ಯುಎಇನಲ್ಲಿ 14ನೇ ಆವತ್ತಿಯ ಐಪಿಎಲ್ ಟೂರ್ನಿ ಆರಂಭವಾಗಿದ್ದು, ಈಗಾಗಲೇ ಜಗತ್ತಿನಾದ್ಯಂತ ಟಿ20 ಕ್ರಿಕೆಟ್ ಜ್ವರ ಶುರುವಾಗಿದೆ. ಈ ಕ್ರಿಕೆಟ್ ಕ್ರೇಜ್ ಇನ್ನು ಕೆಲವೇ ದಿನಗಳಲ್ಲಿ ಮತ್ತಷ್ಟು ಡಬ್ಬಲ್ ಆಗಲಿದ್ದು, ಅಕ್ಟೋಬರ್ 17ರಿಂದ ಯುಎಇ ಹಾಗೂ ಓಮನ್‌ನಲ್ಲಿ 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಚಾಲನೆ ಸಿಗಲಿದೆ.
2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ದುಬೈ, ಅಬುಧಾಬಿ, ಶಾರ್ಜಾ ಹಾಗೂ ಮಸ್ಕತ್ ಹೀಗೆ ನಾಲ್ಕು ಮೈದಾನಗಳಲ್ಲಿ ಜರುಗಲಿದೆ. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಶೇ.70% ಪ್ರೇಕ್ಷಕರಿಗೆ ಮೈದಾನ ಪ್ರವೇಶಿಸಲು ಅವಕಾಶ ಮಾಡಿಕೊಡುವುದಾಗಿ ಘೋಷಿಸಿದೆ.
ಜಾಗತಿಕ ಚುಟುಕು ಕ್ರಿಕೆಟ್ ಹಬ್ಬ ಎಂದೇ ಬಿಂಬಿತವಾಗಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ. ಈಗಾಗಲೇ ಎಂಟು ತಂಡಗಳು ನೇರ ಅರ್ಹತೆಯನ್ನು ಪಡೆದಿದ್ದರೆ, ಇನ್ನುಳಿದ 8 ತಂಡಗಳು ಕ್ವಾಲಿಫೈಯರ್ ಪಂದ್ಯಗಳನ್ನಾಡಿ 2 ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಲಾ 2 ತಂಡಗಳು ಸೂಪರ್ 12 ಹಂತಕ್ಕೆ ಪ್ರವೇಶ ಪಡೆಯಲಿವೆ.
ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯು ಮಸ್ಕತ್‌ನಲ್ಲಿ ಅಕ್ಟೋಬರ್ 17ರಿಂದ ಆರಂಭವಾಗಲಿದ್ದು, ಸೂಪರ್ 12 ಹಂತದ ಪಂದ್ಯಗಳು ಅಕ್ಟೋಬರ್ 23ರಿಂದ ಪ್ರಾರಂಭವಾಗಲಿದೆ. ಇನ್ನು ನವೆಂಬರ್ 14ರಂದು ಫೈನಲ್ ಪಂದ್ಯ ಜರುಗಲಿದೆ. ಪಂದ್ಯಗಳನ್ನು ವೀಕ್ಷಿಸಲು https://www.t20worldcup.com/tickets ವೆಬ್‌ಸೈಟ್ ಮೂಲಕ ಟಿಕೆಟ್ ಖರೀದಿಸಬಹುದಾಗಿದೆ ಎಂದು ಐಸಿಸಿ ತಿಳಿಸಿದೆ.
ಯುಎಇನಲ್ಲಿ ಮೈದಾನ ಸಾಮರ್ಥ್ಯದ ಗರಿಷ್ಠ 70% ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ಸಿಕ್ಕಿದೆ. ಅಬುಧಾಬಿಯಲ್ಲೂ ಸಾಮಾಜಿಕ ಅಂತರ ಕಾಯ್ದುಕೊಂಡು ಪಂದ್ಯ ವೀಕ್ಷಿಸಲು ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದೆ. ಇನ್ನು ಓಮನ್‌ನಲ್ಲಿ ತಾತ್ಕಾಲಿಕವಾಗಿ ಮೈದಾನದ ಮೂಲ ಸೌಕರ್ಯವನ್ನು ಅಭಿವೃದ್ದಿ ಪಡಿಸಲಾಗಿದ್ದು, 3,000 ಪ್ರೇಕ್ಷಕರು ಏಕಕಾಲದಲ್ಲಿ ಪಂದ್ಯಾವಳಿಗಳನ್ನು ವೀಕ್ಷಿಸಬಹುದಾಗಿದೆ.
ಭಾರತದಲ್ಲಿ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸಲು ಬಿಸಿಸಿಐ ಆತಿಥ್ಯದ ಹಕ್ಕನ್ನು ಪಡೆದುಕೊಂಡಿತ್ತು. ಆದರೆ ಭಾರತದಲ್ಲಿ ಕೋವಿಡ್ ಎರಡನೇ ಅಲೆ ಬಿಗಡಾಯಿಸಿದ್ದರಿಂದ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಯಿತು. ಟಿ20 ವಿಶ್ವಕಪ್ ಟೂರ್ನಿಯು ಯುಎಇನಲ್ಲಿ ನಡೆದರೂ ಬಿಸಿಸಿಐ ಆತಿಥ್ಯದಲ್ಲೇ ಈ ಟೂರ್ನಿ ಜರುಗಲಿದೆ.
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಅಕ್ಟೋಬರ್ 24ರಂದು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ಪಾಕಿಸ್ತಾನ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.