IPL 2022: ಲಖನೌ ನಾಯಕನಾಗಿ ಆಯ್ಕೆಯಾಗಿ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಕನ್ನಡಿಗ ಕೆ.ಎಲ್ ರಾಹುಲ್..!

First Published | Jan 22, 2022, 12:31 PM IST

ಬೆಂಗಳೂರು: ಕರ್ನಾಟಕ ಮೂಲದ ಟೀಂ ಇಂಡಿಯಾ (Team India) ಕ್ರಿಕೆಟಿಗ ಕೆ.ಎಲ್. ರಾಹುಲ್‌ (KL Rahul) ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಲಖನೌ ತಂಡದ (Lucknow) ನಾಯಕರಾಗಿ ನೇಮಕವಾಗಿದ್ದಾರೆ. ಇದಷ್ಟೇ ಅಲ್ಲದೇ ಐಪಿಎಲ್‌ (IPL) ಇತಿಹಾಸದಲ್ಲೇ ವಿರಾಟ್ ಕೊಹ್ಲಿಯ (Virat Kohli) ಜತೆ ಅತ್ಯಂತ ಹೆಚ್ಚು ಸಂಭಾವನೆ ಪಡೆದ ಆಟಗಾರ ಎನ್ನುವ ಹೊಸ ದಾಖಲೆಯೊಂದನ್ನು ರಾಹುಲ್ ಬರೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈಗಿರುವ 8 ತಂಡಗಳ ಜತೆಗೆ ಇನ್ನೆರಡು ಹೊಸ ತಂಡಗಳು ಕಣಕ್ಕಿಳಿಯಲಿದ್ದು, ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ಫೆಬ್ರವರಿ 12 ಹಾಗೂ 13ರಂದು ನಡೆಯಲಿರುವ ಆಟಗಾರರ ಹರಾಜಿಗೆ ಈಗಿನಿಂದಲೇ ಸಿದ್ದತೆಗಳನ್ನು ಆರಂಭಿಸಿವೆ.

ಇದೀಗ ಈ ಹಿಂದೆಯೇ ವರದಿಯಾದಂತೆ ಕೆ.ಎಲ್‌. ರಾಹುಲ್ ನೂತನ ಐಪಿಎಲ್ ತಂಡವಾದ ಲಖನೌ ತಂಡಕ್ಕೆ ದುಬಾರಿ ಮೊತ್ತಕ್ಕೆ ಸೇರ್ಪಡೆಯಾಗಿದ್ದಾರೆ. 2022ರ ಐಪಿಎಲ್‌ನಲ್ಲಿ ನಾಯಕನಾಗಿ ಲಖನೌ ತಂಡವನ್ನು ಮುನ್ನಡೆಸಲಿರುವ ರಾಹುಲ್, ಇದೀಗ ಕೊಹ್ಲಿ ಜತೆ ದುಬಾರಿ ಆಟಗಾರರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ.

Tap to resize

ಹೌದು, ಐಪಿಎಲ್ ಇತಿಹಾಸದಲ್ಲೇ ಜಂಟಿ ಗರಿಷ್ಠ ಮೊತ್ತ ನೀಡಿ ಕೆ.ಎಲ್. ರಾಹುಲ್ ಅವರನ್ನು ಲಖನೌ ಫ್ರಾಂಚೈಸಿಯು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ರಾಹುಲ್‌ಗೆ ಮೆಗಾ ಹರಾಜಿಗೂ ಮುನ್ನ 17 ಕೋಟಿ ರುಪಾಯಿ ನೀಡಿ ಒಪ್ಪಂದಕ್ಕೆ ಸಹಿ ಮಾಡಿಸಿಕೊಂಡಿದೆ. ಈ ಮೊದಲು 2018ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 17 ಕೋಟಿ ರುಪಾಯಿ ನೀಡಿ ವಿರಾಟ್ ಕೊಹ್ಲಿಯವರನ್ನು ರೀಟೈನ್ ಮಾಡಿಕೊಂಡಿತ್ತು.

ಕೆ.ಎಲ್. ರಾಹುಲ್ ಕಳೆದ ಕೆಲವು ವರ್ಷಗಳಿಂದ ನಾಯಕನಾಗಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು. ಆದರೆ ಪಂಜಾಬ್ ತಂಡವು ಕನಿಷ್ಠ ಪಕ್ಷ ಪ್ಲೇ ಆಫ್‌ಗೇರಲು ಸಹ ವಿಫಲವಾಗಿತ್ತು. ಇದೀಗ 2022ರ ಐಪಿಎಲ್‌ ಹರಾಜಿಗೂ ಮುನ್ನ ಕೆ.ಎಲ್‌. ರಾಹುಲ್ ಪಂಜಾಬ್ ತಂಡದಿಂದ ಹೊರಬಿದ್ದಿದ್ದರು.

