IPL 2021: ಫ್ರಾಂಚೈಸಿ ಈ 5 ಆಟಗಾರರನ್ನು ಉಳಿಸಿಕೊಂಡಿದ್ದೇಕೆ..? ಉತ್ತರ ಸಿಗದ ಪ್ರಶ್ನೆ..!

First Published | Jan 30, 2021, 4:42 PM IST

ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ವೇಳಾಪಟ್ಟಿ ಇನ್ನೂ ನಿಗದಿಯಾಗದಿದ್ದರೂ ಸಹ ಈಗಿನಿಂದಲೇ ಐಪಿಎಲ್‌ ಜ್ವರ ನಿಧಾನವಾಗಿ ಹೆಚ್ಚಾಗುತ್ತಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು 14ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿಗೂ ಮುನ್ನ ಕೆಲವು ಆಟಗಾರರನ್ನು ಉಳಿಸಿಕೊಂಡಿದ್ದರೆ, ಮತ್ತೆ ಕೆಲವು ಆಟಗಾರರನ್ನು ರಿಲೀಸ್‌ ಮಾಡಿದೆ.
ಆದರೆ ಕೆಲ ಫ್ರಾಂಚೈಸಿಗಳು ಈ ಆಟಗಾರರನ್ನು ತಂಡದಲ್ಲೇ ರೀಟೈನ್‌ ಮಾಡಿಕೊಂಡಿದ್ದೇಕೆ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. 5 ಆಟಗಾರರ ಪೈಕಿ ಆರ್‌ಸಿಬಿ ಆಟಗಾರನೂ ಇದ್ದಾನೆ. ಯಾರು ಆ 5 ಆಟಗಾರರು? ಏನಿವರ ಕಥೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

1. ಜಯದೇವ್ ಉನಾದ್ಕತ್: ರಾಜಸ್ಥಾನ ರಾಯಲ್ಸ್
ಉನಾದ್ಕತ್ 2017ರ ಐಪಿಎಲ್‌ ಟೂರ್ನಿಯಲ್ಲಿ ರೈಸಿಂಗ್ ಪುಣೆ ಪರ 12 ಪಂದ್ಯಗಳನ್ನಾಡಿ 24 ವಿಕೆಟ್‌ ಕಬಳಿಸುವ ಮೂಲಕ ಸಂಚಲನ ಮೂಡಿಸಿದ್ದರು. ಆ ಬಳಿಕ ನಡೆದ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ರಾಜಸ್ಥಾನ ತಂಡ ಕೂಡಿಕೊಂಡಿದ್ದರು.
Tap to resize

