IPL 2021 ಕ್ವಾಲಿಫೈ ಲೆಕ್ಕಾಚಾರ: KKR, ಪಂಜಾಬ್, ರಾಜಸ್ಥಾನ & ಮುಂಬೈಗೆ ಈಗಲೂ ಇದೆ ಪ್ಲೇ-ಆಫ್‌ಗೇರುವ ಅವಕಾಶ..!

First Published Oct 4, 2021, 6:54 PM IST

ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ದಿನದಿಂದ ದಿನಕ್ಕೆ ರೋಚಕತೆ ಹೆಚ್ಚುತ್ತಾ ಸಾಗಿತ್ತು, ಇನ್ನು ಕೆಲವೇ ಕೆಲವು ಲೀಗ್ ಹಂತದ ಪಂದ್ಯಗಳು ಬಾಕಿ ಉಳಿದಿವೆ. ಆರ್‌ಸಿಬಿ ಸೇರಿದಂತೆ ಈಗಾಗಲೇ ಮೂರು ತಂಡಗಳು ಪ್ಲೇ ಆಫ್‌ ಸ್ಥಾನ ಖಚಿತ ಪಡಿಸಿಕೊಂಡಿದ್ದು, 4ನೇ ಸ್ಥಾನಕ್ಕೆ ನಾಲ್ಕು ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿಯಿದೆ. ಹೀಗಾಗಿ ಯಾವೆಲ್ಲಾ ತಂಡಗಳಿಗೆ ಇನ್ನೂ ಪ್ಲೇ ಆಫ್‌ಗೇರುವ ಅವಕಾಶವಿದೆ ಎನ್ನುವ ಲೆಕ್ಕಾಚಾರ ಇಲ್ಲಿದೆ ನೋಡಿ.
 

14ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿವೆ.

ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಲಾ 9 ಪಂದ್ಯಗಳನ್ನು ಗೆಲ್ಲುವ ಮೂಲಕ ಮೊದಲಿಗೆ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದ್ದರೆ, ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್‌ ಕಿಂಗ್ಸ್‌ ತಂಡವನ್ನು ಮಣಿಸುವ ಮೂಲಕ ಮೂರನೇ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದೆ.

ಇದೀಗ ಪ್ಲೇ ಆಫ್‌ಗೇರಲು ಇನ್ನೊಂದು ತಂಡಕ್ಕೆ ಅವಕಾಶವಿದ್ದು, ಈ ಸ್ಥಾನ ಪಡೆಯಲು ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌, ರಾಜಸ್ಥಾನ ರಾಯಲ್ಸ್‌, ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತ ನೈಟ್ ರೈಡರ್ಸ್‌ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.

ಕೋಲ್ಕತ ನೈಟ್‌ ರೈಡರ್ಸ್‌:

ಐಪಿಎಲ್‌ ಮಾಜಿ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್(KKR) ತಂಡವು 6 ಗೆಲುವುಗಳೊಂದಿಗೆ 12 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಸದ್ಯ 4ನೇ ಸ್ಥಾನದಲ್ಲಿದೆ. ಕೆಕೆಆರ್ ತಂಡಕ್ಕೆ ಲೀಗ್‌ ಹಂತದಲ್ಲಿ ಇನ್ನೊಂದು ಪಂದ್ಯ ಬಾಕಿ ಉಳಿದಿದ್ದು, ಗುರುವಾರ(ಅ.7) ರಾಜಸ್ಥಾನ ರಾಯಲ್ಸ್ ವಿರುದ್ದ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಇಯಾನ್ ಮಾರ್ಗನ್ ಪಡೆ ಗೆಲುವಿನ ನಗೆ ಬೀರಿದರೆ ಪ್ಲೇ ಆಫ್‌ಗೆ ಅಧಿಕೃತವಾಗಿ ಲಗ್ಗೆಯಿಡಲಿದೆ. ಒಂದು ವೇಳೆ ಸೋತರೇ ಇತರೆ ತಂಡಗಳ ಫಲಿತಾಂಶದ ಮೇಲೆ ಕೆಕೆಆರ್ ತಂಡದ ಪ್ಲೇ ಆಫ್‌ ಭವಿಷ್ಯ ನಿರ್ಧಾರವಾಗಲಿದೆ.

