ಶಾರ್ಜಾ ಮೈದಾನದಲ್ಲಿ ನಡೆದ ಕೆಕೆಆರ್ ಎದುರಿನ ಎಲಿಮಿನೇಟರ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರೋಚಕ ಸೋಲು ಕಾಣುವ ಮೂಲಕ ತನ್ನ ಅಭಿಯಾನವನ್ನು ಮುಗಿಸಿದೆ.
ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ತೋರುವ ಮೂಲಕ ಚೊಚ್ಚಲ ಕಪ್ ಗೆಲ್ಲುವ ಭರವಸೆ ಮೂಡಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಹತ್ವದ ಎಲಿಮಿನೇಟರ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಸೋಲಿಗೆ ಶರಣಾಗಿದೆ.
ಯುಎಇ ಚರಣದ ಪಂದ್ಯ ಆರಂಭಕ್ಕೂ ಮುನ್ನವೇ ವಿರಾಟ್ ಕೊಹ್ಲಿ 14ನೇ ಆವೃತ್ತಿಯ ಐಪಿಎಲ್ ಮುಕ್ತಾಯದ ಬಳಿಕ ಆರ್‌ಸಿಬಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದರು. ಅದರಂತೆಯೇ ಇದೀಗ ನಾಯಕನಾಗಿ ಕೆಕೆಆರ್ ಎದುರು ಕೊನೆಯ ಬಾರಿಗೆ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದರು.
ಪಂದ್ಯ ಸೋಲಿನ ಬಳಿಕ ನಾಯಕತ್ವದಿಂದ ಕೆಳಗಿಳಿಯುತ್ತಿರುವುದಾಗಿ ವಿರಾಟ್ ಮತ್ತೊಮ್ಮೆ ಪುನರುಚ್ಚರಿಸಿದ್ದಲ್ಲದೇ ಆರ್‌ಸಿಬಿ ಮೇಲಿನ ತಮ್ಮ ಪ್ರೀತಿ ಹಾಗೂ ಅಭಿಮಾನವನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ.
ಈ ಆವೃತ್ತಿಯ ಬಳಿಕ ನಾಯಕನಾಗಿ ಮುಂದುವರೆಯುವುದಿಲ್ಲ, ಬದಲಾಗಿ ಆರ್‌ಸಿಬಿ ಪರ ಕೇವಲ ಆಟಗಾರನಾಗಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಆರ್‌ಸಿಬಿಗಾಗಿ ನಾನು 120% ಶ್ರಮ ವಹಿಸಿದ್ದೇನೆ. ಆರ್‌ಸಿಬಿ ಪರ ನಿಷ್ಠೆಯಿಂದ ಇದ್ದೇನೆ. ಐಪಿಎಲ್‌ನಲ್ಲಿ ಆಡುವವರೆಗೂ ಆರ್‌ಸಿಬಿ ಪರವೇ ಆಡುತ್ತೇನೆ ಎಂದಿದ್ದಾರೆ.
ವಿರಾಟ್ ಕೊಹ್ಲಿ ನಾಯಕರಾದ ಬಳಿಕ ಆರ್‌ಸಿಬಿ 2015ರಲ್ಲಿ ಪ್ಲೇ ಆಫ್ ಹಂತ ತಲುಪಿತ್ತು. ಇನ್ನು 2016ರಲ್ಲಿ ಫೈನಲ್ ಪ್ರವೇಶಿಸಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇನ್ನು 2020 ಹಾಗೂ 2021ರಲ್ಲೂ ಪ್ಲೇ ಆಫ್ ಪ್ರವೇಶಿಸಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಸೋತು ಹೋರಾಟ ಮುಗಿಸಿತ್ತು.
(Photo source- iplt20.com)
ವಿರಾಟ್ ಕೊಹ್ಲಿ ಆರ್‌ಸಿಬಿ ತಂಡವನ್ನು ಐಪಿಎಲ್‌ನಲ್ಲಿ ಒಟ್ಟು 140 ಬಾರಿ ಮುನ್ನಡೆಸಿದ್ದಾರೆ. ಇದರಲ್ಲಿ ಆರ್‌ಸಿಬಿ 66 ಗೆಲುವು ಹಾಗೂ 70 ಸೋಲು ಕಂಡಿದೆ. ಇನ್ನು 4 ಪಂದ್ಯಗಳಲ್ಲಿ ಫಲಿತಾಂಶ ಹೊರಬಿದ್ದಿಲ್ಲ.
(Photo source- iplt20.com)