ಬೆಂಗಳೂರು: ಕ್ರಿಕೆಟ್ ಜಗತ್ತು ಕಂಡ ಅತ್ಯಂತ ಯಶಸ್ವಿ ನಾಯಕ, ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಇಂದು(ಜು.7) ತಮ್ಮ 41ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಭಾರತಕ್ಕೆ ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕನ ಕುರಿತಾದ 5 ಇಂಟ್ರೆಸ್ಟಿಂಗ್ ಸಂಗತಿಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್ ಜಗತ್ತು ಕಂಡಂತಹ ಅತ್ಯಂತ ಯಶಸ್ವಿ ನಾಯಕ ಎಂದೇ ಗುರುತಿಸಿಕೊಂಡಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಆಗಿ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದ ಧೋನಿ, ತನ್ನ ತಾಳ್ಮೆಯ ನಾಯಕತ್ವದ ಮೂಲಕವೇ ಭಾರತಕ್ಕೆ ಐಸಿಸಿ ಟಿ20 ವಿಶ್ವಕಪ್, ಐಸಿಸಿ ಏಕದಿನ ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದರು. ಧೋನಿ ಹುಟ್ಟುಹಬ್ಬದ ಸಂದರ್ಭದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್. ಕಾಂ ಕ್ಯಾಪ್ಟನ್ ಕೂಲ್ ಬಗ್ಗೆ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.
26
1. ಧೋನಿ ಭಾರತಕ್ಕೆ ಸಿಕ್ಕಿದ್ದು ಹೇಗೆ?
2003ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು(ಬಿಸಿಸಿಐ) ಸಣ್ಣ ನಗರಗಳಲ್ಲಿನ ಪ್ರತಿಭಾನ್ವಿತ ಆಟಗಾರರನ್ನು ಹುಡುಕುವ ಪ್ರಯತ್ನ ಆರಂಭಿಸಿತು. ಈ ಸಂದರ್ಭದಲ್ಲಿ ಧೋನಿ ಜಾರ್ಖಂಡ್‌ನ ಜೆಮ್ಶೆಡ್‌ಪುರದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದರು. ಇದನ್ನು ಗಮನಿಸಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಪ್ರಕಾಶ್ ಪೊಡ್ಡರ್ ಎನ್ನುವವರು ಧೋನಿ ಪ್ರತಿಭೆಯನ್ನು ಗುರುತಿಸಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಶಿಫಾರಸು ಮಾಡಿದರು. ಮುಂದೆ ನಡೆದದ್ದು ಇತಿಹಾಸ.
36
Image credit: Wikimedia Commons
2. ಧೋನಿಯನ್ನು ಅರಸಿ ಬಂದಿವೆ ರಾಜೀವ್ ಗಾಂಧಿ ಖೇಲ್ ರತ್ನ, ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿ
ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ತೋರುವ ಆಟಗಾರರಿಗೆ ನೀಡಲಾಗುವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ(ಈಗ ಮೇಜರ್ ಧ್ಯಾನ್ ಚಂದ್ ಪ್ರಶಸ್ತಿ), ಅತ್ಯುನ್ನತ ನಾಗರೀಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳಿಗೆ ಮಹೇಂದ್ರ ಸಿಂಗ್ ಧೋನಿ ಪಾತ್ರರಾಗಿದ್ದಾರೆ. 2007ರಲ್ಲಿ ಭಾರತ ತಂಡಕ್ಕೆ ಟಿ20 ವಿಶ್ವಕಪ್ ಗೆದ್ದ ಬಳಿಕ ನಾಯಕರಾಗಿದ್ದ ಧೋನಿಗೆ ಖೇಲ್ ರತ್ನ ಪ್ರಶಸ್ತಿ ನೀಡಲಾಗಿತ್ತು. ಇದಾದ ಕೆಲ ವರ್ಷಗಳ ಬಳಿಕ ಪದ್ಮಶ್ರೀ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಕೊನೆಯ ಹಂತದಲ್ಲಿ ಮಹಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
