ಸೂರ್ಯನಿಗಿಂದು ಹುಟ್ಟುಹಬ್ಬದ ಸಂಭ್ರಮ: ನೆನಪಿವೆಯಾ ಮುಂಬೈ ಕ್ರಿಕೆಟಿಗನ ಟಾಪ್ 4 ಫರ್ಫಾಮೆನ್ಸ್‌..!

First Published Sep 14, 2021, 12:52 PM IST

ಬೆಂಗಳೂರು: ಭಾರತದ 360 ಖ್ಯಾತಿಯ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್ ಯಾದವ್‌ 31ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಾವೆದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್‌ನೊಂದಿಗೆ ಖಾತೆ ತೆರೆದ ಭಾರತದ ಮೊದಲ ಬ್ಯಾಟ್ಸ್‌ಮನ್‌ ಎನ್ನುವ ವಿಶಿಷ್ಠ ದಾಖಲೆ ಹೊಂದಿರುವ ಸೂರ್ಯನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರಲಾರಂಭಿಸಿದೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಸೂರ್ಯನ 5 ಅದ್ಭುತ ಇನಿಂಗ್ಸ್‌ಗಳನ್ನು ಮೆಲುಕು ಹಾಕೋಣ ಬನ್ನಿ
 

ಯಾವುದೇ ಮಾದರಿಯ ಕ್ರಿಕೆಟ್‌ನಲ್ಲಿ ಚುರುಕಾಗಿ ರನ್‌ ಗಳಿಸುವ ಸಾಮರ್ಥ್ಯವಿರುವ ಸೂರ್ಯಕುಮಾರ್ ಯಾದವ್‌ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 
 

ಇತ್ತೀಚಿನ ವರ್ಷಗಳಲ್ಲಿ ತಮ್ಮ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಸೂರ್ಯಕುಮಾರ್, ಅನುಭವಿ ಶ್ರೇಯಸ್‌ ಅಯ್ಯರ್ ಅವರನ್ನು ಹಿಂದಿಕ್ಕಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ಸದ್ಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ಸೂರ್ಯಕುಮಾರ್ ಯಾದವ್, ಟೀಂ ಇಂಡಿಯಾ ಪರವೂ ಅಮೋಘ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಸೂರ್ಯನ 4 ಅದ್ಭುತ ಇನಿಂಗ್ಸ್‌ಗಳನ್ನು ಮೆಲುಕು ಹಾಕೋಣ ಬನ್ನಿ

ಆರ್‌ಸಿಬಿ ಎದುರು ಅಜೇಯ 79*(ಐಪಿಎಲ್ 2020)

ಸೂರ್ಯಕುಮಾರ್ ಕುಮಾರ್ 2020ರ ಐಪಿಎಲ್ ಟೂರ್ನಿಯ 48ನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ದ ಕೇವಲ 43 ಎಸೆತಗಳಲ್ಲಿ ಅಜೇಯ 79 ರನ್‌ ಬಾರಿಸಿ ಮುಂಬೈ ಇಂಡಿಯನ್ಸ್‌ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದ್ದು ಯಾರು ತಾನೆ ಮರೆಯಲು ಸಾಧ್ಯ?. ಗೆಲ್ಲಲು 165 ರನ್‌ಗಳು ಗುರಿ ಬೆನ್ನತ್ತಿದ್ದ ಮುಂಬೈ ತಂಡ 5 ವಿಕೆಟ್‌ಗಳ ಅರ್ಹ ಜಯ ದಾಖಲಿಸಲು ಸೂರ್ಯ ನೆರವಾಗಿದ್ದರು. ಸೂರ್ಯ ಸ್ಪೋಟಕ ಇನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಸೇರಿದ್ದವು.

ಇಂಗ್ಲೆಂಡ್ ಎದುರು 57 ರನ್‌(2021)

ಇಂಗ್ಲೆಂಡ್ ಎದುರು 4ನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 31 ಎಸೆತಗಳನ್ನು ಎದುರಿಸಿ ಸ್ಪೋಟಕ 57 ರನ್‌ ಚಚ್ಚಿದ್ದರು. ಸೂರ್ಯ ಸೊಗಸಾದ ಇನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಸೇರಿದ್ದವು. ಸೂರ್ಯಕುಮಾರ್ ಯಾದವ್ ವಿಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಟೀಂ ಇಂಡಿಯಾ 8 ರನ್‌ಗಳ ರೋಚಕ ಗೆಲುವು ಸಾಧಿಸಿತ್ತು.

ಕೆಕೆಆರ್ ಎದುರು 56 ರನ್‌(ಐಪಿಎಲ್ 2021)

ಇತ್ತೀಚೆಗಷ್ಟೇ ನಡೆದ ಕೆಕೆಆರ್ ಎದುರಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಬಾರಿಸಿದ(36 ಎಸೆತ 56 ರನ್‌) ಆಕರ್ಷಕ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್‌ 152 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತ್ತು. ಈ ಪಂದ್ಯವನ್ನು ಹಾಲಿ ಚಾಂಪಿಯನ್‌ 10 ರನ್‌ಗಳಿಂದ ಜಯ ಸಾಧಿಸಿತ್ತು. ಸೂರ್ಯಕುಮಾರ್ ಯಾದವ್ ಆ ಪಂದ್ಯದಲ್ಲಿ ಮುಂಬೈ ಪರ ಗರಿಷ್ಠ ಸ್ಕೋರರ್ ಎನಿಸಿದ್ದರು. 
 

ಲಂಕಾ ಎದುರು 53 ರನ್‌(2021)

ಶ್ರೀಲಂಕಾ ವಿರುದ್ದದ 3 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಸೂರ್ಯ 44 ಎಸೆತಗಳನ್ನು ಎದುರಿಸಿ ಅಮೂಲ್ಯ 53 ರನ್‌ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಲಂಕಾ ನೀಡಿದ್ದ 276 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಒಂದು ಹಂತದಲ್ಲಿ 116 ರನ್‌ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ಬಳಿಕ ಎಚ್ಚರಿಕೆ ಬ್ಯಾಟಿಂಗ್ ನಡೆಸಿದ ಸೂರ್ಯ ಟೀಂ ಇಂಡಿಯಾಗೆ 3 ವಿಕೆಟ್‌ಗಳ ರೋಚಕ ಗೆಲುವು ತಂದುಕೊಡುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದರು.
 

click me!