ಬಹುನಿರೀಕ್ಷಿತ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಗೆ ಈಗಿನಿಂದಲೇ ಭರದ ಸಿದ್ದತೆಗಳು ಆರಂಭವಾಗಿವೆ. 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜು ಪ್ರಕ್ರಿಯೆಯು ಇದೇ ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳುವ ಎಲ್ಲಾ 10 ಫ್ರಾಂಚೈಸಿಗಳು ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ಎಲ್ಲಾ ರೀತಿಯ ರಣತಂತ್ರ ಹೆಣೆಯುತ್ತಿವೆ. ಇದೆಲ್ಲದರ ನಡುವೆ ಐಪಿಎಲ್ ಆಡಳಿತ ಮಂಡಳಿಯು ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಅಂತಿಮ 590 ಆಟಗಾರರ ಹೆಸರನ್ನು ಇದೀಗ ಶಾರ್ಟ್‌ಲಿಸ್ಟ್ ಮಾಡಿದೆ. ಈ ಎಲ್ಲಾ ಆಟಗಾರರ ಹೆಸರುಗಳು ಹರಾಜಾಗಲಿವೆ.
ಐಪಿಎಲ್ ಹರಾಜಿಗೆ ಬರೋಬ್ಬರಿ 1,214 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಈ ಪೈಕಿ 590 ಆಟಗಾರರ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. 590 ಆಟಗಾರರ ಪೈಕಿ 228 ಆಟಗಾರರು ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಆಟಗಾರರಾದರೆ, 355 ಮಂದಿ ಅಂತಾರಾಷ್ಟ್ರೀಯ ಪಂದ್ಯವನ್ನಾಡ ಆಟಗಾರರಾಗಿದ್ದಾರೆ. ಇನ್ನು 7 ಆಟಗಾರರ ಐಸಿಸಿ ಅಸೋಸಿಯೇಟ್ ರಾಷ್ಟ್ರಗಳ ಆಟಗಾರರಾಗಿದ್ದಾರೆ.
ಒಟ್ಟು 590 ಆಟಗಾರರ ಪೈಕಿ 370 ಆಟಗಾರರು ಭಾರತೀಯರಾದರೆ, 220 ಆಟಗಾರರು ವಿದೇಶಿ ಆಟಗಾರರಾಗಿದ್ದಾರೆ. ಹರಾಜಿನಲ್ಲಿ ಗರಿಷ್ಠ 25 ಆಟಗಾರರನ್ನು ಖರೀದಿಸಬಹುದಾಗಿದ್ದು, ಆರ್‌ಸಿಬಿ ಫ್ರಾಂಚೈಸಿ ಈಗಾಗಲೇ 3 ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, ಇನ್ನು ಗರಿಷ್ಠ 23 ಆಟಗಾರರನ್ನು ಖರೀದಿಸಬಹುದಾಗಿದೆ.
ಆಟಗಾರರ ಖರೀದಿಗೆ ಗರಿಷ್ಠ ಮೂಲ ಬೆಲೆ 2 ಕೋಟಿ ರುಪಾಯಿ ನಿಗದಿಯಾಗಿದೆ. 48 ಆಟಗಾರರ ಮೂಲಬೆಲೆ 2 ಕೋಟಿ ರುಪಾಯಿ ನಿಗದಿಯಾಗಿದೆ. ಇನ್ನು 20 ಆಟಗಾರರ ಮೂಲ ಬೆಲೆ 1.5 ಕೋಟಿ ನಿಗದಿಯಾಗಿದೆ. ಇನ್ನು 34 ಆಟಗಾರರ ಮೂಲ ಬೆಲೆ 1 ಕೋಟಿ ರುಪಾಯಿ ನಿಗದಿಯಾಗಿದೆ.