ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ಪ್ರಕಟಿಸಿದ ಶಕೀಬ್ ಅಲ್ ಹಸನ್‌; ಗೇಲ್‌, ಎಬಿಡಿಗಿಲ್ಲ ಸ್ಥಾನ..!

First Published Sep 14, 2021, 4:05 PM IST

ನವದೆಹಲಿ: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಯುಎಇ ಚರಣದ ಪಂದ್ಯಾವಳಿಗಳು ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಬಾಂಗ್ಲಾದೇಶದ ಅನುಭವಿ ಆಲ್ರೌಂಡರ್ ಶಕೀಬ್‌ ಅಲ್ ಹಸನ್‌ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್‌ ತಂಡವನ್ನು ಹೆಸರಿಸಿದ್ದು, ಮಹೇಂದ್ರ ಸಿಂಗ್ ಧೋನಿಗೆ ನಾಯಕ ಪಟ್ಟ ಕಟ್ಟಿದ್ದಾರೆ. ಸಾಕಷ್ಟು ಅಳೆದು-ತೂಗಿ ಸಾರ್ವಕಾಲಿಕ ಐಪಿಎಲ್‌ ತಂಡವನ್ನು ಶಕೀಬ್‌ ಪ್ರಕಟಿಸಿದ್ದಾರೆಯಾದರೂ, ಐಪಿಎಲ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಯುನಿವರ್ಸಲ್‌ ಬಾಸ್‌ ಖ್ಯಾತಿಯ ಕ್ರಿಸ್‌ ಗೇಲ್ ಹಾಗೂ ಎಬಿ ಡಿವಿಲಿಯರ್ಸ್‌ ಅವರಿಗೆ ತಂಡದಲ್ಲಿ ಸ್ಥಾನ ನೀಡದೇ ಇರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಶಕೀಬ್‌ ಕನಸಿನ ಐಪಿಎಲ್‌ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
 

1.ರೋಹಿತ್ ಶರ್ಮಾ

ಮುಂಬೈ ಇಂಡಿಯನ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್‌ ತಂಡವು 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಹಿಟ್‌ಮ್ಯಾನ್‌ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಸಾಕಷ್ಟು ಯಶಸ್ಸು ಗಳಿಸಿದ್ದಾರೆ

2. ಡೇವಿಡ್‌ ವಾರ್ನರ್

ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಮಾಜಿ ನಾಯಕ ವಾರ್ನರ್, ತಮ್ಮ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಪಡೆಯ ಬೌಲರ್‌ಗಳ ಎದೆಯಲ್ಲಿ ನಡುಕಹುಟ್ಟಿಸಬಲ್ಲ ಆಟಗಾರ. 3 ಬಾರಿ ಆರೆಂಜ್‌ ಕ್ಯಾಪ್ ಗೆಲ್ಲುವಲ್ಲಿ ವಾರ್ನರ್ ಯಶಸ್ವಿಯಾಗಿದ್ದಾರೆ

3. ವಿರಾಟ್ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ರನ್‌ ಮಷೀನ್ ಎಂದೇ ಪ್ರಖ್ಯಾತಿ ಗಳಿಸಿದ್ದಾರೆ. ಯಾವುದೇ ಮೈದಾನದಲ್ಲಿ ಲೀಲಾಜಾಲವಾಗಿ ರನ್‌ ಗಳಿಸುವ ಚಾಕಚಕ್ಯತೆ ವಿರಾಟ್ ಕೊಹ್ಲಿಗಿದೆ.
 

4. ಸುರೇಶ್ ರೈನಾ

ಮಿಸ್ಟರ್ ಐಪಿಎಲ್‌ ಖ್ಯಾತಿಯ ಸುರೇಶ್‌ ರೈನಾ ಮಿಲಿಯನ್ ಡಾಲರ್ ಕ್ರಿಕೆಟ್‌ ಟೂರ್ನಿಯಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ತೋರಿ ಗಮನ ಸೆಳೆದಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸುವ ರೈನಾ, ಚೆನ್ನೈ ತಂಡದ ಬ್ಯಾಟಿಂಗ್ ಬೆನ್ನೆಲುಬು ಎಂದರೆ ಅತಿಶಯೋಕ್ತಿಯಾಗಲಾರದು

