IPL Auction 2022: ಐಪಿಎಲ್‌ ಮೆಗಾ ಹರಾಜಿಗೂ ಮುನ್ನ ಯಾವ ಫ್ರಾಂಚೈಸಿ ಬಳಿ ಎಷ್ಟು ಹಣ ಉಳಿದಿದೆ..?

First Published Jan 22, 2022, 4:32 PM IST

ಬೆಂಗಳೂರು: ಬಹುನಿರೀಕ್ಷಿತ 2022ನೇ ಸಾಲಿನ ಐಪಿಎಲ್‌ ಟೂರ್ನಿಯ ಮೆಗಾ ಹರಾಜಿಗೆ (IPL Mega Auction) ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಇನ್ನು ಐಪಿಎಲ್‌ ಮೆಗಾ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳಿಗೆ ಗರಿಷ್ಠ 4 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಬಿಸಿಸಿಐ(BCCI) ಅವಕಾಶ ನೀಡಿತ್ತು. ಇನ್ನು ಹೊಸ 2 ಫ್ರಾಂಚೈಸಿಗಳಿಗೆ ಗರಿಷ್ಠ 3 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿತ್ತು. ಇದೀಗ ಆ ಪ್ರಕ್ರಿಯೆ ಮುಗಿದಿದ್ದು, ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳ ಪರ್ಸ್‌ನಲ್ಲಿ ಎಷ್ಟು ಹಣ ಉಳಿದುಕೊಂಡಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯ 15ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಮುಂಬರುವ ಫೆಬ್ರವರಿ 12 ಹಾಗೂ 13ರಂದು ನಡೆಯಲಿದ್ದು, ಎಲ್ಲಾ ಫ್ರಾಂಚೈಸಿಗಳು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ರಣತಂತ್ರ ರೂಪಿಸಿವೆ.

ಈ ಬಾರಿ ಬಿಸಿಸಿಐ ಮೆಗಾ ಹರಾಜಿನಲ್ಲಿ ಆಟಗಾರರನ್ನು ಖರೀದಿಸಲು ತನ್ನ ಮಿತಿಯನ್ನು 85 ಕೋಟಿ ರುಪಾಯಿಯಿಂದ 90 ಕೋಟಿ ರುಪಾಯಿಗೆ ಹೆಚ್ಚಿಸಿತ್ತು. ಈ ಮೊತ್ತದಲ್ಲೇ ಆಟಗಾರರನ್ನು ಖರೀದಿಸಲು ಐಪಿಎಲ್‌ ಫ್ರಾಂಚೈಸಿಗಳಿಗೆ ಬಿಸಿಸಿಐ ಅವಕಾಶ ನೀಡಿದೆ.

ಅದರಂತೆ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳು ಬಿಸಿಸಿಐ ನಿಗದಿಪಡಿಸಿದ ರೀತಿಯಲ್ಲಿಯೇ ತಮಗೆ ಬೇಕಾದ ಆಟಗಾರರನ್ನು ರೀಟೈನ್‌ ಮಾಡಿಕೊಂಡಿವೆ. ಆಟಗಾರರ ರೀಟೈನ್ ಹಾಗೂ ಆಟಗಾರರ ಆಯ್ಕೆ ಪ್ರಕ್ರಿಯೆ ಬಳಿಕ ಮೆಗಾ ಹರಾಜಿಗೂ ಮುನ್ನ ಎಲ್ಲಾ 10 ಫ್ರಾಂಚೈಸಿಗಳ ಬಳಿ ಈ ಕೆಳಗಿನಂತೆ ಹಣ ಉಳಿದುಕೊಂಡಿದೆ.

1. ಚೆನ್ನೈ ಸೂಪರ್ ಕಿಂಗ್ಸ್‌

ನಾಲ್ಕು ಬಾರಿಯ ಐಪಿಎಲ್ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯು ರವೀಂದ್ರ ಜಡೇಜಾ, ಎಂ.ಎಸ್. ಧೋನಿ, ಮೋಯಿನ್ ಅಲಿ ಹಾಗೂ ಋತುರಾಜ್ ಗಾಯಕ್ವಾಡ್ ಅವರನ್ನು ರೀಟೈನ್ ಮಾಡಿಕೊಂಡಿದ್ದು, ಈಗಾಗಲೇ 42 ಕೋಟಿ ರುಪಾಯಿ ಖರ್ಚು ಮಾಡಿಕೊಂಡಿದ್ದು, ಹರಾಜಿಗಾಗಿ ತನ್ನ ಪರ್ಸ್‌ನಲ್ಲಿ 48 ಕೋಟಿ ರುಪಾಯಿ ಉಳಿಸಿಕೊಂಡಿದೆ.

