2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮೊದಲ ತಂಡವಾಗಿ ಸೆಮೀಸ್ ಪ್ರವೇಶಿಸಿದರೆ, ಪಾಕಿಸ್ತಾನ ಎದುರು ನ್ಯೂಜಿಲೆಂಡ್ ತಂಡವು ಸೋಲು ಕಾಣುತ್ತಿದ್ದಂತೆಯೇ ದಕ್ಷಿಣ ಆಫ್ರಿಕಾ ತಂಡ ಕೂಡಾ ಅಧಿಕೃತವಾಗಿ ಸೆಮೀಸ್‌ಗೆ ಲಗ್ಗೆಯಿಟ್ಟಿದೆ.
ಇದರ ಬೆನ್ನಲ್ಲೇ ಇಂಗ್ಲೆಂಡ್ ಎದುರು ಗೆದ್ದ ಆಸ್ಟ್ರೇಲಿಯಾ ತಂಡದ ಸೆಮೀಸ್ ಹಾದಿ ಕೂಡಾ ಇನ್ನಷ್ಟು ಸುಗಮವಾಗಿದ್ದು, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಭದ್ರವಾಗಿದ್ದು, ಇನ್ನುಳಿದ ಎರಡು ಪಂದ್ಯಗಳ ಪೈಕಿ ಇನ್ನೊಂದು ಗೆಲುವು ಕಾಂಗರೂ ಪಡೆಯ ಸೆಮೀಸ್ ಹಾದಿಯನ್ನು ಖಚಿತಪಡಿಸಲಿದೆ.
ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಸದ್ಯ 7 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 2 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಇನ್ನುಳಿದ ಎರಡು ಪಂದ್ಯಗಳಲ್ಲಿ ಆಫ್ಘಾನ್ ಹಾಗೂ ಬಾಂಗ್ಲಾದೇಶವನ್ನು ಎದುರಿಸಲಿದೆ.
ಇನ್ನು ಪಾಕ್, ಕಿವೀಸ್ ಎರಡೂ ತಂಡಗಳಿಗೆ ತಲಾ ಒಂದು ಪಂದ್ಯ ಬಾಕಿ ಇದೆ. ನ್ಯೂಜಿಲೆಂಡ್ ತನ್ನ ಕೊನೆಯ ಪಂದ್ಯವನ್ನು ನವೆಂಬರ್ 9ಕ್ಕೆ ಬೆಂಗಳೂರಲ್ಲಿ ಶ್ರೀಲಂಕಾ ವಿರುದ್ಧ ಆಡಲಿದ್ದು, ಆ ಪಂದ್ಯಕ್ಕೂ ಮಳೆ ಭೀತಿ ಇದೆ. ನ್ಯೂಜಿಲೆಂಡ್ 8 ಪಂದ್ಯಗಳ ಪೈಕಿ 4 ಗೆಲುವು 4 ಸೋಲು ಸಹಿತ 8 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಕೊನೆಯ ಪಂದ್ಯ ಗೆದ್ದರೆ ಕಿವೀಸ್ ಸೆಮೀಸ್‌ಗೇರುವ ಅವಕಾಶ ಮತ್ತಷ್ಟು ದಟ್ಟವಾಗಲಿದೆ.
ಇನ್ನೊಂದೆಡೆ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ನವೆಂಬರ್ 11ಕ್ಕೆ ಕೋಲ್ಕತಾದಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದೆ. ಎರಡೂ ತಂಡಗಳಿಗೆ ಕೊನೆಯ ಪಂದ್ಯದಲ್ಲಿ ಜಯ ಅನಿವಾರ್ಯ ಎನಿಸಿದೆ. ಪಾಕಿಸ್ತಾನ ಕೂಡಾ 8 ಪಂದ್ಯಗಳ ಪೈಕಿ 4 ಗೆಲುವು 4 ಸೋಲು ಸಹಿತ 8 ಅಂಕ ಗಳಿಸಿದ್ದು, ನೆಟ್ ರನ್‌ರೇಟ್ ಆಧಾರದಲ್ಲಿ 5ನೇ ಸ್ಥಾನದಲ್ಲಿದೆ
ಒಂದು ವೇಳೆ ಇಂಗ್ಲೆಂಡ್ ಎದುರು ಪಾಕಿಸ್ತಾನ ಸೋತರೆ, ಆಗ ಲಂಕಾ ವಿರುದ್ಧದ ಪಂದ್ಯ ರದ್ದಾದರೂ ಕಿವೀಸ್ ಸೆಮೀಸ್‌ಗೇರಲಿದೆ. ಆದರೆ ಕಿವೀಸ್ ಸೋತು, ಪಾಕ್ ಗೆದ್ದರೆ ಆಗ ಪಾಕ್ ಅಗ್ರ-4ಕ್ಕೆ ಕಾಲಿಡುವ ಸಾಧ್ಯತೆ ದಟ್ಟವಾಗಿದೆ.
ಇನ್ನು ಆಫ್ಘಾನಿಸ್ತಾನ ತಂಡವು ಸದ್ಯ 7 ಪಂದ್ಯಗಳಲ್ಲಿ 4 ಗೆಲುವು 3 ಸೋಲು ಸಹಿತ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಒಂದು ವೇಳೆ ಆಫ್ಘಾನ್ ಎರಡೂ ಪಂದ್ಯ ಜಯಿಸಿದರೆ ಆಫ್ಘಾನ್ ಕೂಡಾ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಲು ಅವಕಾಶವಿದೆ. ಆದರೆ ಆಫ್ಘಾನ್ ಕೊನೆಯ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.