ಆದರೆ ಆ ಬಳಿಕ ಉನಾದ್ಕತ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. 13ನೇ ಆವೃತ್ತಿನಲ್ಲಿ 9ಕ್ಕೂ ಅಧಿಕ ಎಕನಮಿಯಲ್ಲಿ ರನ್‌ ನೀಡಿ ದುಬಾರಿ ಬೌಲರ್‌ ಎನಿಸಿದ್ದ ಉನಾದ್ಕತ್ ಅವರನ್ನು ರಾಜಸ್ಥಾನ ಫ್ರಾಂಚೈಸಿ ತಂಡದಲ್ಲೇ ಉಳಿಸಿಕೊಂಡಿದ್ದೇಕೆ ಎನ್ನುವುದು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.
2. ಕ್ರಿಸ್ ಜೋರ್ಡನ್‌: ಕಿಂಗ್ಸ್ ಇಲೆವನ್ ಪಂಜಾಬ್
ಕಳೆದ ಆವೃತ್ತಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಫ್ರಾಂಚೈಸಿ ಇಂಗ್ಲೆಂಡ್ ಆಲ್ರೌಂಡರ್ ಕ್ರಿಸ್ ಜೋರ್ಡನ್ ಅವರನ್ನು 3 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಡೆತ್‌ ಓವರ್‌ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಜೋರ್ಡನ್‌ ಮೇಲೆ ಫ್ರಾಂಚೈಸಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿತ್ತು.
ಆದರೆ ಜೋರ್ಡರ್‌ 9.65ರ ಎಕಾನಮಿಯಲ್ಲಿ ರನ್‌ ಬಿಟ್ಟುಕೊಡುವ ಮೂಲಕ ಪಂಜಾಬ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದರು. ಹೀಗಿದ್ದೂ ಪ್ರೀತಿ ಪಡೆ ಜೋರ್ಡನ್‌ರನ್ನು ತಂಡದಲ್ಲೇ ಉಳಿಸಿಕೊಂಡಿದೆ.
3. ಜೋಸ್ ಹೇಜಲ್‌ವುಡ್‌: ಚೆನ್ನೈ ಸೂಪರ್‌ ಕಿಂಗ್ಸ್‌
ರೆಡ್‌ ಬಾಲ್ ಕ್ರಿಕೆಟ್‌ನಲ್ಲಿ ಮಾರಕ ದಾಳಿ ನಡೆಸುವ ಆಸ್ಟ್ರೇಲಿಯಾ ವೇಗಿ ಜೋಸ್‌ ಹೇಜಲ್‌ವುಡ್‌ ಅವರನ್ನು ಸಿಎಸ್‌ಕೆ ಫ್ರಾಂಚೈಸಿ 2 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಆದರೆ ಧೋನಿ ನಂಬಿಕೆ ಉಳಿಸಿಕೊಳ್ಳುವಂತಹ ದಾಳಿಯನ್ನು ಹೇಜಲ್‌ವುಡ್ ಸಂಘಟಿಸಲಿಲ್ಲ.
13ನೇ ಆವೃತ್ತಿಯ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಹೇಜಲ್‌ವುಡ್ ಕೇವಲ 3 ಪಂದ್ಯಗಳನ್ನು ಮಾತ್ರ ಆಡಿದ್ದರು. ಹೀಗಿದ್ದೂ ಅವರನ್ನು ತಂಡ ರೀಟೈನ್‌ ಮಾಡಿಕೊಳ್ಳುವ ಮೂಲಕ ಎಲ್ಲರು ಹುಬ್ಬೇರಿಸುವಂತೆ ಮಾಡಿದೆ.
4. ರಿಂಕು ಸಿಂಗ್‌: ಕೋಲ್ಕತ ನೈಟ್‌ ರೈಡರ್ಸ್
ದೇಸಿ ಕ್ರಿಕೆಟ್‌ನಲ್ಲಿ ಒಳ್ಳೆಯ ಪ್ರದರ್ಶನ ತೋರಿದ್ದ ರಿಂಕು ಸಿಂಗ್‌ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ತೋರಲು ಎಡವುತ್ತಿದ್ದಾರೆ. ಹೀಗಿದ್ದೂ ಕೆಕೆಆರ್ ಫ್ರಾಂಚೈಸಿ ರಿಂಕು ಸಿಂಗ್‌ರನ್ನು ರೀಟೈನ್ ಮಾಡಿಕೊಂಡಿದೆ.
2017ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದಾವಾಗಿನಿಂದ ಇಲ್ಲಿಯವರೆಗೆ ರಿಂಕು ಸಿಂಗ್‌ 11 ಪಂದ್ಯಗಳನ್ನಾಡಿ ಕೇವಲ 77 ರನ್ ಬಾರಿಸಿದ್ದಾರೆ. ಇನ್ನು ಕಳೆದ ಆವೃತ್ತಿಯಲ್ಲಿ ರಿಂಕು ಸಿಂಗ್ ಕೇವಲ ಒಂದು ಪಂದ್ಯವನ್ನಷ್ಟೇ ಆಡಿದ್ದರು.
5. ಆಡಂ ಜಂಪಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು
ಪುಣೆ ಪರ 11 ಪಂದ್ಯಗಳನ್ನಾಡಿ 19 ವಿಕೆಟ್ ಪಡೆದು ಮಿಂಚಿದ್ದ ಜಂಪಾ 13ನೇ ಆವೃತ್ತಿಯಲ್ಲಿ ಕೇನ್‌ ರಿಚರ್ಡ್‌ಸನ್ ಬದಲಿಗೆ ಆರ್‌ಸಿಬಿ ತಂಡ ಕೂಡಿಕೊಂಡಿದ್ದರು. ಜಂಪಾ ಅವರಿಂದಲೂ ಅಂತಹ ಪರಿಣಾಮಕಾರಿ ಬೌಲಿಂಗ್ ಹೊರಹೊಮ್ಮಲಿಲ್ಲ.
ಆರ್‌ಸಿಬಿ ಪರ ಕೇವಲ 3 ಪಂದ್ಯಗಳನ್ನಾಡಿ 8.36ರ ಎಕನಮಿಯಲ್ಲಿ ರನ್‌ ಬಿಟ್ಟುಕೊಟ್ಟು ಕೆಲವು ವಿಕೆಟ್‌ಗಳನ್ನು ಮಾತ್ರ ಕಬಳಿಸಿದ್ದರು. ಹೀಗಾಗಿ ಮುಂದಿನ ಆವೃತ್ತಿಯಲ್ಲಾದರೂ ಫ್ರಾಂಚೈಸಿ ತಮ್ಮ ಮೇಲಿಟ್ಟ ನಂಬಿಕೆಯನ್ನು ಜಂಪಾ ಉಳಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Latest Videos

click me!