2. ಡೆಲ್ಲಿ ಕ್ಯಾಪಿಟಲ್ಸ್

ಚೊಚ್ಚಲ ಐಪಿಎಲ್ ಟ್ರೋಫಿಯ ಕನವರಿಕೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕೂಡಾ ರಿಷಭ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ ಹಾಗೂ ಆನ್ರಿಚ್ ನೊಕಿಯೆ ಅವರನ್ನು ರೀಟೈನ್ ಮಾಡಿಕೊಂಡು 42.5 ಕೋಟಿ ರುಪಾಯಿ ಖರ್ಚು ಮಾಡಿಕೊಂಡಿದೆ. ಇದೀಗ ಡೆಲ್ಲಿ ಫ್ರಾಂಚೈಸಿ ಬಳಿ ಮೆಗಾ ಹರಾಜಿಗೆ 47.5 ಕೋಟಿ ರುಪಾಯಿ ಉಳಿದುಕೊಂಡಿದೆ.

3. ಮುಂಬೈ ಇಂಡಿಯನ್ಸ್

ಐದು ಬಾರಿಯ ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ತನ್ನ ಯಶಸ್ವಿ ನಾಯಕ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಕೀರನ್ ಪೊಲ್ಲಾರ್ಡ್ ಹಾಗೂ ಸೂರ್ಯಕುಮಾರ್ ಯಾದವ್ ಅವರನ್ನು ರೀಟೈನ್ ಮಾಡಿಕೊಂಡಿದ್ದು, 42 ಕೋಟಿ ರುಪಾಯಿ ಖರ್ಚು ಮಾಡಿದ್ದು, ತನ್ನ ಖಾತೆಯಲ್ಲಿ ಇನ್ನು 48 ಕೋಟಿ ರುಪಾಯಿ ಉಳಿಸಿಕೊಂಡಿದೆ. 

4. ಕೋಲ್ಕತಾ ನೈಟ್‌ ರೈಡರ್ಸ್‌

ಎರಡು ಬಾರಿಯ ಐಪಿಎಲ್ ಚಾಂಪಿಯನ್‌ ಕೆಕೆಆರ್ ಫ್ರಾಂಚೈಸಿಯು ಆಲ್ರೌಂಡರ್‌ಗಳಾದ ರಸೆಲ್, ನರೈನ್‌, ವೆಂಕಟೇಶ್ ಅಯ್ಯರ್ ಹಾಗೂ ವರುಣ್ ಚಕ್ರವರ್ತಿಯನ್ನು ರೀಟೈನ್ ಮಾಡಿಕೊಂಡಿದ್ದು, ಒಟ್ಟು 42 ಕೋಟಿ ರುಪಾಯಿ ಖರ್ಚು ಮಾಡಿಕೊಂಡಿದೆ. ಇದೀಗ ಹರಾಜಿಗಾಗಿ ಒಟ್ಟು 48 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ. 

5. ರಾಯಲ್ ಚಾಲೆಂಜರ್ಸ್ ಬೆಂಗಳೂರು

ಆರ್‌ಸಿಬಿ ಫ್ರಾಂಚೈಸಿಯು ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ರೀಟೈನ್ ಮಾಡಿಕೊಂಡಿದ್ದು, ಒಟ್ಟು 33 ಕೋಟಿ ರುಪಾಯಿ ವ್ಯಯಿಸಿದೆ. ಇದೀಗ ಹರಾಜಿಗೆ ಬೆಂಗಳೂರು ಮೂಲದ ಫ್ರಾಂಚೈಸಿ 57 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ.
 

6. ಸನ್‌ರೈಸರ್ಸ್‌ ಹೈದರಾಬಾದ್‌

ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿಯು ಕೇನ್‌ ವಿಲಿಯಮ್ಸನ್‌, ಅಬ್ದುಲ್ ಸಮದ್, ಉಮ್ರಾನ್ ಮಲಿಕ್ ಅವರನ್ನು ರೀಟೈನ್‌ ಮಾಡಿಕೊಂಡಿದ್ದು, ಒಟ್ಟು 22 ಕೋಟಿ ರುಪಾಯಿ ಖರ್ಚು ಮಾಡಿದ್ದು, ಇನ್ನೂ 68 ಕೋಟಿ ರುಪಾಯಿಗಳನ್ನು ಹರಾಜಿಗೆ ಉಳಿಸಿಕೊಂಡಿದೆ.

