ಐಪಿಎಲ್ 2026ರ ಹರಾಜಿಗೂ ಮುನ್ನ ಶಾರುಕ್ ಖಾನ್ ಅವರ ತಂಡ ಕೆಕೆಆರ್, ಆಂಡ್ರೆ ರಸೆಲ್ ಅವರನ್ನು ಬಿಡುಗಡೆ ಮಾಡಿರುವುದು ಅಭಿಮಾನಿಗಳಿಗೆ ಶಾಕ್ ನೀಡಿದೆ. ಇದು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಾದ ಅಪ್‌ಡೇಟ್ ಇಲ್ಲಿದೆ ನೋಡಿ
ಬಾಲಿವುಡ್ ಬಾದ್‌ಶಾ ಶಾರುಕ್ ಖಾನ್ ಅವರ ತಂಡ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಹರಾಜಿಗೂ ಮುನ್ನ ಆಂಡ್ರೆ ರಸೆಲ್ ಅವರನ್ನು ಬಿಡುಗಡೆ ಮಾಡಿದೆ. ಸ್ಫೋಟಕ ಇನ್ನಿಂಗ್ಸ್ ಮತ್ತು ತನ್ನದೇ ಆದ ಬೌಲಿಂಗ್‌ನಿಂದ ಗಮನ ಸೆಳೆಯುವ ಸ್ಟಾರ್ ಆಟಗಾರನನ್ನು ಕೈಬಿಟ್ಟಿರುವುದು ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
28
ಗಟ್ಟಿ ತೀರ್ಮಾನ ಮಾಡಿದ ಕೆಕೆಆರ್
ಕಳೆದ 12 ವರ್ಷಗಳಿಂದ ಕೆಕೆಆರ್ ತಂಡವನ್ನು ಪ್ರತಿನಿಧಿಸಿದ್ದ ಕೆರಿಬಿಯನ್ ಸ್ಟಾರ್ ಅನ್ನು ಕೈಬಿಟ್ಟಿದ್ದು ಫ್ರಾಂಚೈಸಿಯ ಧೈರ್ಯದ ನಿರ್ಧಾರವೆಂದು ಪರಿಗಣಿಸಲಾಗಿದೆ. ಕಳೆದ ಸೀಸನ್‌ಗೂ ಮುನ್ನ ರಸೆಲ್‌ರನ್ನು ₹12 ಕೋಟಿಗೆ ಉಳಿಸಿಕೊಂಡಿದ್ದ ಕೆಕೆಆರ್, ಐಪಿಎಲ್ 2026ರ ಹರಾಜಿಗೂ ಮುನ್ನ ಅವರನ್ನು ಬಿಡುಗಡೆ ಮಾಡಿ ತನ್ನ ಪರ್ಸ್ ಹೆಚ್ಚಿಸಿಕೊಂಡಿದೆ.
ಈ ನಿರ್ಧಾರದಿಂದ ಕೆಕೆಆರ್ ಈಗ ಒಟ್ಟು ₹64.3 ಕೋಟಿಗಳ ಅತಿದೊಡ್ಡ ಪರ್ಸ್‌ನೊಂದಿಗೆ ಹರಾಜಿಗೆ ಕಾಲಿಡುತ್ತಿದೆ. ಅಲ್ಲದೆ, ಕೇವಲ 12 ಆಟಗಾರರನ್ನು ಮಾತ್ರ ಉಳಿಸಿಕೊಂಡು, ಐಪಿಎಲ್ ತಂಡಗಳಲ್ಲಿ ಅತಿ ಕಡಿಮೆ ರಿಟೆನ್ಶನ್ ಮಾಡಿದ ಫ್ರಾಂಚೈಸಿ ಎನಿಸಿದೆ.
