IPL Auction 2022: 1.5 ಕೋಟಿ ರುಪಾಯಿ ಮೂಲಬೆಲೆ ಹೊಂದಿರುವ ಈ 3 ಇಂಗ್ಲೆಂಡ್ ಆಟಗಾರರು ಹರಾಜಾಗುವುದೇ ಡೌಟ್

First Published | Jan 29, 2022, 1:47 PM IST

ಬೆಂಗಳೂರು: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿರುವ ಇಂಡಿಯನ್‌ ಪ್ರೀಮಿಯರ್ ಲೀಗ್ (IPL 2022) ಟೂರ್ನಿಯಲ್ಲಿ ಇಂಗ್ಲೆಂಡ್ ಕ್ರಿಕೆಟಿಗರು ತನ್ನದೇ ಆದ ಪಾತ್ರ ನಿಭಾಯಿಸುತ್ತಾ ಬಂದಿದ್ದಾರೆ. ಜಾನಿ ಬೇರ್‌ಸ್ಟೋವ್, ಸನ್‌ರೈಸರ್ಸ್‌ ಹೈದರಾಬಾದ್ ಪರ ಹಲವು ಸ್ಮರಣೀಯ ಇನಿಂಗ್ಸ್‌ ಆಡಿದ್ದಾರೆ. ಇನ್ನು ಬೆನ್ ಸ್ಟೋಕ್ಸ್‌(Ben Stokes), ಜೋಫ್ರಾ ಆರ್ಚರ್‌ ಕೂಡಾ ಏಕಾಂಗಿಯಾಗಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟ ಹಲವಾರು ಉದಾಹರಣೆಗಳಿವೆ. 
ಆದರೆ ಈ ಬಾರಿಯ ಮೆಗಾ ಹರಾಜಿನಲ್ಲಿ (IPL Mega Auction) ಒಂದೂವರೆ ಕೋಟಿ ರುಪಾಯಿ ಮೂಲ ಬೆಲೆಯನ್ನು ಹೊಂದಿರುವ ಇಂಗ್ಲೆಂಡ್‌ನ ಈ ಕೆಳಗಿನ ಮೂವರು ಆಟಗಾರರು ಹರಾಜಾಗುವುದೇ ಅನುಮಾನ ಎನಿಸಿದೆ. ಅಷ್ಟಕ್ಕೂ ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಫೆಬ್ರವರಿ 12 ಹಾಗೂ 13ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯಲಿದೆ. ಈಗಾಗಲೇ ಸಾವಿರಕ್ಕೂ ಅಧಿಕ ಆಟಗಾರರು ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.

ಈಗಾಗಲೇ ಇಂಗ್ಲೆಂಡ್ ವಿಕೆಟ್‌ ಕೀಪರ್‌ ಜೋಸ್ ಬಟ್ಲರ್ ಹಾಗೂ ಮೋಯಿನ್ ಅಲಿ ಅವರನ್ನು ಕ್ರಮವಾಗಿ ರಾಜಸ್ಥಾನ ರಾಯಲ್ಸ್‌ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯು ಹರಾಜಿಗೂ ಮುನ್ನವೇ ರೀಟೈನ್‌ ರೀಟೈನ್‌ ಮಾಡಿಕೊಂಡಿವೆ.

Latest Videos


ಇಂಗ್ಲೆಂಡ್‌ನ ಕೆಲವು ಆಟಗಾರರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಈ ಪೈಕಿ ಕೆಲ ಆಟಗಾರರ ಮೂಲ ಬೆಲೆ 1.5 ಕೋಟಿ ರುಪಾಯಿ ನಿಗದಿಯಾಗಿದೆ. ಆದರೆ ಈ ಪೈಕಿ ಈ ಮೂವರು ಆಟಗಾರರು ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್‌ ಆದರೆ ಅಚ್ಚರಿಪಡುವಂತಿಲ್ಲ.

1. ಅಲೆಕ್ಸ್ ಹೇಲ್ಸ್‌:

ಟಿ20 ಕ್ರಿಕೆಟ್‌ನಲ್ಲಿ ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಇಂಗ್ಲೆಂಡ್‌ ಸ್ಪೋಟಕ ಬ್ಯಾಟರ್‌ ಅಲೆಕ್ಸ್‌ ಹೇಲ್ಸ್‌, ಐಪಿಎಲ್‌ ಫ್ರಾಂಚೈಸಿಗಳ ಪಾಲಿಗೆ ಆದ್ಯತೆಯ ಆಟಗಾರ ಎನಿಸಿಕೊಂಡಿಲ್ಲ. ಹೇಲ್ಸ್‌, ಕೇವಲ ಒಂದು ಆವೃತ್ತಿಯಲ್ಲಿ ಮಾತ್ರ ಐಪಿಎಲ್‌ ಪಂದ್ಯವನ್ನಾಡಿದ್ದಾರೆ.