5.ಮಹೇಂದ್ರ ಸಿಂಗ್ ಧೋನಿ

ಶಕೀಬ್ ತನ್ನ ಕನಸಿನ ತಂಡದಲ್ಲಿ ಧೋನಿಗೆ ನಾಯಕ ಪಟ್ಟ ಕಟ್ಟಿದ್ದಾರೆ. ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮೂರು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಧೋನಿ ನಾಯಕನಾಗಿ ಹಾಗೂ ವಿಕೆಟ್ ಕೀಪರ್‌ ರೂಪದಲ್ಲಿ ಶಕೀಬ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
 

6. ಕೆ.ಎಲ್‌ ರಾಹುಲ್

ಪಂಜಾಬ್ ಕಿಂಗ್ಸ್‌ ತಂಡದ ನಾಯಕ ಕೆ.ಎಲ್‌. ರಾಹುಲ್ ಕೂಡಾ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರೆಂಜ್‌ ಕ್ಯಾಪ್‌ ಮುಡಿಗೇರಿಸಿಕೊಂಡಿದ್ದರು.
 

7. ಬೆನ್ ಸ್ಟೋಕ್ಸ್‌

ರಾಜಸ್ಥಾನ ರಾಯಲ್ಸ್‌ ತಂಡದ ಸ್ಟಾರ್ ಆಲ್ರೌಂಡರ್ ಬೆನ್‌ ಸ್ಟೋಕ್ಸ್‌ 2017ನೇ ಸಾಲಿನ ಐಪಿಎಲ್‌ನಲ್ಲಿ ಮೋಸ್ಟ್ ವ್ಯಾಲ್ಯೂಯೇಬಲ್‌ ಪ್ಲೇಯರ್ ಪ್ರಶಸ್ತಿಗೆ ಭಾಜನರಾಗಿದ್ದರು. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಏಕಾಂಗಿಯಾಗಿ ಗೆಲುವು ತಂದುಕೊಡುವ ಸಾಮರ್ಥ್ಯ ಬೆನ್ ಸ್ಟೋಕ್ಸ್‌ಗಿದೆ.

8. ರವೀಂದ್ರ ಜಡೇಜಾ

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಸ್ಟಾರ್ ಆಲ್ರೌಂಡರ್ ಜಡೇಜಾ ಬ್ಯಾಟಿಂಗ್-ಬೌಲಿಂಗ್ ಮಾತ್ರವಲ್ಲದೇ ಚುರುಕಿನ ಕ್ಷೇತ್ರ ರಕ್ಷಣೆಯ ಮೂಲಕ ತಂಡಕ್ಕೆ ಆಸರೆಯಾಗಬಲ್ಲ ಉಪಯುಕ್ತ ಆಟಗಾರ.

9. ಲಸಿತ್ ಮಾಲಿಂಗ

ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಾಲಿಂಗ ತಮ್ಮ ಕರಾರುವಕ್ಕಾದ ದಾಳಿಯ ಮೂಲಕ ಏಕಾಂಗಿಯಾಗಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಡೆತ್ ಓವರ್‌ಗಳಲ್ಲಿ ಪರಿಣಾಮಕಾರಿ ದಾಳಿ ನಡೆಸಿ ಪಂದ್ಯ ಮುಂಬೈನತ್ತ ವಾಲುವಂತೆ ಮಾಡಿದ್ದಾರೆ

10.ಜಸ್ಪ್ರೀತ್ ಬುಮ್ರಾ

ಮುಂಬೈ ಇಂಡಿಯನ್ಸ್‌ ತಂಡದ ಮತ್ತೋರ್ವ ಮಾರಕ ವೇಗಿ. ಡೆತ್ ಓವರ್‌ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಬುಮ್ರಾ ಐಪಿಎಲ್‌ನ ಅತ್ಯಂತ ಯಶಸ್ವಿ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.
 

11. ಭುವನೇಶ್ವರ್ ಕುಮಾರ್

ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ವೇಗದ ಬೌಲಿಂಗ್‌ ಪಡೆಯನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಆರಂಭದಲ್ಲೇ ರನ್‌ ವೇಗಕ್ಕೆ ಕಡಿವಾಣ ಹಾಕಿ ವಿಕೆಟ್ ಕಬಳಿಸುವ ಸಾಮರ್ಥ್ಯ ಭುವಿಗಿದೆ.

click me!