38
ಮಾತು ತಪ್ಪಿದ ಕೆಕೆಆರ್ ಸಿಇಒ
2020ರಲ್ಲಿ ಕೆಕೆಆರ್ ಸಿಇಒ ವೆಂಕಿ ಮೈಸೂರು, ರಸೆಲ್‌ಗೆ "ನೀವು ನಿವೃತ್ತರಾಗುವವರೆಗೂ ಕೋಲ್ಕತ್ತಾ ನೈಟ್ ರೈಡರ್ ಆಗಿಯೇ ಇರುತ್ತೀರಿ" ಎಂದು ನೀಡಿದ್ದ ಭರವಸೆ ಈಗ ಅಭಿಮಾನಿಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಆ ವಾಗ್ದಾನದ ಹೊರತಾಗಿಯೂ ಅವರನ್ನು ಬಿಡುಗಡೆ ಮಾಡಿರುವುದು ಸೋಶಿಯಲ್ ಮೀಡಿಯಾದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ.
ಆಂಡ್ರೆ ರಸೆಲ್ ಅವರ ಅಂಕಿಅಂಶಗಳು ಅವರೆಷ್ಟು ಅಪಾಯಕಾರಿ ಆಟಗಾರ ಎನ್ನುವುದನ್ನು ತೋರಿಸುತ್ತವೆ. ಐಪಿಎಲ್‌ನ 140 ಪಂದ್ಯಗಳಲ್ಲಿ 2,651 ರನ್, 174.97 ಸ್ಟ್ರೈಕ್‌ರೇಟ್, 123 ವಿಕೆಟ್‌ಗಳು, ಮತ್ತು 2015-2019ರ MVP ಪ್ರಶಸ್ತಿಗಳನ್ನು ಪಡೆದಿದ್ದಾರೆ. ಐಪಿಎಲ್‌ನಲ್ಲಿ 200 ಸಿಕ್ಸರ್‌ಗಳನ್ನು ಬಾರಿಸಿದ ವೇಗದ ಆಟಗಾರರಲ್ಲಿ ರಸೆಲ್ ಕೂಡಾ ಒಬ್ಬರು. 2014 ಮತ್ತು 2024ರ ಐಪಿಎಲ್ ಪ್ರಶಸ್ತಿಗಳನ್ನು ಕೆಕೆಆರ್ ಗೆಲ್ಲುವಲ್ಲಿ ರಸೆಲ್ ಪ್ರಮುಖ ಪಾತ್ರ ವಹಿಸಿದ್ದರು.
58
ರಸೆಲ್ ಕೈಬಿಟ್ಟು ತಪ್ಪು ಮಾಡಿತಾ ಕೆಕೆಆರ್?
ಆಂಡ್ರೆ ರಸೆಲ್ ಅವರನ್ನು ಕೈಬಿಟ್ಟು ಕೆಕೆಆರ್ ತಪ್ಪು ಮಾಡಿದೆ ಎಂಬ ವಾದಗಳು ಬಲವಾಗಿ ಕೇಳಿಬರುತ್ತಿವೆ. ಎದುರಾಳಿಗಳಲ್ಲಿ ರಸೆಲ್ ಸೃಷ್ಟಿಸುವ ಭಯ ಅಪರೂಪದ್ದು. ಅವರಂತಹ ಆಲ್‌ರೌಂಡರ್ ಅನ್ನು ಹುಡುಕುವುದು ತಂಡಕ್ಕೆ ಕಷ್ಟ. ರಸೆಲ್ ಬ್ರಾಂಡ್ ಮೌಲ್ಯದಿಂದ ಕೆಕೆಆರ್ ಮುಖಪುಟದಲ್ಲಿ ನಿಂತಿದ್ದರು. ಐಪಿಎಲ್ 2025ರಲ್ಲಿ ಅವರ ಫಾರ್ಮ್ ಸಾಧಾರಣವಾಗಿದ್ದರೂ, 2024ರಲ್ಲಿ 19 ವಿಕೆಟ್‌ಗಳೊಂದಿಗೆ ಕೆಕೆಆರ್‌ಗೆ ಪ್ರಶಸ್ತಿ ತಂದುಕೊಟ್ಟಿದ್ದರು. ಹರಾಜಿನಲ್ಲಿ ಬೇರೆ ತಂಡಗಳು ಅವರನ್ನು ಹೆಚ್ಚಿನ ಬೆಲೆಗೆ ಖರೀದಿಸುವ ಸಾಧ್ಯತೆಯಿದೆ. ಇದರಿಂದ ಕೆಕೆಆರ್ ಅವರನ್ನು ಶಾಶ್ವತವಾಗಿ ಕಳೆದುಕೊಳ್ಳುವ ಅಪಾಯವಿದೆ.
