಹೊಸ್ತಿಲು ತಲುಪಿದ್ದರೂ, ಇನ್ನೂ ಯಾವುದೇ ತಂಡವು ಅಧಿಕೃತವಾಗಿ ಸೆಮೀಸ್‌ ಸ್ಥಾನವನ್ನು ಖಚಿತಪಡಿಸಿಕೊಂಡಿಲ್ಲ. ಇದೇ ರೀತಿ ಯಾವ ತಂಡವು ಅಧಿಕೃತವಾಗಿ ಸೆಮೀಸ್‌ ರೇಸ್‌ನಿಂದಲೂ ಹೊರಬಿದ್ದಿಲ್ಲ.
 

Tap to resize

ಸದ್ಯ ಭಾರತ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಅಂಕಪಟ್ಟಿಯಲ್ಲಿ ಕ್ರಮವಾಗಿ ಅಗ್ರ 4 ಸ್ಥಾನ ಕಾಯ್ದುಕೊಂಡಿದ್ದು, ಬಹುತೇಕ ಈ 4 ತಂಡಗಳೇ ಸೆಮೀಸ್‌ ಪ್ರವೇಶಿಸುವುದು ಖಚಿತ ಎನಿಸಿಕೊಂಡಿವೆ.
 

ಇನ್ನು ಲೀಗ್ ಹಂತದ ಪಂದ್ಯಗಳು ಸಾಗುತ್ತಿರುವುದರ ಬೆನ್ನಲ್ಲೇ ಆಸ್ಟ್ರೇಲಿಯಾದ ಅನುಭವಿ ಆಫ್‌ಸ್ಪಿನ್ನರ್ ನೇಥನ್ ಲಯನ್, 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಯಾವ ಎರಡು ತಂಡಗಳು ಮುಖಾಮುಖಿಯಾಗಲಿವೆ ಎನ್ನುವುದನ್ನು ಭವಿಷ್ಯ ನುಡಿದಿದ್ದಾರೆ.

ಹೌದು, 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆತಿಥೇಯ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಡಲಿವೆ. ಈ ಪೈಕಿ ಪ್ರವಾಸಿ ಆಸ್ಟ್ರೇಲಿಯಾ ತಂಡವು ಕಪ್‌ ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ನೇಥನ್ ಲಯನ್ ಅಭಿಪ್ರಾಯಪಟ್ಟಿದ್ದಾರೆ.

ಒಂದು ಕಡೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ತಾನಾಡಿದ ಮೊದಲ 6 ಪಂದ್ಯಗಳಲ್ಲೂ ಗೆಲುವು ಸಾಧಿಸಿ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನೊಂದೆಡೆ ಆಸ್ಟ್ರೇಲಿಯಾ ತಂಡವು ಮೊದಲೆರಡು ಪಂದ್ಯ ಸೋತು, ಆ ಬಳಿಕ ಸತತ 4 ಪಂದ್ಯ ಗೆದ್ದು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

SEN 1170 Breakfast ಮಾಧ್ಯಮದಲ್ಲಿ ಮಾತನಾಡಿದ ಲಯನ್, "ನನಗೆ ಪ್ರಾಮಾಣಿಕವಾಗಿ ಅನಿಸ್ತಿದೆ, ಈ ಬಾರಿ ಫೈನಲ್‌ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಲಿದೆ ಎಂದು. ಭಾರತ ಬಲಿಷ್ಠ ತಂಡ ಎನ್ನುವುದರಲ್ಲಿ ಅನುಮಾನವಿಲ್ಲ. ಅದೇ ರೀತಿ ದಕ್ಷಿಣ ಆಫ್ರಿಕಾ ಕೂಡಾ ಬಲಿಷ್ಠ ತಂಡವಾಗಿದೆ ಎಂದು ಆಸೀಸ್ ಸ್ಪಿನ್ನರ್ ಹೇಳಿದ್ದಾರೆ.
 

"ಇಡೀ ದೇಶವೇ ಟೀಂ ಇಂಡಿಯಾ ಈ ಬಾರಿ ಐಸಿಸಿ ಏಕದಿನ ವಿಶ್ವಕಪ್ ಜಯಿಸಲಿ ಎಂದು ಬಯಸುತ್ತಿದೆ. ಅಭಿಮಾನಿಗಳ ನಿರೀಕ್ಷೆ ಭಾರವನ್ನು ಟೀಂ ಇಂಡಿಯಾ ಪಾಲಿಗೆ ಒತ್ತಡ ಎನಿಸಬಹುದು. ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಟ್ರ್ಯಾಕ್‌ ರೆಕಾರ್ಡ್ ಗಮನಿಸಿದರೆ, ಆಸ್ಟ್ರೇಲಿಯಾ ಚಾಂಪಿಯನ್ ಆಗಬಹುದು" ಎಂದು ಭವಿಷ್ಯ ನುಡಿದಿದ್ದಾರೆ.
 

Latest Videos

click me!