ಟೀಂ ಇಂಡಿಯಾ ಆಟಗಾರ್ತಿ ವೇದಾ ಕೃಷ್ಣಮೂರ್ತಿಗೆ ಪ್ರೇಮ ನಿವೇದನೆ ಮಾಡಿದ ಕ್ರಿಕೆಟಿಗ; ಅರ್ಜುನ್‌ ಪ್ರಫೋಸ್‌ಗೆ ವೇದಾ ಕ್ಲೀನ್‌ ಬೌಲ್ಡ್

First Published Sep 12, 2022, 2:19 PM IST

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಅನುಭವಿ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕರ್ನಾಟಕದ ಬ್ಯಾಟರ್ ಅರ್ಜುನ್ ಹೊಯ್ಸಳ ಹಾಗೂ ವೇದಾ ಕೃಷ್ಣಮೂರ್ತಿ ಎಂಗೇಜ್‌ ಆಗಿದ್ದಾರೆ. ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್‌ ಇಲ್ಲಿದೆ ನೋಡಿ

ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಇದೀಗ ಹೊಸ ಇನಿಂಗ್ಸ್‌ ಆರಂಭಿಸಲು ಸಜ್ಜಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಕೊಂಚ ದೂರವೇ ಉಳಿದಿರುವ ವೇದಾ ಕೃಷ್ಣಮೂರ್ತಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಹೌದು, ಈ ವಿಚಾರವನ್ನು ಸ್ವತಃ ವೇದಾ ಕೃಷ್ಣಮೂರ್ತಿ ಹಾಗೂ ಅವರನ್ನು ವಿವಾಹವಾಗಲಿರುವ ಕರ್ನಾಟಕದ ಬ್ಯಾಟರ್ ಅರ್ಜುನ್ ಹೊಯ್ಸಳ ಖಚಿತಪಡಿಸಿದ್ದಾರೆ.  

ವೇದಾ ಕೃಷ್ಣಮೂರ್ತಿಯನ್ನು ವರಿಸಲಿರುವ ಅರ್ಜುನ್ ಹೊಯ್ಸಳ ಕೂಡಾ, ಓರ್ವ ಕ್ರಿಕೆಟಿಗನಾಗಿದ್ದು, ಮೊಣಕಾಲು ಮಂಡಿಯೂರಿ ರಿಂಗ್ ಮುಂದಿಟ್ಟು ಮುದ್ದಾಗಿ ಪ್ರೇಮ ನಿವೇದನೆ ಮಾಡಿದ್ದಾರೆ. ಇದಕ್ಕೆ ವೇದಾ ಎಸ್‌ ಎಂದರು ಎಂದು ಅರ್ಜುನ್‌ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅರ್ಜುನ್ ಹೊಯ್ಸಳ ಹಾಗೂ ವೇದಾ ಕೃಷ್ಣಮೂರ್ತಿ ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ 80 ಸಾವಿರಕ್ಕೂ ಅಧಿಕ ಲೈಕ್ಸ್‌ಗಳು ವ್ಯಕ್ತವಾಗಿವೆ. ಇದಷ್ಟೇ ಅಲ್ಲದೇ ಕರ್ನಾಟಕ ಕ್ರಿಕೆಟ್ ತಂಡದ ರವಿಕುಮಾರ್ ಸಮರ್ಥ್ ಸೇರಿದಂತೆ ಹಲವು ಕ್ರಿಕೆಟಿಗರು ಈ ಜೋಡಿಗೆ ಶುಭ ಹಾರೈಸಿದ್ದಾರೆ.
 

ವೇದಾ ಕೃಷ್ಣಮೂರ್ತಿ, ಭಾರತ ಮಹಿಳಾ ಕ್ರಿಕೆಟ್ ತಂಡದ ಪರ 48 ಏಕದಿನ ಹಾಗೂ 76 ಟಿ20 ಪಂದ್ಯಗಳನ್ನಾಡಿದ್ದಾರೆ. ಇದಷ್ಟೇ ಅಲ್ಲದೇ 2017ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಹಾಗೂ 2020ರಲ್ಲಿ ಅಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್‌ ಪ್ರವೇಶಿಸಿದ್ದ ಭಾರತ ತಂಡದ ಪ್ರಮುಖ ಸದಸ್ಯರಲ್ಲಿ ಒಬ್ಬರೆನಿಸಿಕೊಂಡಿದ್ದರು. 

2020ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಬಳಿಕ ವೇದಾ ಕೃಷ್ಣಮೂರ್ತಿ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಇನ್ನು 2017 ಹಾಗೂ 2018ರಲ್ಲಿ ಬಿಗ್‌ಬ್ಯಾಶ್‌ ಟೂರ್ನಿಯಲ್ಲಿ ಹೋಬಾರ್ಟ್‌ ಹರಿಕೇನ್ ತಂಡವನ್ನು ಪ್ರತಿನಿಧಿಸಿದ್ದರು.

ಇದಷ್ಟೇ ಅಲ್ಲದೇ, ಇತ್ತೀಚೆಗಷ್ಟೇ ಮುಕ್ತಾಯವಾದ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಗೇಮ್ಸ್‌ ಕ್ರೀಡಾಕೂಟದ ಸಂದರ್ಭದಲ್ಲಿ ವೇದಾ ಕೃಷ್ಣಮೂರ್ತಿ ಟಿವಿ ವೀಕ್ಷಕ ವಿವರಣೆಗಾರಿಕೆ ಮೂಲಕ ಗಮನ ಸೆಳೆದಿದ್ದರು.

ಇನ್ನು ವೇದಾ ಅವರನ್ನು ವರಿಸಲಿರುವ ಅರ್ಜುನ್ ಹೊಯ್ಸಳ, 2016ರಲ್ಲಿ ಕರ್ನಾಟಕ ಪರ ಏಕೈಕ ರಣಜಿ ಪಂದ್ಯವನ್ನಾಡಿದ್ದರು. ಇನ್ನು 2019ರಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅರ್ಜುನ್ ಹೊಯ್ಸಳ, ಶಿವಮೊಗ್ಗ ಲಯನ್ಸ್‌ ತಂಡವನ್ನು ಪ್ರತಿನಿಧಿಸಿದ್ದರು.

32 ವರ್ಷದ ಎಡಗೈ ಆರಂಭಿಕ ಬ್ಯಾಟರ್‌, ಪ್ರಥಮ ದರ್ಜೆ ಪಂದ್ಯವನ್ನಷ್ಟೇ ಆಡಲು ಯಶಸ್ವಿಯಾಗಿದ್ದು, ಐಪಿಎಲ್‌ ಅಥವಾ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಇದೀಗ ವೇದಾ-ಅರ್ಜುನ್ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಈ ಜೋಡಿಗೆ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಪರವಾಗಿ ಏಷ್ಯಾನೆಟ್ ಕನ್ನಡ.ಕಾಂ ಶುಭ ಹಾರೈಸುತ್ತಿದೆ.
 

click me!