68
ಕೆಕೆಆರ್ ತೀರ್ಮಾನದ ಬಗ್ಗೆ ಮಿಶ್ರ ಅಭಿಪ್ರಾಯ
ಕೆಕೆಆರ್ ತೆಗೆದುಕೊಂಡ ನಿರ್ಧಾರದ ಬಗ್ಗೆ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಬಜೆಟ್ ನಿರ್ವಹಣೆಯನ್ನು ಪರಿಗಣಿಸಿದರೆ, ರಸೆಲ್ ಮೇಲೆ ಖರ್ಚು ಮಾಡುತ್ತಿದ್ದ ₹12 ಕೋಟಿ ಉಳಿತಾಯವಾಗಲಿದೆ. ಈ ಹಣದಿಂದ ತಂಡದ ಇತರ ದೌರ್ಬಲ್ಯಗಳನ್ನು ಸರಿಪಡಿಸಲು ಅವಕಾಶ ಸಿಗುತ್ತದೆ. 2026ರ ವೇಳೆಗೆ ರಸೆಲ್‌ಗೆ 38 ವರ್ಷ ವಯಸ್ಸಾಗುತ್ತದೆ. ವಯಸ್ಸು ಮತ್ತು ಫಿಟ್‌ನೆಸ್ ಸಮಸ್ಯೆಗಳು ಎದುರಾಗಬಹುದು.
78
ಕೆಕೆಆರ್ ನಡೆ ಸಮರ್ಥಿಸಿಕೊಂಡ ಕೃಷ್ಣಮಾಚಾರಿ ಶ್ರೀಕಾಂತ್
ಮಾಜಿ ಭಾರತೀಯ ಆಯ್ಕೆಗಾರ ಕ್ರಿಸ್ ಶ್ರೀಕಾಂತ್ ರಸೆಲ್ ಬಿಡುಗಡೆ ಬಗ್ಗೆ ಮಾತನಾಡುತ್ತಾ, “ಕಳೆದ ಕೆಲವು ವರ್ಷಗಳಿಂದ ರಸೆಲ್ ದೊಡ್ಡದಾಗಿ ಏನೂ ಮಾಡಿಲ್ಲ. ಹಾಗಾಗಿ ಅವರನ್ನು ಬಿಡುಗಡೆ ಮಾಡಿದ್ದು ಸರಿಯಾದ ನಿರ್ಧಾರ. ಬೇಕಿದ್ದರೆ ಕಡಿಮೆ ಬೆಲೆಗೆ ಮತ್ತೆ ಖರೀದಿಸಬಹುದು” ಎಂದು ಅವರು ಹೇಳಿದ್ದಾರೆ.
88
ರಸೆಲ್‌ರನ್ನು ಮತ್ತೆ ಖರೀದಿಸುತ್ತಾ ಕೆಕೆಆರ್?
ಹರಾಜಿನಲ್ಲಿ ಬೇರೆ ತಂಡಗಳು ಕೂಡ ಅವರನ್ನು ಟಾರ್ಗೆಟ್ ಮಾಡುವ ಸಾಧ್ಯತೆಯಿದೆ. ಆದರೂ, ಕೆಕೆಆರ್ ಪರಿಸ್ಥಿತಿಗೆ ಅನುಗುಣವಾಗಿ ಬೈ-ಬ್ಯಾಕ್ ಮಾಡಲು ಪ್ರಯತ್ನಿಸಬಹುದು ಎಂದು ಅವರು ಹೇಳಿದರು.