IPL 2022: ಹರಾಜಿನಲ್ಲಿ ಈ ಐವರು ಆಟಗಾರರನ್ನು ಖರೀದಿಸಿ ಕೈಸುಟ್ಟುಕೊಂಡ ಫ್ರಾಂಚೈಸಿಗಳು..!

First Published | Apr 22, 2022, 6:00 PM IST

ಬೆಂಗಳೂರು(ಏ.22): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಭರ್ಜರಿಯಾಗಿ ಸಾಗುತ್ತಿದ್ದು, ಬಹುತೇಕ ಅರ್ಧ ಭಾಗ ಮುಕ್ತಾಯವಾದಂತೆ ಆಗಿದೆ. ನೂತನ ಐಪಿಎಲ್ ತಂಡ ಗುಜರಾತ್ ಟೈಟಾನ್ಸ್ ಹಾಗೂ ಚೊಚ್ಚಲ ಐಪಿಎಲ್ ಟ್ರೋಫಿಯ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿವೆ. ಇನ್ನು 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಕೊನೆಯ ಸ್ಥಾನದಲ್ಲಿದ್ದರೆ, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ.
ಇದೀಗ 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ 29 ಪಂದ್ಯಗಳು ಮುಕ್ತಾಯವಾಗಿದ್ದು, ಹರಾಜಿನಲ್ಲಿ ಫ್ರಾಂಚೈಸಿಗಳು ಸಾಕಷ್ಟು ನಿರೀಕ್ಷೆಯಿಟ್ಟು ತಮ್ಮ ತೆಕ್ಕೆಗೆ ಸೆಳೆದುಕೊಂಡು ಆಟಗಾರರು ಇಲ್ಲಿಯವರೆಗೆ ದಯನೀಯ ವೈಫಲ್ಯ ಅನುಭವಿಸಿದ್ದಾರೆ. ಅಂತಹ ಆಟಗಾರರ ವಿವರ ಇಲ್ಲಿದೆ ನೋಡಿ

1. ಮ್ಯಾಥ್ಯೂ ವೇಡ್ (ಗುಜರಾತ್ ಟೈಟಾನ್ಸ್‌)

2021ರ ಐಸಿಸಿ ಟಿ20 ವಿಶ್ವಕಪ್ ಹೀರೋ ಮ್ಯಾಥ್ಯೂ ವೇಡ್ ಅವರನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಬರೋಬ್ಬರಿ 2.4 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ವೇಡ್‌ ಬ್ಯಾಟಿಂಗ್ ಜತೆಗೆ ಉತ್ತಮ ವಿಕೆಟ್ ಕೀಪರ್‌ ಕೂಡಾ ಹೌದು.

Matthew Wade

ಸಾಕಷ್ಟು ನಿರೀಕ್ಷೆಯೊಂದಿಗೆ ಗುಜರಾತ್ ಫ್ರಾಂಚೈಸಿಯು ಮ್ಯಾಥ್ಯೂ ವೇಡ್ ಅವರನ್ನು ಖರೀದಿಸಿತ್ತು. ಆದರೆ ವೇಡ್ ಗುಜರಾತ್ ಪರ 5 ಪಂದ್ಯಗಳನ್ನಾಡಿ 13.6ರ ಬ್ಯಾಟಿಂಗ್ ಸರಾಸರಿಯಲ್ಲಿ ಕೇವಲ 68 ರನ್‌ಗಳನ್ನಷ್ಟೇ ಬಾರಿಸಲು ಯಶಸ್ವಿಯಾಗಿದ್ದಾರೆ. 34 ವರ್ಷದ ಮ್ಯಾಥ್ಯೂ ವೇಡ್ ಅವರಿಂದ ಗುಜರಾತ್ ಫ್ರಾಂಚೈಸಿಯು ಹೆಚ್ಚಿನ ಕೊಡುಗೆಯನ್ನು ನಿರೀಕ್ಷಿಸುತ್ತಿದೆ.

Tap to resize

2. ಕ್ರಿಸ್ ಜೋರ್ಡನ್‌ (ಚೆನ್ನೈ ಸೂಪರ್ ಕಿಂಗ್ಸ್‌)

ಟಿ20 ಲೀಗ್‌ನಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಕ್ರಿಸ್ ಜೋರ್ಡನ್‌ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು 3.6 ಕೋಟಿ ರುಪಾಯಿ ನೀಡಿ ಕ್ರಿಸ್ ಜೋರ್ಡನ್‌ ಅವರನ್ನು ಖರೀದಿಸಿತ್ತು. ಆದರೆ ಜೋರ್ಡನ್‌ ಇಲ್ಲಿಯವರೆಗೆ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿದ್ದಾರೆ.

