ಆಸ್ಟ್ರೇಲಿಯಾದ ಏಳು ನಗರಗಳಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಾವಳಿಗಳು ನಡೆಯಲಿದ್ದು, ಒಟ್ಟು 16 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಮೊದಲಿಗೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು, ಇದಾದ ಬಳಿಕ ಸೂಪರ್ 12 ಹಂತದ ಪಂದ್ಯಗಳು ಆರಂಭವಾಗಲಿವೆ.
ಸೂಪರ್ 12 ಹಂತದ ಗ್ರೂಪ್ 1ರಲ್ಲಿ ಆತಿಥೇಯ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಫ್ಘಾನಿಸ್ತಾನ ತಂಡಗಳ ಜತೆಗೆ ಅರ್ಹತಾ ಸುತ್ತಿನ ಗ್ರೂಪ್ 'ಎ' ವಿನ್ನರ್ ಮತ್ತು ಗ್ರೂಪ್ 'ಬಿ' ರನ್ನರ್ ಅಪ್ ತಂಡಗಳು ಸ್ಥಾನ ಪಡೆಯಲಿವೆ.
ಇನ್ನು ಗ್ರೂಪ್ 2ರಲ್ಲಿ ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ತಂಡಗಳ ಜತೆಗೆ ಅರ್ಹತಾ ಸುತ್ತಿನ ಗ್ರೂಪ್ 'ಎ' ರನ್ನರ್ ಅಪ್ ಹಾಗೂ ಗ್ರೂಪ್ 'ಬಿ' ವಿನ್ನರ್ ತಂಡಗಳು ಸ್ಥಾನ ಪಡೆಯಲಿವೆ
ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಮೊದಲ ಪಂದ್ಯವು ಅಕ್ಟೋಬರ್ 22ರಂದು ಆರಂಭವಾಗಲಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ರನ್ನರ್ ಅಪ್ ನ್ಯೂಜಿಲೆಂಡ್ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಇನ್ನು ಭಾರತ ತಂಡವು ಅಕ್ಟೋಬರ್ 23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ಅಭಿಯಾನವನ್ನು ಆರಂಭಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಮೆಲ್ಬೊರ್ನ್ ಕ್ರಿಕೆಟ್ ಮೈದಾನ ಸಾಕ್ಷಿಯಾಗಲಿದೆ. 2021ರ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಉಭಯ ತಂಡಗಳು ಮುಖಾಮುಖಿಯಾಗಿದ್ದವು.
ಇನ್ನು ಇದಾದ ಬಳಿಕ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅಕ್ಟೋಬರ್ 27ರಂದು ಗ್ರೂಪ್ 'ಎ' ರನ್ನರ್ ಅಪ್ ತಂಡವನ್ನು ಎದುರಿಸಲಿದೆ. ಆನಂತರ ಟೀಂ ಇಂಡಿಯಾ, ಅಕ್ಟೋಬರ್ 30 ಹಾಗೂ ನವೆಂಬರ್ 02ರಂದು ಕ್ರಮವಾಗಿ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶವನ್ನು ಎದುರಿಸಲಿದೆ. ಇನ್ನು ಸೂಪರ್ 12 ಹಂತದ ಭಾರತದ ಪಾಲಿನ ಕೊನೆಯ ಪಂದ್ಯದಲ್ಲಿ ಗ್ರೂಪ್ 'ಬಿ' ವಿನ್ನರ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ನವೆಂಬರ್ 6ರಂದು ನಡೆಯಲಿದೆ.
ಐಸಿಸಿ ಪ್ರಕಟಿಸಿದ ವೇಳಾಪಟ್ಟಿಯಂತೆ 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ಸೇರಿದಂತೆ 7 ಪ್ರಮುಖ ನಗರಗಳಲ್ಲಿ ಒಟ್ಟು 45 ಪಂದ್ಯಗಳು ನಡೆಯಲಿದ್ದು, ಫೈನಲ್ ಪಂದ್ಯವು ನವೆಂಬರ್ 13ರಂದು ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಡಿಲೇಡ್, ಬ್ರಿಸ್ಬೇನ್, ಹೋಬರ್ಟ್, ಮೆಲ್ಬೊರ್ನ್, ಗೀಲಾಂಗ್ ಹಾಗೂ ಸಿಡ್ನಿಯಲ್ಲಿ ನಡೆಯಲಿವೆ. ಎರಡು ಸೆಮಿಫೈನಲ್ ಪಂದ್ಯಗಳು ನವೆಂಬರ್ 9 ಹಾಗೂ 10ರಂದು ಕ್ರಮವಾಗಿ ಸಿಡ್ನಿ ಕ್ರಿಕೆಟ್ ಮೈದಾನ ಹಾಗೂ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯಲಿವೆ.
ಇನ್ನು ಅರ್ಹತಾ ಸುತ್ತಿನ ಗ್ರೂಪ್ 1ರ ಮೊದಲ ಪಂದ್ಯವು ಅಕ್ಟೋಬರ್ 16ರಿಂದ ಆರಂಭವಾಗಲಿದ್ದು, ಶ್ರೀಲಂಕಾ ಹಾಗೂ ನಮೀಬಿಯಾ ತಂಡಗಳು ಕಣಕ್ಕಿಳಿಯುವ ಮೂಲಕ ತಮ್ಮ ಅಭಿಯಾನವನ್ನು ಆರಂಭಿಸಲಿವೆ.
ಎರಡು ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್, 2012ರ ಟಿ20 ವಿಶ್ವಕಪ್ ಚಾಂಪಿಯನ್ ಶ್ರೀಲಂಕಾ ತಂಡಗಳು 2022ರ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಪಡೆಯಲು ವಿಫಲವಾಗಿದ್ದು, ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಲಿವೆ.