World Cup 2023: ವಿಶ್ವಕಪ್ ಟೂರ್ನಿಗೆ ಇಂದೇ ಭಾರತ ತಂಡ ಪ್ರಕಟ..? ರೋಹಿತ್ ಪಡೆಯಲ್ಲಿ ಯಾರಿಗೆಲ್ಲಾ ಸ್ಥಾನ?

First Published | Sep 3, 2023, 12:05 PM IST

ಬೆಂಗಳೂರು: ಬಹುನಿರೀಕ್ಷಿತ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿದ್ದು, ಮುಂಬರುವ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ಟೂರ್ನಿ ನಡೆಯಲಿದೆ. ಇಂದು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್‌, ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಅಂತಿಮಗೊಳಿಸಲು ಟೀಂ ಮ್ಯಾನೇಜ್‌ಮೆಂಟ್ ಜತೆ ಚರ್ಚಿಸಲು ಲಂಕಾಗೆ ಹಾರಿದ್ದಾರೆ.

ವಿಶ್ವಕಪ್ ಸಂಭಾವ್ಯ ತಂಡದಲ್ಲಿ ಸಂಜು ಸ್ಯಾಮ್ಸನ್, ಯುಜುವೇಂದ್ರ ಚಹಲ್ ಹಾಗೂ ಪ್ರಸಿದ್ಧ್ ಕೃಷ್ಣಗೆ ನಿರಾಸೆ ಎದುರಾಗಲಿದೆ ಎನ್ನಲಾಗಿದೆ. ಟೀಂ ಇಂಡಿಯಾ ಸದ್ಯ ಏಷ್ಯಾಕಪ್ ಟೂರ್ನಿಯನ್ನಾಡಲು ಲಂಕಾ ಪ್ರವಾಸದಲ್ಲಿದೆ. ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಸಂಭಾವ್ಯ ತಂಡ ಹೀಗಿದೆ ನೋಡಿ
 

1. ರೋಹಿತ್ ಶರ್ಮಾ:

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಹಜವಾಗಿಯೇ ಭಾರತ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಐಪಿಎಲ್‌ನಲ್ಲಿ 5 ಬಾರಿ ಮುಂಬೈ ಇಂಡಿಯನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿರುವ ಹಿಟ್‌ಮ್ಯಾನ್‌ ಮೇಲೆ ದಶಕದ ಬಳಿಕ ಐಸಿಸಿ ಟ್ರೋಫಿ ಗೆಲ್ಲಿಸಬೇಕಾದ ಗುರುತರ ಹೊಣೆಗಾರಿಕೆ ಇದೆ.
 

2. ಶುಭ್‌ಮನ್ ಗಿಲ್‌:

ಪಂಜಾಬ್ ಮೂಲದ ಪ್ರತಿಭಾನ್ವಿತ ಬ್ಯಾಟರ್ ಶುಭ್‌ಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ಅಬ್ಬರದ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಐಪಿಎಲ್‌ನಲ್ಲಿ ಆರೆಂಜ್‌ ಕ್ಯಾಪ್ ಗೆದ್ದಿದ್ದ ಗಿಲ್, ಏಷ್ಯಾಕಪ್‌ನಲ್ಲಿ ಫಾರ್ಮ್‌ಗೆ ಮರಳಲು ಎದುರು ನೋಡುತ್ತಿದ್ದು, ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಜತೆ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ ಎನಿಸಿದೆ.

Tap to resize

3. ವಿರಾಟ್ ಕೊಹ್ಲಿ:

ಟೀಂ ಇಂಡಿಯಾ ರನ್‌ ಮಷೀನ್ ವಿರಾಟ್ ಕೊಹ್ಲಿ, ತಂಡದ ಪಾಲಿನ ಬ್ಯಾಟಿಂಗ್ ಆಪತ್ಬಾಂಧವ ಎನಿಸಿಕೊಂಡಿದ್ದಾರೆ. ಭಾರತ ತಂಡವು ಏಕದಿನ ವಿಶ್ವಕಪ್ ಗೆಲ್ಲಬೇಕಿದ್ದರೇ, ವಿರಾಟ್ ಕೊಹ್ಲಿ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ.
 

4. ಶ್ರೇಯಸ್ ಅಯ್ಯರ್:

ಮುಂಬೈ ಮೂಲದ ಮತ್ತೋರ್ವ ಪ್ರತಿಭಾನ್ವಿತ ಬ್ಯಾಟರ್ ಶ್ರೇಯಸ್ ಅಯ್ಯರ್, ಗಾಯದ ಸಮಸ್ಯೆಯ ಬಳಿಕ ಸಂಪೂರ್ಣ ಫಿಟ್ನೆಸ್ ಸಾಧಿಸಿ ಏಕದಿನ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. 4ನೇ ಕ್ರಮಾಂಕದಲ್ಲಿ ಅಯ್ಯರ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

5. ಸೂರ್ಯಕುಮಾರ್ ಯಾದವ್:

ಟಿ20 ಕ್ರಿಕೆಟ್‌ನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸುವ ಸೂರ್ಯಕುಮಾರ್ ಯಾದವ್ ಅವರು ಏಕದಿನ ಕ್ರಿಕೆಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದಾರೆ. ಹೀಗಿದ್ದೂ ಶ್ರೇಯಸ್ ಅಯ್ಯರ್‌ಗೆ ಬ್ಯಾಕ್‌ಅಪ್ ಆಟಗಾರನಾಗಿ ಸೂರ್ಯ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎನಿಸಿದೆ.

6. ಕೆ ಎಲ್ ರಾಹುಲ್:

ಭಾರತ ತಂಡದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟರ್ ರೂಪದಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಸದ್ಯ ಸಣ್ಣ ಪ್ರಮಾಣದ ಗಾಯದ ಸಮಸ್ಯೆಯಿಂದಾಗಿ ಏಷ್ಯಾಕಪ್ ಟೂರ್ನಿಯ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿರುವ ರಾಹುಲ್, ಸದ್ಯದಲ್ಲಿಯೇ ಭಾರತ ತಂಡ ಕೂಡಿಕೊಳ್ಳಲಿದ್ದಾರೆ. 

7. ಇಶಾನ್ ಕಿಶನ್:

ಟೀಂ ಇಂಡಿಯಾದ ಮತ್ತೋರ್ವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಕೂಡಾ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎನಿಸಿದೆ. ಇಶಾನ್ ಕಿಶನ್‌, ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದರು. ಇನ್ನು ಸಂಜು ಸ್ಯಾಮ್ಸನ್‌ಗೆ ಮತ್ತೊಮ್ಮೆ ನಿರಾಸೆ ಖಚಿತ ಎನ್ನಲಾಗುತ್ತಿದೆ.

8. ಹಾರ್ದಿಕ್ ಪಾಂಡ್ಯ:

ಟೀಂ ಇಂಡಿಯಾ ಉಪನಾಯಕ ಹಾಗೂ ಸ್ಟಾರ್ ಆಲ್ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಮೇಲೆ ಕೂಡಾ ಸಾಕಷ್ಟು ನಿರೀಕ್ಷೆಗಳಿವೆ. ಪಾಂಡ್ಯ ಟೀಂ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಆಧಾರಸ್ತಂಭವಾಗಬಲ್ಲ ಅಮೂಲ್ಯ ಆಟಗಾರನಾಗಿದ್ದಾರೆ.

9. ರವೀಂದ್ರ ಜಡೇಜಾ:

ಟೀಂ ಇಂಡಿಯಾದ ಮತ್ತೋರ್ವ ಸ್ಟಾರ್ ಆಲ್ರೌಂಡರ್ ಜಡೇಜಾ ಕೂಡಾ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿರುವ ಆಲ್ರೌಂಡರ್. ದಶಕದ ಅನುಭವ ವಿರುವ ಜಡ್ಡು ಟೀಂ ಇಂಡಿಯಾ ಪಾಲಿಗೆ ಪ್ರಮುಖ ಆಲ್ರೌಂಡ್ ಅಸ್ತ್ರ ಎನಿಸಿಕೊಂಡಿದ್ದಾರೆ.

10.ಅಕ್ಷರ್ ಪಟೇಲ್:

ಟೀಂ ಇಂಡಿಯಾ ಬೌಲಿಂಗ್ ಆಲ್ರೌಂಡರ್ ಆಗಿರುವ ಅಕ್ಷರ್ ಪಟೇಲ್, ಜಡೇಜಾಗೆ ಬ್ಯಾಕ್‌ಅಪ್ ಆಟಗಾರನ ರೀತಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಅಕ್ಷರ್ ಪಟೇಲ್‌ ಸಿಕ್ಕ ಅವಕಾಶದಲ್ಲಿ ತಾವೊಬ್ಬ ಉಪಯುಕ್ತ ಆಲ್ರೌಂಡರ್ ಎನ್ನುವುದನ್ನು ಸಾಬೀತು ಮಾಡಿ ತೋರಿಸಿದ್ದಾರೆ.