Chris Jordan

33 ವರ್ಷದ ಕ್ರಿಸ್ ಜೋರ್ಡನ್, ಸಿಎಸ್‌ಕೆ ಪರ 4 ಪಂದ್ಯಗಳನ್ನಾಡಿ ಕೇವಲ 2 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದಾರೆ. ಡೆತ್ ಓವರ್ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಜೋರ್ಡನ್ ಈ ಬಾರಿ ಡೆತ್ ಓವರ್‌ನಲ್ಲಿ 11.5ರ ಎಕಾನಮಿಯಲ್ಲಿ ರನ್ ನೀಡಿ ದುಬಾರಿ ಬೌಲರ್ ಎನಿಸಿದ್ದಾರೆ. ಜೋರ್ಡನ್ ಬದಲು ಸಿಎಸ್‌ಕೆ ಫ್ರಾಂಚೈಸಿ ಜೋಶ್ ಹೇಜಲ್‌ವುಡ್ ಖರೀದಿಸಿದ್ದರೆ, ಇಂದು ಸಿಎಸ್‌ಕೆ ಫಲಿತಾಂಶ ಬೇರೆಯದ್ದೇ ಆಗಿರುತ್ತಿತ್ತು.

3. ವಿಜಯ್ ಶಂಕರ್ (ಗುಜರಾತ್ ಟೈಟಾನ್ಸ್)

ಗುಜರಾತ್ ಟೈಟಾನ್ಸ್ ತಂಡ ಸೇರುವ ಮುನ್ನ ವಿಜಯ್ ಶಂಕರ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಈ ಬಾರಿಯ ಐಪಿಎಲ್‌ ವಿಜಯ್ ಶಂಕರ್ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ.

ಇದುವರೆಗೂ ಗುಜರಾತ್ ಟೈಟಾನ್ಸ್ ಪರ 4 ಪಂದ್ಯಗಳನ್ನಾಡಿ ಕೇವಲ 4.75ರ ಬ್ಯಾಟಿಂಗ್ ಸರಾಸರಿಯಲ್ಲಿ 19 ರನ್‌ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ವಿಜಯ್‌ ಶಂಕರ್‌ಗೆ 1.4 ಕೋಟಿ ರುಪಾಯಿ ನೀಡಿ ತಪ್ಪು ಮಾಡಿತಾ ಎನ್ನುವ ಪ್ರಶ್ನೆ ಇದೀಗ ಕಾಡಲಾರಂಭಿಸಿದೆ. 

4. ರೋಮನ್ ಪೋವೆಲ್ (ಡೆಲ್ಲಿ ಕ್ಯಾಪಿಟಲ್ಸ್‌)

ಟಿ20 ಫ್ರಾಂಚೈಸಿ ಲೀಗ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ವಿಂಡೀಸ್ ಆಟಗಾರ ರೋಮನ್ ಪೋವೆಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 2.8 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಆದರೆ ಪೋವೆಲ್ ಡೆಲ್ಲಿ ಪರ ಅಬ್ಬರಿಸಲು ವಿಫಲರಾಗಿದ್ದಾರೆ.

powell

28 ವರ್ಷದ ರೋಮನ್ ಪೋವೆಲ್, ಡೆಲ್ಲಿ ಕ್ಯಾಪಿಟಲ್ಸ್ ಪರ 5 ಪಂದ್ಯಗಳನ್ನಾಡಿ 6.20 ಬ್ಯಾಟಿಂಗ್ ಸರಾಸರಿಯಲ್ಲಿ ಕೇವಲ 31 ರನ್‌ ಗಳಿಸಲಷ್ಟೇ ಶಕ್ತರಾಗಿದ್ದಾರೆ. ರೋಮನ್ ಪೋವೆಲ್, ಮಾರ್ಕಸ್ ಸ್ಟೋನಿಸ್ ಅವರ ಸ್ಥಾನವನ್ನು ತುಂಬಬಹುದು ಎನ್ನುವ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ನಿರೀಕ್ಷೆ ಸದ್ಯಕ್ಕೆ ಹುಸಿಯಾಗಿದೆ

5. ಮನೀಶ್ ಪಾಂಡೆ (ಲಖನೌ ಸೂಪರ್ ಜೈಂಟ್ಸ್‌)

ಕರ್ನಾಟಕ ಕ್ರಿಕೆಟ್ ತಂಡದ ನಾಯಕ ಮನೀಶ್ ಪಾಂಡೆ ಬ್ಯಾಟ್ ಕೂಡಾ ಈ ಬಾರಿಯ ಐಪಿಎಲ್‌ನಲ್ಲಿ ಮಂಕಾಗಿದೆ. 32 ವರ್ಷದ ಮನೀಶ್ ಪಾಂಡೆ ಲಖನೌ ತಂಡದ ಪರ 4 ಪಂದ್ಯಗಳನ್ನಾಡಿ ಕೇವಲ 60 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.
 

ಅನುಭವಿ ಬ್ಯಾಟರ್ ಮನೀಶ್ ಪಾಂಡೆ ಅವರನ್ನು ಲಖನೌ ಫ್ರಾಂಚೈಸಿಯು ಬರೋಬ್ಬರಿ 4.6 ಕೋಟಿ ರುಪಾಯಿ ನೀಡಿ ಖರೀದಿಸಿದೆ. ಆದರೆ ಪಾಂಡೆ ಕೇವಲ 15ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್‌ ಗಳಿಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಎದುರು 38 ರನ್ ಬಾರಿಸಿದ್ದೇ ಈ ಟೂರ್ನಿಯಲ್ಲಿ ಮನೀಶ್ ಬಾರಿಸಿದ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿದೆ.

Latest Videos

click me!