ಪಂಜಾಬ್ ಕಿಂಗ್ಸ್‌

ಕೆ.ಎಲ್‌. ರಾಹುಲ್‌ (KL Rahul) ನೇತೃತ್ವದ ಪಂಜಾಬ್ ಕಿಂಗ್ಸ್‌ ತಂಡವು 10 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಗುರುವಾರ(ಅ.7) ಪಂಜಾಬ್‌ ಕಿಂಗ್ಸ್‌ (Punjab Kings) ತಂಡವು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಪಂಜಾಬ್ ಭಾರೀ ಅಂತರದಲ್ಲಿ ಗೆಲುವು ಸಾಧಿಸಬೇಕು. ಇದರ ಜತೆಗೆ ಕೆಕೆಆರ್, ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಇನ್ನುಳಿದ ಪಂದ್ಯಗಳಲ್ಲಿ ಸೋಲು ಕಂಡರೆ ಪಂಜಾಬ್‌ ಪ್ಲೇ ಆಫ್‌ಗೇರಲಿದೆ.
 

ರಾಜಸ್ಥಾನ ರಾಯಲ್ಸ್‌

ಸಂಜು ಸ್ಯಾಮ್ಸನ್‌ (Sanju Samson) ನೇತೃತ್ವದ ರಾಜಸ್ಥಾನ ರಾಯಲ್ಸ್ (Rajasthan Royals) ತಂಡವು 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು, ಲೀಗ್ ಹಂತದಲ್ಲಿ ಇನ್ನೂ 2 ಪಂದ್ಯಗಳು ಬಾಕಿ ಇವೆ. ರಾಜಸ್ಥಾನ ರಾಯಲ್ಸ್‌ (ಅ.5)ರಂದು ಮುಂಬೈ ಇಂಡಿಯನ್ಸ್ ವಿರುದ್ದ ಹಾಗೂ ಅಕ್ಟೋಬರ್ 07ರಂದು ಕೋಲ್ಕತ ನೈಟ್‌ ರೈಡರ್ಸ್‌ ವಿರುದ್ದ ಸೆಣಸಲಿದೆ.ಈ 2 ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ ರಾಯಲ್ಸ್‌ ಪ್ಲೇ ಆಫ್‌ಗೇರಲಿದೆ. ಒಂದು ವೇಳೆ ಒಂದು ಪಂದ್ಯ ಸೋತರೆ ಇನ್ನುಳಿದ ತಂಡಗಳ ಫಲಿತಾಂಶದ ಮೇಲೆ ರಾಯಲ್ಸ್ ಪ್ಲೇ ಆಫ್‌ ಭವಿಷ್ಯ ನಿರ್ಧಾರವಾಗಲಿದೆ.
 

ಮುಂಬೈ ಇಂಡಿಯನ್ಸ್‌

ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ (Mumbai Indians) ಖಾತೆಯಲ್ಲಿ ಕೂಡಾ 10 ಅಂಕಗಳಿದ್ದು ಲೀಗ್‌ ಹಂತದಲ್ಲಿ ಇನ್ನೆರಡು ಪಂದ್ಯಗಳು ಆಡಲು ಬಾಕಿ ಇವೆ. ಅಕ್ಟೋಬರ್ 05ರಂದು ರಾಜಸ್ಥಾನ ರಾಯಲ್ಸ್ ವಿರುದ್ದ ಹಾಗೂ ಅಕ್ಟೋಬರ್ 08ರಂದು ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ದ ರೋಹಿತ್ ಪಡೆ ಕಾದಾಡಲಿದೆ. ಈ ಎರಡು ಪಂದ್ಯಗಳನ್ನು ಮುಂಬೈ ಭಾರೀ ಅಂತರದಲ್ಲಿ ಜಯಿಸಬೇಕು ಹಾಗೂ ಕೆಕೆಆರ್‌ ಕೊನೆಯ ಪಂದ್ಯದಲ್ಲಿ ಸೋಲು ಕಂಡರೆ ಮುಂಬೈ ಪ್ಲೇ ಆಫ್‌ಗೇರಲಿದೆ. ಒಂದು ವೇಳೆ ಕೆಕೆಆರ್ ಕೊನೆಯ ಪಂದ್ಯ ಜಯಿಸಿದರೆ ಮುಂಬೈ ಪ್ಲೇ ಆಫ್‌ ಕನಸು ಭಗ್ನವಾಗಲಿದೆ.
 

click me!