14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ ರಾಯಲ್ಸ್ ತಂಡವನ್ನು ಕೇವಲ 90 ರನ್‌ಗಳಿಗೆ ನಿಯಂತ್ರಿಸಿದ್ದ ಮುಂಬೈ ಇಂಡಿಯನ್ಸ್, ಈ ಸಾಧಾರಣ ಗುರಿಯನ್ನು 8.2 ಓವರ್‌ಗಳಲ್ಲಿ ತಲುಪುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಸದ್ಯ ಮುಂಬೈ ಇಂಡಿಯನ್ಸ್ ತಂಡವು 13 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 7 ಸೋಲುಗಳೊಂದಿಗೆ 12 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು, ಕೊನೆಯ ಪಂದ್ಯವನ್ನು ಭಾರೀ ಅಂತರದಲ್ಲಿ ಗೆದ್ದರೆ, ಇದೇ ವೇಳೆ ಕೆಕೆಆರ್ ತನ್ನ ಕೊನೆಯ ಪಂದ್ಯದಲ್ಲಿ ಸೋಲು ಕಂಡರೆ ಮುಂಬೈ ಇಂಡಿಯನ್ಸ್ ಪ್ಲೇ ಆಫ್‌ಗೇರಲಿದೆ.
ಇನ್ನು ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ 13 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 22 ರನ್ ಸಿಡಿಸಿದರೂ. ಇದೇ ವೇಳೆ ಟಿ20 ಕ್ರಿಕೆಟ್‌ನಲ್ಲಿ 400 ಸಿಕ್ಸರ್ ಬಾರಿಸಿದ ಭಾರತದ ಮೊದಲ ಕ್ರಿಕೆಟಿಗ ಎನ್ನುವ ದಾಖಲೆಯನ್ನು ರೋಹಿತ್ ಶರ್ಮಾ ಬರೆದಿದ್ದಾರೆ. ಭಾರತೀಯರ ಪೈಕಿ ಸುರೇಶ್ ರೈನಾ (325 ಸಿಕ್ಸರ್) 2ನೇ ಸ್ಥಾನದಲ್ಲಿದ್ದಾರೆ.
ಹೌದು ರಾಜಸ್ಥಾನ ರಾಯಲ್ಸ್ ವಿರುದ್ಧ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ರೋಹಿತ್ ಈ ಮೈಲಿಗಲ್ಲು ತಲುಪಿದರು. 355 ಟಿ20 ಪಂದ್ಯಗಳನ್ನು ಆಡಿರುವ ರೋಹಿತ್ 400 ಸಿಕ್ಸರ್ ಸಿಡಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ 7ನೇ ಸ್ಥಾನದಲ್ಲಿದ್ದಾರೆ.
ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಇದುವರೆಗೂ ಒಟ್ಟು 448 ಟಿ20 ಪಂದ್ಯಗಳನ್ನಾಡಿ 1,042 ಸಿಕ್ಸರ್ ಬಾರಿಸುವ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಇನ್ನುಳಿದಂತೆ ಕೀರನ್ ಪೊಲ್ಲಾರ್ಡ್(758), ಆಂಡ್ರೆ ರಸೆಲ್(510), ಬ್ರೆಂಡನ್ ಮೆಕ್ಕಲಂ(485), ಶೇನ್ ವ್ಯಾಟ್ಸನ್(467) ಹಾಗೂ ಎಬಿ ಡಿವಿಲಿಯರ್ಸ್(434) ಟಿ20 ಕ್ರಿಕೆಟ್‌ನಲ್ಲಿ 400+ ಸಿಕ್ಸರ್ ಬಾರಿಸಿದ ಇತರೆ ಬ್ಯಾಟ್ಸ್‌ಮನ್‌ಗಳೆನಿಸಿದ್ದಾರೆ.
ಇನ್ನು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ 111 ಪಂದ್ಯಗಳನ್ನಾಡಿ 133 ಸಿಕ್ಸರ್ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಚಚ್ಚಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ 147 ಸಿಕ್ಸರ್ ಸಿಡಿಸಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.