14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಕೆಕೆಆರ್ ಎದುರು ಟಾಸ್ ಗೆದ್ದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡುವ ನಿರ್ಣಯ ತೆಗೆದುಕೊಂಡರು.
ಸುನಿಲ್ ನರೈನ್ ಮಾರಕ ದಾಳಿಗೆ ತತ್ತರಿಸಿದ ಆರ್‌ಸಿಬಿ ತಂಡವು 7 ವಿಕೆಟ್ ಕಳೆದುಕೊಂಡು ಕೇವಲ 138 ರನ್ ಕಲೆಹಾಕಿತ್ತು. ನಾಯಕ ವಿರಾಟ್ ಕೊಹ್ಲಿ 39 ರನ್ ಬಾರಿಸಿದ್ದೇ ಆರ್‌ಸಿಬಿ ಪರ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿತು.
ಇದೇ ವೇಳೆ ಐಪಿಎಲ್‌ನ ಗರಿಷ್ಠ ರನ್ ಸರದಾರ ವಿರಾಟ್ ಕೊಹ್ಲಿ, 8ನೇ ಬಾರಿಗೆ ಆವೃತ್ತಿಯೊಂದರಲ್ಲಿ 400ಕ್ಕೂ ಹೆಚ್ಚು ರನ್ ಕಲೆಹಾಕಿದ ಸಾಧನೆಗೈದಿದ್ದಾರೆ.
ಈ ಮೂಲಕ ಐಪಿಎಲ್ ಆವೃತ್ತಿಯೊಂದರಲ್ಲಿ ಅತಿಹೆಚ್ಚು ಬಾರಿ 400ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಜಂಟಿ 2ನೇ ಸ್ಥಾನ ಹೊಂದಿದ್ದಾರೆ. ಕೊಹ್ಲಿ ಹಾಗೂ ಧವನ್ ತಲಾ 8 ಬಾರಿ 400ಕ್ಕೂ ಹೆಚ್ಚು ರನ್ ಕಲೆಹಾಕಿ ಜಂಟಿ 2ನೇ ಸ್ಥಾನದಲ್ಲಿದ್ದಾರೆ.
ಸುರೇಶ್ ರೈನಾ ಐಪಿಎಲ್ ಟೂರ್ನಿಗಳಲ್ಲಿ ಒಟ್ಟು 9 ಬಾರಿ 400+ ರನ್ ಸಾಧನೆ ಮಾಡಿ ಮೊದಲ ಸ್ಥಾನದಲ್ಲಿದ್ದರೆ, ಡೇವಿಡ್ ವಾರ್ನರ್ ಹಾಗೂ ರೋಹಿತ್ ಶರ್ಮಾ ತಲಾ 7 ಬಾರಿ 400+ ರನ್ ಬಾರಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ
(Photo Source- Google)
Virat Kohli
ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 900ಕ್ಕೂ ಹೆಚ್ಚು ಬೌಂಡರಿ ಬಾರಿಸಿದ ಭಾರತದ 2ನೇ ಬ್ಯಾಟ್ಸ್‌ಮನ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಸೋಮವಾರ ಕೆಕೆಆರ್ ವಿರುದ್ಧ ಆರ್‌ಸಿಬಿ ನಾಯಕ 5 ಬೌಂಡರಿಗಳನ್ನು ಸಿಡಿಸಿದರು.
Virat Kohli
319 ಟಿ20 ಪಂದ್ಯಗಳಲ್ಲಿ ವಿರಾಟ್ 901 ಬೌಂಡರಿ ಬಾರಿಸಿದ್ದಾರೆ. 302 ಪಂದ್ಯಗಳಲ್ಲಿ ಶಿಖರ್ ಧವನ್ 986 ಬೌಂಡರಿ ಬಾರಿಸಿ ಭಾರತೀಯರ ಪರ ಮೊದಲ ಸ್ಥಾನದಲ್ಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಕ್ರಿಸ್ ಗೇಲ್ 448 ಪಂದ್ಯಗಳಲ್ಲಿ 1,105 ಬೌಂಡರಿ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.
ಇನ್ನು ಆರ್‌ಸಿಬಿ ನೀಡಿದ್ದ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕೆಕೆಆರ್ ತಂಡವು ಇನ್ನು 2 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್‌ಗಳ ಅಂತರದ ರೋಚಕ ಗೆಲುವು ಸಾಧಿಸುವ ಮೂಲಕ ಎರಡನೇ ಕ್ವಾಲಫೈಯರ್ ಪಂದ್ಯಕ್ಕೆ ಲಗ್ಗೆಯಿಟ್ಟಿದೆ.
ಇನ್ನು ಇದೇ ಪಂದ್ಯದಲ್ಲಿ ಐಪಿಎಲ್ ಆವೃತ್ತಿಯೊಂದರಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಡ್ವೇನ್ ಬ್ರಾವೋ ಜತೆ ಆರ್‌ಸಿಬಿ ವೇಗಿ ಹರ್ಷಲ್ ಪಟೇಲ್ ಜಂಟಿ ಅಗ್ರಸ್ಥಾನ(32 ವಿಕೆಟ್)ಕ್ಕೇರುವಲ್ಲಿ ಯಶಸ್ವಿಯಾದರು.
2013ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ಡ್ವೇನ್ ಬ್ರಾವೋ 18 ಪಂದ್ಯಗಳನ್ನಾಡಿ ಒಟ್ಟು 32 ವಿಕೆಟ್ ಕಬಳಿಸಿದ್ದರು. ಇದೀಗ ಹರ್ಷಲ್ ಪಟೇಲ್ ಕೇವಲ 15 ಪಂದ್ಯಗಳನ್ನಾಡಿ ಬ್ರಾವೋ ದಾಖಲೆ ಸರಿಗಟ್ಟಿದ್ದಾರೆ.
ಹರ್ಷಲ್ ಪಟೇಲ್‌ಗೆ ಬ್ರಾವೋ ದಾಖಲೆ ಮುರಿಯುವ ಅವಕಾಶವಿತ್ತು. ಆದರೆ ನರೈನ್‌ರ ಕ್ಯಾಚ್ ಕೈಚೆಲ್ಲಿದ ದೇವದತ್ ಪಡಿಕ್ಕಲ್, ಹರ್ಷಲ್ ಪಟೇಲ್ ದಾಖಲೆ ಬರೆಯುವ ಅವಕಾಶದಿಂದ ವಂಚಿತರಾಗುವಂತೆ ಮಾಡಿದರು.