15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಹೊಸ 2 ತಂಡಗಳ ಸೇರ್ಪಡೆಗೆ ಅಕ್ಟೋಬರ್ 17ರಂದು ಹರಾಜು/ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ. ಇದರೊಂದಿಗೆ ಹೊಸದಾಗಿ ಯಾವೆರಡು ತಂಡಗಳು ಐಪಿಎಲ್‌ನಲ್ಲಿ ಕಣಕ್ಕಿಳಿಯಲಿವೆ ಎನ್ನುವ ಕುತೂಹಲಕ್ಕೆ ತೆರೆ ಬೀಳಲಿದೆ.
ಟೆಂಡರ್ ಖರೀದಿಸುವ ಸಂಸ್ಥೆ ಇಲ್ಲವೇ ವ್ಯಕ್ತಿಗಳ ಆರ್ಥಿಕ ಸ್ಥಿತಿಗತಿ, ಹಿನ್ನೆಲೆಯನ್ನು ಬಿಸಿಸಿಐ ಪರಿಶೀಲಿಸಲಿದ್ದು ಎಲ್ಲಾ ಮಾನದಂಡಗಳನ್ನು ಪೂರ್ಣಗೊಳಿಸುವವರನ್ನಷ್ಟೇ ಬಿಡ್ಡಿಂಗ್‌ಗೆ ಆಹ್ವಾನಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಸ ತಂಡ ಖರೀದಿಗೆ ಅದಾನಿ, ಆರ್‌ಪಿಜಿ ಸಂಜೀವ್ ಗೋಯೆಂಕಾ ಸಂಸ್ಥೆ, ಹೆಸರಾಂತ ಫಾರ್ಮಾ ಸಂಸ್ಥೆಯ ಮಾಲೀಕ ಹಾಗೂ ಜನಪ್ರಿಯ ಬ್ಯಾಂಕರ್ ಒಬ್ಬರು ಆಸಕ್ತಿ ಹೊಂದಿರುವುದಾಗಿ ಮೂಲಗಳು ತಿಳಿಸಿವೆ.
ತಂಡಗಳು ಅಹಮದಾಬಾದ್, ಪುಣೆ ಇಲ್ಲವೇ ಲಖನೌ ನಗರಗಳ ಪಾಲಾಗಬಹುದು ಎನ್ನಲಾಗಿದೆ. ಅಹಮದಾಬಾದ್‌ನಲ್ಲಿ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಿದೆ. ಇನ್ನು ಲಖನೌನ ಏಕನಾ ಕ್ರೀಡಾಂಗಣವೂ ದೊಡ್ಡದಾಗಿದ್ದು, 40 ಸಾವಿರಕ್ಕೂ ಹೆಚ್ಚು ಆಸನ ಸಾಮರ್ಥ್ಯ ಹೊಂದಿದೆ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್ ಪ್ರಕರಣದಲ್ಲಿ ಸಿಲುಕಿ 2 ವರ್ಷ ನಿಷೇಧಕ್ಕೊಳಗಾಗಿದ್ದ ವೇಳೆ ಪುಣೆ ಹಾಗೂ ಗುಜರಾತ್ ತಂಡಗಳು ಐಪಿಎಲ್‌ನಲ್ಲಿ ಆಡಿದ್ದವು.
ಈ ಮೊದಲು ಗುಜರಾತ್ ಸೂಪರ್‌ಜೈಂಟ್ ತಂಡ ರಾಜ್‌ಕೋಟ್ ಅನ್ನು ತನ್ನ ತವರಾಗಿ ಆಯ್ಕೆ ಮಾಡಿಕೊಂಡಿತ್ತು. ಈ ಬಾರಿ ಅಹಮದಾಬಾದ್ ಮೂಲದ ತಂಡ ಆಡಬಹುದು ಎನ್ನಲಾಗಿದೆ
2022ರ ಐಪಿಎಲ್‌ಗೆ ಹೊಸದಾಗಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಈಗಿರುವ ತಂಡಗಳಲ್ಲಿನ ಬಹುತೇಕ ಆಟಗಾರರು ಬೇರೆ ತಂಡಗಳ ಪಾಲಾಗಲಿದ್ದಾರೆ. ಯಾವೆಲ್ಲಾ ಆಟಗಾರರು ಯಾವ ತಂಡದ ಪಾಲಾಗಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.