ಇನ್ನು ಲಖನೌ ಫ್ರಾಂಚೈಸಿಯು ಕೆ.ಎಲ್. ರಾಹುಲ್ ಜತೆಗೆ ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೋನಿಸ್ ಹಾಗೂ ಭಾರತದ ಪ್ರತಿಭಾನ್ವಿಯ ಸ್ಪಿನ್ನರ್ ರವಿ ಬಿಷ್ಣೋಯಿ ಅವರನ್ನು ಖರೀದಿಸಿದೆ. ಸ್ಟೋನಿಸ್‌ ಅವರಿಗೆ 9.2 ಕೋಟಿ ರುಪಾಯಿ ಹಾಗೂ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿಗೆ 4 ಕೋಟಿ ರುಪಾಯಿ ನೀಡಿ ಲಖನೌ ಫ್ರಾಂಚೈಸಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.

ಇದೀಗ ಲಖನೌ ಫ್ರಾಂಚೈಸಿ ಖಾತೆಯಲ್ಲಿ ಒಟ್ಟು 59.89 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿದ್ದು, ಈ ಮೊತ್ತದಲ್ಲೇ ಮೆಗಾ ಹರಾಜಿನಲ್ಲಿ ತನಗೆ ಬೇಕಾದ ಆಟಗಾರರನ್ನು ಖರೀದಿಸಬಹುದಾಗಿದೆ. ಕೆ.ಎಲ್. ರಾಹುಲ್ ಓರ್ವ ಅದ್ಭುತ ಬ್ಯಾಟರ್ ಮಾತ್ರವಲ್ಲದೇ ಅತ್ಯುತ್ತಮ ವಿಕೆಟ್ ಕೀಪರ್ ಕೂಡಾ ಹೌದು ಎಂದು ಲಖನೌ ತಂಡದ ಮಾಲೀಕ ಡಾ. ಸಂಜೀವ್ ಗೋಯೆಂಕಾ ಹೇಳಿದ್ದಾರೆ.
 

ಹೌದು, ಕೆ.ಎಲ್. ರಾಹುಲ್ ನಾಯಕನಾಗಿ ಲಖನೌ ತಂಡವನ್ನು ಮುನ್ನಡೆಸಲಿದ್ದಾರೆ. ನಾನು ಅವರ ಬ್ಯಾಟಿಂಗ್, ವಿಕೆಟ್‌ ಕೀಪಿಂಗ್ ಹಾಗೂ ನಾಯಕತ್ವದ ಕೌಶಲ್ಯಗಳನ್ನು ಮೆಚ್ಚಿಕೊಂಡಿದ್ದೇನೆ. ಅವರೊಬ್ಬ ಅದ್ಭುತವಾದ ನಾಯಕರಾಗಿ ಹೊರಹೊಮ್ಮುವ ವಿಶ್ವಾಸವಿದೆ ಎಂದು ಸಂಜೀವ್ ಗೋಯೆಂಕಾ ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇನ್ನು ಮತ್ತೊಂದೆಡೆ ಇನ್ನೊಂದು ಹೊಸ ಐಪಿಎಲ್ ಫ್ರಾಂಚೈಸಿಯಾದ ಅಹಮದಾಬಾದ್ ಫ್ರಾಂಚೈಸಿಯು ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಆಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್‌ಗೆ ತಲಾ 15 ಕೋಟಿ ರುಪಾಯಿ ಹಾಗೂ ಟೀಂ ಇಂಡಿಯಾ ಪ್ರತಿಭಾನ್ವಿತ ಬ್ಯಾಟರ್‌ ಶುಭ್‌ಮನ್‌ ಗಿಲ್‌ಗೆ 8 ಕೋಟಿ ರುಪಾಯಿ ನೀಡಿ ಖರೀದಿಸಿದೆ. ಅಹಮದಾಬಾದ್ ಫ್ರಾಂಚೈಸಿ ಬಳಿ 52 ಕೋಟಿ ರುಪಾಯಿ ಉಳಿದುಕೊಂಡಿದ್ದು, ಈ ಮೊತ್ತದಲ್ಲೇ ಹರಾಜಿನಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಬಹುದಾಗಿದೆ
 

Latest Videos

click me!