7. ರಾಜಸ್ಥಾನ ರಾಯಲ್ಸ್‌

ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಸಂಜು ಸ್ಯಾಮ್ಸನ್‌, ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಅವರನ್ನು ರೀಟೈನ್ ಮಾಡಿಕೊಳ್ಳಲು 28 ಕೋಟಿ ರುಪಾಯಿ ವ್ಯಯಿಸಿದ್ದು, ಒಟ್ಟು 62 ಕೋಟಿ ರುಪಾಯಿಗಳನ್ನು ಹರಾಜಿಗೆ ಹಣ ಉಳಿಸಿಕೊಂಡಿದೆ.

8. ಪಂಜಾಬ್ ಕಿಂಗ್ಸ್‌

ಪಂಜಾಬ್ ಕಿಂಗ್ಸ್‌ ಫ್ರಾಂಚೈಸಿಯು ಮಯಾಂಕ್ ಅಗರ್‌ವಾಲ್ ಹಾಗೂ ಆರ್ಶದೀಪ್ ಸಿಂಗ್ ಈ ಇಬ್ಬರು ಆಟಗಾರರನ್ನು ಮಾತ್ರ ರೀಟೈನ್ ಮಾಡಿಕೊಂಡಿದ್ದು, ಕೇವಲ 22 ಕೋಟಿ ರುಪಾಯಿಗಳನ್ನು ಮಾತ್ರ ಖರ್ಚು ಮಾಡಿದೆ. ಹೀಗಾಗಿ ಅತಿಹೆಚ್ಚು ಮೊತ್ತ ಅಂದರೆ 68 ಕೋಟಿ ರುಪಾಯಿಗಳೊಂದಿಗೆ ಪಂಜಾಬ್ ಫ್ರಾಂಚೈಸಿ ಹರಾಜಿನಲ್ಲಿ ಪಾಲ್ಗೊಳ್ಳಲಿದೆ.

9.ಅಹಮದಾಬಾದ್ ಫ್ರಾಂಚೈಸಿ

ಐಪಿಎಲ್‌ನ ನೂತನ ತಂಡವಾದ ಅಹಮದಾಬಾದ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯ, ಆಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್‌ಗೆ ತಲಾ 15 ಕೋಟಿ ರುಪಾಯಿ ಹಾಗೂ ಟೀಂ ಇಂಡಿಯಾ ಪ್ರತಿಭಾನ್ವಿತ ಬ್ಯಾಟರ್‌ ಶುಭ್‌ಮನ್‌ ಗಿಲ್‌ಗೆ 8 ಕೋಟಿ ರುಪಾಯಿ ನೀಡಿ ಖರೀದಿಸಿದೆ. ಹರಾಜಿಗೆ ಅಹಮದಾಬಾದ್ ಫ್ರಾಂಚೈಸಿ ಬಳಿ 52 ಕೋಟಿ ರುಪಾಯಿ ಉಳಿದುಕೊಂಡಿದೆ

10. ಲಖನೌ ಫ್ರಾಂಚೈಸಿ

ಲಖನೌ ಫ್ರಾಂಚೈಸಿಯು ಕೆ.ಎಲ್. ರಾಹುಲ್, ಮಾರ್ಕಸ್ ಸ್ಟೋನಿಸ್ ರವಿ ಬಿಷ್ಣೋಯಿ ಅವರನ್ನು ಖರೀದಿಸಿದೆ. ರಾಹುಲ್‌ಗೆ 17 ಕೋಟಿ, ಸ್ಟೋನಿಸ್‌ ಅವರಿಗೆ 9.2 ಕೋಟಿ ರುಪಾಯಿ ಹಾಗೂ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿಗೆ 4 ಕೋಟಿ ರುಪಾಯಿ ನೀಡಿ ಲಖನೌ ಫ್ರಾಂಚೈಸಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಇದೀಗ ಲಖನೌ ಫ್ರಾಂಚೈಸಿ ಖಾತೆಯಲ್ಲಿ ಒಟ್ಟು 59.89 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದೆ.
 

click me!