ಅಲೆಕ್ಸ್ ಹೇಲ್ಸ್‌ 2018ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪರ 6 ಪಂದ್ಯಗಳನ್ನಾಡಿ 148 ರನ್ ಗಳಿಸಿದ್ದರು. ಕಳೆದ ಮೂರು ವರ್ಷಗಳಿಂದ ಇಂಗ್ಲೆಂಡ್ ತಂಡದಿಂದ ಹೊರಬಿದ್ದಿರುವ ಅಲೆಕ್ಸ್‌ ಹೇಲ್ಸ್‌ ಅವರ ಬೆಲೆ ಐಪಿಎಲ್‌ ಹರಾಜಿನಲ್ಲಿ 1.5 ಕೋಟಿ ರುಪಾಯಿ ನಿಗದಿಯಾಗಿದೆ. ಈ ಬಾರಿಯ ಹರಾಜಿನಲ್ಲೂ ಹೆಲ್ಸ್‌ ಅನ್‌ಸೋಲ್ಡ್ ಆಗುವ ಸಾಧ್ಯತೆ ಹೆಚ್ಚಿದೆ.

2. ಇಯಾನ್ ಮಾರ್ಗನ್‌

ಇಂಗ್ಲೆಂಡ್ ಸೀಮಿತ ಓವರ್‌ಗಳ ತಂಡದ ನಾಯಕ ಇಯಾನ್ ಮಾರ್ಗನ್, 2021ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ತಂಡವನ್ನು ನಾಯಕನಾಗಿ ಫೈನಲ್‌ಗೇರಿಸಿದ್ದರು. ಆದರೆ ಬ್ಯಾಟಿಂಗ್‌ನಲ್ಲಿ ಮಾರ್ಗನ್ ದಯನೀಯ ವೈಫಲ್ಯ ಅನುಭವಿಸಿದ್ದರು.

ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಇಯಾನ್ ಮಾರ್ಗನ್‌ ಕೆಕೆಆರ್ ತಂಡದ ಪರ 17 ಪಂದ್ಯಗಳನ್ನಾಡಿ ಕೇವಲ 11.08ರ ಸರಾಸರಿಯಲ್ಲಿ 133 ರನ್‌ಗಳನ್ನಷ್ಟೇ ಬಾರಿಸಿದ್ದರು. ಕಳಪೆ ಫಾರ್ಮ್‌ ಅನುಭವಿಸುತ್ತಿರುವ ಮಾರ್ಗನ್ ಮೂಲ ಬೆಲೆ ಕೂಡಾ ಒಂದೂವರೆ ಕೋಟಿ ರುಪಾಯಿ ನಿಗದಿಯಾಗಿದ್ದು, ಇಂಗ್ಲೆಂಡ್‌ ನಾಯಕ ಹರಾಜಾಗದೇ ಉಳಿದರೆ ಅಚ್ಚರಿಪಡುವಂತಿಲ್ಲ.

3. ಡೇವಿಡ್ ಮಲಾನ್‌

ಇಂಗ್ಲೆಂಡ್ ಟಿ20 ಸ್ಪೆಷಲಿಸ್ಟ್ ಬ್ಯಾಟರ್ ಡೇವಿಡ್ ಮಲಾನ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಕಣಕ್ಕಿಳಿದಿದ್ದರು. ಆದರೆ ಬ್ಯಾಟ್‌ನಿಂದ ಹೆಚ್ಚು ಕಮಾಲ್ ಮಾಡಲು ಮಲಾನ್‌ಗೆ ಸಾಧ್ಯವಾಗಿರಲಿಲ್ಲ.

ಡೇವಿಡ್ ಮಲಾನ್ ಯುಎಇ ಚರಣ ಐಪಿಎಲ್‌ನಿಂದ ಹೊರಗುಳಿಯುವ ತೀರ್ಮಾನ ತೆಗೆದುಕೊಂಡಿದ್ದರು. ಇನ್ನು ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲೂ ಮಲಾನ್ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಹೀಗಾಗಿ ಹರಾಜಿನಲ್ಲಿ ಅನ್‌ಸೋಲ್ಡ್ ಆಗುವ ಸಾಧ್ಯತೆ ಹೆಚ್ಚಿದೆ.

click me!