IPL 2022: ಮುಂಬೈ ಇಂಡಿಯನ್ಸ್‌ಗೆ ಟಕ್ಕರ್ ನೀಡಿ ಲಸಿತ್ ಮಾಲಿಂಗರನ್ನು ಸೆಳೆದುಕೊಂಡ ರಾಜಸ್ಥಾನ ರಾಯಲ್ಸ್..!

First Published | Mar 11, 2022, 3:26 PM IST

ಬೆಂಗಳೂರು: ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರ್ಜರಿ ಸಿದ್ದತೆಗಳು ಆರಂಭವಾಗಿದ್ದು, ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಐಪಿಎಲ್ ಟೂರ್ನಿಗೆ ಕೌಂಟ್ ಡೌನ್ ಶುರುವಾಗಿರುವ ಬೆನ್ನಲ್ಲೇ ಚೊಚ್ಚಲ ಆವೃತ್ತಿಯ ಐಪಿಎಲ್ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು, ಟೂರ್ನಿಯ ಅತ್ಯಂತ ಯಶಸ್ವಿ ಮುಂಬೈ ಇಂಡಿಯನ್ಸ್‌ಗೆ ಟಕ್ಕರ್‌ ನೀಡಿದೆ. ಏನದು ಟಕ್ಕರ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

15ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಮಾರ್ಚ್ 26ರಿಂದ ಅಧಿಕೃತ ಚಾಲನೆ ಸಿಗಲಿದ್ದು, ಈ ಬಾರಿ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಈ ಬಾರಿಯ ಐಪಿಎಲ್ ಟೂರ್ನಿಗೆ ಮಹಾರಾಷ್ಟ್ರದ 4 ಸ್ಟೇಡಿಯಂಗಳು ಆತಿಥ್ಯವನ್ನು ವಹಿಸಲಿವೆ.

ಇದೀಗ ಐಪಿಎಲ್‌ನ ಮಹತ್ತರ ಬೆಳವಣಿಯೊಂದರಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಲಸಿತ್ ಮಾಲಿಂಗ ಅವರನ್ನು ತನ್ನ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಮುಂಬೈ ಇಂಡಿಯನ್ಸ್‌ಗೆ, ರಾಯಲ್ಸ್‌ ಫ್ರಾಂಚೈಸಿ ಟಕ್ಕರ್ ನೀಡಿದೆ.

Tap to resize

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ಐಪಿಎಲ್‌ ಆಟಗಾರರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಯು, ಈ ಹಿಂದೆ ರಾಜಸ್ಥಾನ ರಾಯಲ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದ ಜೋಫ್ರಾ ಆರ್ಚರ್‌ರನ್ನು ಖರೀದಿಸುವಲ್ಲಿ ಯಶಸ್ವಿಯಾಗಿತ್ತು

ಗಾಯದ ಸಮಸ್ಯೆಯಿಂದ 2022ನೇ ಸಾಲಿನ ಐಪಿಎಲ್‌ನಲ್ಲಿ ತಾವು ಲಭ್ಯವಾಗುವುದಿಲ್ಲ ಎಂದು ಘೋಷಿಸಿ, ಹರಾಜಿನಲ್ಲಿ ಪಾಲ್ಗೊಂಡಿದ್ದ ಜೋಫ್ರಾ ಆರ್ಚರ್ ಅವರನ್ನು ರಾಜಸ್ಥಾನ ರಾಯಲ್ಸ್‌ ಫ್ರಾಂಚೈಸಿಯು ಶತಾಯಗತಾಯ ತನ್ನಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಿತ್ತು. ಆದರೆ 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಫ್ರಾಂಚೈಸಿಯು 8 ಕೋಟಿ ರುಪಾಯಿ ನೀಡಿ ಆರ್ಚರ್‌ರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು.

ಇದೀಗ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಒಂದು ಹೆಜ್ಜೆ ಮುಂದೆ ಹೋಗಿ, ಮುಂಬೈ ಇಂಡಿಯನ್ಸ್‌ ತಂಡದ ಯಶಸ್ಸಿನ ಹಿಂದಿನ ಪ್ರಮುಖ ಆಟಗಾರನಾಗಿದ್ದ ಲಸಿತ್ ಮಾಲಿಂಗರನ್ನೇ ತನ್ನ ತೆಕ್ಕೆಗೆ ಸೆಳೆದುಕೊಳ್ಳುವ ಮೂಲಕ ಮುಂಬೈ ಇಂಡಿಯನ್ಸ್‌ಗೆ ಟಕ್ಕರ್ ನೀಡಿದೆ.

ಲಂಕಾ ಮಾಜಿ ವೇಗದ ಬೌಲಿಂಗ್ ಮಾಲಿಂಗ, ಮುಂಬೈ ಇಂಡಿಯನ್ಸ್ ತಂಡವು 5 ಬಾರಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಮಾಲಿಂಗ 122 ಪಂದ್ಯಗಳನ್ನಾಡಿ ಬರೋಬ್ಬರಿ 170 ವಿಕೆಟ್ ಕಬಳಿಸುವ ಮೂಲಕ, ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್‌ ಕಬಳಿಸಿದ ಬೌಲರ್ ಎನ್ನುವ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.
 

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಈ ಬಾರಿಯ ಮೆಗಾ ಹರಾಜಿನಲ್ಲಿ ಸಾಕಷ್ಟು ಅಳೆದು-ತೂಗಿ ತನಗೆ ಬೇಕಾದ ಆಟಗಾರರನ್ನು ಖರೀದಿಸಿದ್ದು, ಅಗ್ರ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್, ದೇವದತ್ ಪಡಿಕ್ಕಲ್, ಜೋಸ್ ಬಟ್ಲರ್ ಅವರಂತಹ ಆಟಗಾರರನ್ನು ಹೊಂದಿದೆ

ಇನ್ನು ಬೌಲಿಂಗ್‌ನಲ್ಲಿ ಟ್ರೆಂಟ್ ಬೌಲ್ಟ್, ಪ್ರಸಿದ್ದ್ ಕೃಷ್ಣ, ಯುಜುವೇಂದ್ರ ಚಹಲ್, ನೇಥನ್ ಕೌಲ್ಟರ್‌-ನೈಲ್ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಹೊಂದಿದ್ದು, ಎರಡನೇ ಬಾರಿಗೆ ರಾಜಸ್ಥಾನ ರಾಯಲ್ಸ್‌ ತಂಡವು ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಲು ಎದುರು ನೋಡುತ್ತಿದೆ.

Latest Videos

click me!