46
3. ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯ ಅತ್ಯಂತ ದುಬಾರಿ ಆಟಗಾರ ಮಹೇಂದ್ರ ಸಿಂಗ್ ಧೋನಿ
2008ರಲ್ಲಿ ಆರಂಭವಾದ ಚೊಚ್ಚಲ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯಲ್ಲಿ ದುಬಾರಿ ಮೊತ್ತಕ್ಕೆ ಹರಾಜಾದ ಆಟಗಾರ ಎನ್ನುವ ಹೆಗ್ಗಳಿಕೆಯೂ ಧೋನಿಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಧೋನಿಯನ್ನು ಸುಮಾರು 1.5 ಮಿಲಿಯನ್ ಅಮೆರಿಕನ್ ಡಾಲರ್(11.46 ಕೋಟಿ ರುಪಾಯಿ) ನೀಡಿ ಐಕಾನ್ ಆಟಗಾರನನ್ನಾಗಿ ಆಯ್ಕೆ ಮಾಡಿಕೊಂಡಿತ್ತು. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 4 ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
56
4. ಭಾರತೀಯ ಸೇನೆ ಜತೆ ಧೋನಿ ಅವಿನಾಭಾವ ಸಂಬಂಧ
ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ ಭಾರತೀಯ ಸೇನೆ ಜತೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. 2011ರಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಅಲಂಕರಿಸಿದ ಭಾರತದ ಮೊದಲ ಕ್ರಿಕೆಟಿಗ ಎನ್ನುವ ಹಿರಿಮೆಗೆ ಧೋನಿ ಪಾತ್ರರಾಗಿದ್ದರು. ಧೋನಿ ಆಗಾಗ ಭಾರತೀಯ ಸೇನಾ ಕ್ಯಾಂಪ್‌ಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇನ್ನು 2019ರ ಐಸಿಸಿ ಏಕದಿನ ವಿಶ್ವಕಪ್ ಬಳಿಕ ಧೋನಿ 15 ದಿನಗಳ ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಪ್ರಾದೇಶಿಕ ಸೇನೆ ಜತೆ ಕಾರ್ಯ ನಿರ್ವಹಿಸುವ ಮೂಲಕ ಹಲವು ಯುವಕರಿಗೆ ಮಾದರಿಯಾಗಿದ್ದರು.
66
5. ಹಲವು ಕ್ರೀಡಾಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ ಧೋನಿ
ಎರಡು ವಿಶ್ವಕಪ್ ವಿಜೇತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಭಾರತದ ಹಲವು ಕ್ರೀಡಾ ತಂಡದ ಮಾಲೀಕರಾಗಿದ್ದಾರೆ ಅಥವಾ ತಂಡದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಇವುಗಳ ಪೈಕಿ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಚೆನ್ನೈಯಿನ್ ಎಫ್‌ಸಿ, ಹಾಕಿ ಇಂಡಿಯಾ ಲೀಗ್‌ನಲ್ಲಿ ರಾಂಚಿ ರೇಸ್, ಸೂಪರ್‌ಸ್ಪೋರ್ಟ್ಸ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಮಹಿ ರೇಸಿಂಗ್ ಟೀಂ ಇಂಡಿಯಾ ತಂಡಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದರ ಜತೆಗೆ ತನ್ನದೇ ಆದ ಫಾರ್ಮ್‌ಹೌಸ್ ಮಾಡಿ ವಿವಿಧ ತರಕಾರಿ, ಹಣ್ಣುಹಂಪಲು. ಪಶುಸಂಗೋಪನೆ ಮಾಡುತ್ತಿದ್ದಾರೆ. ಇದರ ಜತೆಗೆ ಕೆಲ ತಿಂಗಳ ಹಿಂದಷ್ಟೇ ದೇಶದ ಅತಿದೊಡ್ಡ ಡ್ರೋಣ್ ಕಂಪನಿಯಾದ ಗರುಡಾ ಏರೋಸ್ಪೇಸ್ ಸಂಸ್ಥೆಯ ರಾಯಭಾರಿಯಾಗಿ ನೇಮಕವಾಗಿದ್ದು, ಈ ಸಂಸ್ಥೆಯಲ್ಲಿಯೂ ಹೂಡಿಕೆ ಮಾಡಿದ್ದಾರೆ.