11. ಶಾರ್ದೂಲ್ ಠಾಕೂರ್:

ಟೀಂ ಇಂಡಿಯಾ ಬೌಲಿಂಗ್ ಆಲ್ರೌಂಡರ್ ಆಗಿರುವ ಶಾರ್ದೂಲ್ ಠಾಕೂರ್, ಹಾರ್ದಿಕ್ ಪಾಂಡ್ಯಗೆ ಬ್ಯಾಕ್‌ಅಪ್ ರೀತಿಯಲ್ಲಿ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ. ಡೆತ್ ಓವರ್‌ನಲ್ಲಿ ಪರಿಣಾಮಕಾರಿ ದಾಳಿ ಜತೆಗೆ ಕೆಳಕ್ರಮಾಂಕದಲ್ಲೂ ಬ್ಯಾಟಿಂಗ್‌ನಲ್ಲಿ ಆಸರೆಯಾಗುವ ಕ್ಷಮತೆ ಶಾರ್ದೂಲ್‌ಗಿದೆ.

12. ಜಸ್ಪ್ರೀತ್ ಬುಮ್ರಾ:

ಟೀಂ ಇಂಡಿಯಾ ವೇಗದ ಬೌಲಿಂಗ್ ನೇತೃತ್ವ ವಹಿಸಿರುವ ಬುಮ್ರಾ ಮೇಲೆ ಕೂಡಾ ಸಾಕಷ್ಟು ನಿರೀಕ್ಷೆಗಳಿವೆ. ಕರಾರುವಕ್ಕಾದ ಯಾರ್ಕರ್ ಹಾಗೂ ಬೌನ್ಸರ್‌ ಮೂಲಕ ಎದುರಾಳಿ ಬ್ಯಾಟರ್ ಕಾಡಲು ಬುಮ್ರಾ ತುದಿಗಾಲಿನಲ್ಲಿ ನಿಂತಿದ್ದಾರೆ.

13. ಮೊಹಮ್ಮದ್ ಶಮಿ:

ಟೀಂ ಇಂಡಿಯಾದ ಅನುಭವಿ ವೇಗಿ ಶಮಿ, ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಅಪಾಯಕಾರಿಯಾಗಬಲ್ಲ ಬೌಲರ್ ಎನಿಸಿದ್ದಾರೆ. ಶಮಿ ಅನುಭವ ತಂಡಕ್ಕೆ ಮತ್ತಷ್ಟು ಬಲ ತಂದುಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ.
 

14. ಮೊಹಮ್ಮದ್ ಸಿರಾಜ್:

ಹೈದರಾಬಾದ್ ಮೂಲಕ ಮಾರಕ ವೇಗಿ ಮೊಹಮ್ಮದ್ ಸಿರಾಜ್ ಸದ್ಯ ಭಾರತ ತಂಡದ ಪ್ರಮುಖ ವೇಗದ ಅಸ್ತ್ರ ಎನಿಸಿಕೊಂಡಿದ್ದಾರೆ. ಆರ್‌ಸಿಬಿ ವೇಗಿ ಸಿರಾಜ್ ಅಪಾಯಕಾರಿ ಬೌಲರ್ ಎನ್ನುವುದರಲ್ಲಿ ಯಾರಿಗೂ ಯಾವುದೇ ಸಂದೇಹವಿಲ್ಲ.
 

15. ಕುಲ್ದೀಪ್ ಯಾದವ್:

ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲಿರುವ ಏಕೈಕ ತಜ್ಞ ಸ್ಪಿನ್ನರ್ ಎಂದರೆ ಅದು ಕುಲ್ದೀಪ್ ಯಾದವ್. ಮಣಿಕಟ್ಟು ಲೆಗ್‌ಸ್ಪಿನ್ನರ್ ಕುಲ್ದೀಪ್ ಯಾದವ್, ಭಾರತ ಪಿಚ್‌ನಲ್ಲಿ ಪರಿಣಾಮಕಾರಿ ಬೌಲಿಂಗ್ ನಡೆಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

Latest Videos

click me!