Breaking News: ಆಟಗಾರರ ಹರಾಜಿನ ಡೇಟ್‌ ಫಿಕ್ಸ್‌, ಬೆಂಗಳೂರಲ್ಲೇ ನಡೆಯಲಿದೆ IPL Auction 2022

First Published Dec 23, 2021, 2:00 PM IST

ಬೆಂಗಳೂರು: ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2022) ಟೂರ್ನಿಗೆ ಈಗಿನಿಂದಲೇ ಭರದ ಸಿದ್ದತೆಗಳು ಆರಂಭವಾಗಿವೆ. ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಆರಂಭಕ್ಕೂ ಮುನ್ನ ಮೆಗಾ ಹರಾಜು (IPL Mega Auction) ನಡೆಯಲಿದ್ದು, ಯಾವ ಆಟಗಾರರು, ಯಾವ ತಂಡದ ತೆಕ್ಕೆಗೆ ಜಾರಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. ಹೀಗಿರುವಾಗಲೇ ಆಟಗಾರರ ಹರಾಜಿನ ಕುರಿತಂತೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಈಗಿರುವ ಎಂಟು ತಂಡಗಳ ಜತೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ಲಖನೌ ಹಾಗೂ ಅಹಮದಾಬಾದ್ ತಂಡಗಳು ಸಹ ಪಾಲ್ಗೊಳ್ಳಲಿದ್ದು, 10 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.

ಈಗಾಗಲೇ ಎಲ್ಲಾ 8 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್‌ ಮಾಡಿಕೊಂಡಿವೆ. ಇನ್ನು ಹೊಸ ಎರಡು ಫ್ರಾಂಚೈಸಿಗಳಿಗೆ ತಮಗೆ ಬೇಕಾದ ಆಟಗಾರರನ್ನು ಆಯ್ದುಕೊಳ್ಳಲು ಜನವರಿ 22ರ ವರೆಗೆ ಅವಕಾಶವನ್ನು ಬಿಸಿಸಿಐ ನೀಡಿದೆ.

ಇದೀಗ ಮಿಲಿಯನ್ ಡಾಲರ್ ಕ್ರಿಕೆಟ್‌ ಟೂರ್ನಿಯ ಆಟಗಾರರ ಹರಾಜಿಗೆ ಬೆಂಗಳೂರು ಮತ್ತೊಮ್ಮೆ ಸಾಕ್ಷಿಯಾಗಲಿದ್ದು, ಮುಂಬರುವ ಫೆಬ್ರವರಿ 12 ಹಾಗೂ 13ರಂದು ಐಪಿಎಲ್ ಆಟಗಾರರ ಹರಾಜು ನಡೆಯಲಿದೆ ಎಂದು ಖ್ಯಾತ ಕ್ರೀಡಾ ವೆಬ್‌ಸೈಟ್‌ ಕ್ರಿಕ್‌ಬಜ್‌ ವರದಿ ಮಾಡಿದೆ.

ಹರಾಜಿನ ದಿನಾಂಕವನ್ನು ಬಿಸಿಸಿಐ ಅಧಿಕಾರಿಗಳು, ಫ್ರಾಂಚೈಸಿಗಳಿಗೆ ಈಗಾಗಲೇ ತಿಳಿಸಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇನ್ನಷ್ಟೇ ಅಧಿಕೃತ ಘೋಷಣೆ ಮಾಡಬೇಕಿದೆ ಎಂದು ವರದಿ ಮಾಡಿದೆ.
 

ಐಪಿಎಲ್ ಆಟಗಾರರ ಹರಾಜು ನಡೆಯುವ ಸಂದರ್ಭದಲ್ಲೇ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಭಾರತದಲ್ಲಿ ಸೀಮಿತ ಓವರ್‌ಗಳ ಸರಣಿಯನ್ನಾಡಲಿದೆ. ಹೀಗಿದ್ದೂ ಎರಡು ಕಾರ್ಯಕ್ರಮಗಳು ಏಕಕಾಲದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿವೆ.
 

ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಫೆಬ್ರವರಿ 12ರಂದು ಎರಡನೇ ಏಕದಿನ ಕ್ರಿಕೆಟ್ ಪಂದ್ಯವನ್ನಾಡಲಿದ್ದು, ಈ ಪಂದ್ಯಕ್ಕೆ ಕೋಲ್ಕತದ ಈಡನ್ ಗಾರ್ಡನ್ಸ್‌ ಮೈದಾನ ಸಾಕ್ಷಿಯಾಗಲಿದೆ. ಇದೇ ವೇಳೆ ಬೆಂಗಳೂರಿನಲ್ಲಿ ಆಟಗಾರರ ಹರಾಜು ಆರಂಭವಾಗಲಿದೆ.
 

ಜನವರಿ 17ರೊಳಗಾಗಿ ಹರಾಜಿನಲ್ಲಿ ಪಾಲ್ಗೊಳ್ಳುವ ಆಟಗಾರರ ಮಾಹಿತಿಯನ್ನು ನೀಡಬೇಕು ಎಂದು ಈಗಾಗಲೇ ಬಿಸಿಸಿಐ ಎಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಗಳು ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಪತ್ರ ಬರೆದಿದೆ.
 

ಐಪಿಎಲ್ ಆಟಗಾರರ ಹರಾಜಿನಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ಸಾಧ್ಯತೆಯಿದ್ದು, 200 ರಿಂದ 250 ಆಟಗಾರರನ್ನು ಎಲ್ಲಾ 10 ಫ್ರಾಂಚೈಸಿಗಳು ಸೇರಿ ತಮಗೆ ಬೇಕಾದವರನ್ನು ಖರೀದಿಸುವ ಸಾಧ್ಯತೆಯಿದೆ.

click me!