ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹೊರತುಪಡಿಸಿ ಉಳಿದ 9 ತಂಡಗಳು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸುವ ನಾಯಕರನ್ನು ಹೆಸರಿಸಿದೆ. ಆದರೆ ಆರ್‌ಸಿಬಿ ಇದುವರೆಗೂ 15ನೇ ಆವೃತ್ತಿಯ ಐಪಿಎಲ್‌ಗೆ ತನ್ನ ನಾಯಕ ಯಾರೆಂದು ಘೋಷಿಸಿಲ್ಲ.
2022ರ ಆವೃತ್ತಿಯ ಐಪಿಎಲ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶನಿವಾರ(ಮಾ.12) ಹೊಸ ನಾಯಕನನ್ನು ಘೋಷಿಸಲಿದೆ. ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ ಬಳಿಕ ತೆರವಾಗಿರುವ ಸ್ಥಾನವನ್ನು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿ ತುಂಬಬಹುದು ಎನ್ನಲಾಗಿದೆ.
ಆಸ್ಪ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್, ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ದಿನೇಶ್ ಕಾರ್ತಿಕ್ ಸಹ ರೇಸ್‌ನಲ್ಲಿದ್ದಾರೆ. ಮ್ಯಾಕ್ಸ್‌ವೆಲ್‌ರನ್ನು ಆರ್‌ಸಿಬಿ ಮೆಗಾ ಹರಾಜಿಗೂ ಮುನ್ನ ರೀಟೈನ್ ಮಾಡಿಕೊಂಡಿತ್ತು.
ಇದೇ ವೇಳೆ ವಿರಾಟ್ ಕೊಹ್ಲಿಯನ್ನೇ ಮತ್ತೆ ನಾಯಕನನ್ನಾಗಿ ನೇಮಿಸಬಹುದು ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಕೊಹ್ಲಿಯ ರಾಜೀನಾಮೆಯನ್ನು ಆರ್‌ಸಿಬಿ ಮಾಲಿಕರು ಅಂಗೀಕರಿಸಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಇಂದು ಮಧ್ಯಾಹ್ನ 3.45ಕ್ಕೆ ಪ್ರೆಸ್ ಕಾನ್ಫರೆನ್ಸ್ ನಡೆಸಿ ತನ್ನ ನೂತನ ನಾಯಕನ ಹೆಸರನ್ನು ಘೋಷಿಸಲಿದೆ. ಇದೇ ವೇಳೆ ಆರ್‌ಸಿಬಿ ಫ್ರಾಂಚೈಸಿಯು ತನ್ನ ತಂಡದ ನೂತನ ಜೆರ್ಸಿಯನ್ನು ಅನಾವರಣ ಮಾಡಲಿದೆ.
15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಾರ್ಚ್ 27ರಂದು ಮೊದಲ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್‌ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.