ನೇಪಾಳ ಕ್ರಿಕೆಟ್ ತಂಡವು ಇದೇ ಮೊದಲ ಬಾರಿಗೆ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿದೆ. ಇದೊಂದು ರೀತಿ ನೇಪಾಳ ಕ್ರಿಕೆಟ್ ತಂಡದ ಪಾಲಿಗೆ ಐತಿಹಾಸಿಕ ಸಾಧನೆಯೇ ಸರಿ.
2023ರ ಏಷ್ಯಾಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ನೇಪಾಳ ತಂಡವು ಬಲಾಢ್ಯ ಪಾಕಿಸ್ತಾನ ವಿರುದ್ದ ಕಣಕ್ಕಿಳಿದಿತ್ತು. ಮೊದಲ ಪಂದ್ಯದಲ್ಲೇ ನೇಪಾಳ ತಂಡವು 238 ರನ್‌ಗಳ ಹೀನಾಯ ಸೋಲು ಅನುಭವಿಸಿದೆ.
ಇದು ಒಂದು ಕಡೆಯಾದರೆ, ಇನ್ನೊಂದೆಡೆ ಭಾರತ ಕ್ರಿಕೆಟಿಗರು ಪಡೆಯುವ ಸಂಬಳಕ್ಕೆ ಹೋಲಿಸಿದರೆ, ನೇಪಾಳ ಕ್ರಿಕೆಟ್ ತಂಡದ ಆಟಗಾರರ ಸಂಬಳಕ್ಕೆ ಸಾಕಷ್ಟು ಅಜಗಜಾಂತರವಿದೆ.
ಭಾರತೀಯ ಕ್ರಿಕೆಟಿಗರು ಕೇಂದ್ರೀಯ ಗುತ್ತಿಗೆ ಪಡೆದ ಆಟಗಾರರು ತಿಂಗಳಿಗೆ ಸರಿ ಸುಮಾರು ಕನಿಷ್ಠವೆಂದರೆ 8 ಲಕ್ಷ ಹಾಗೂ ಗರಿಷ್ಠವೆಂದರೆ 55 ಲಕ್ಷರುಪಾಯಿಗಳನ್ನು ಜೇಬಿಗಿಳಿಸಿಕೊಳ್ಳುತ್ತಾ ಬಂದಿದ್ದಾರೆ.
ಬಿಸಿಸಿಐ ಆಟಗಾರರನಿಗೆ 4 ವಿಧದಲ್ಲಿ ಸಂಭಾವನೆ ನೀಡುತ್ತಾ ಬಂದಿದೆ. A+ ದರ್ಜೆಯವರು ವಾರ್ಷಿಕ 7 ಕೋಟಿ ರುಪಾಯಿ ಸಂಭಾವನೆ ಪಡೆದರೆ, A ಕೆಟೆಗೆರೆ ಪಡೆದ ಆಟಗಾರರು ವಾರ್ಷಿಕ 5 ಕೋಟಿ ರುಪಾಯಿ ಸಂಭಾವನೆ ಪಡೆಯಲಿದ್ದಾರೆ. ಇನ್ನು B ದರ್ಜೆಗೆ 3 ಕೋಟಿ ರುಪಾಯಿ ಹಾಗೂ C ದರ್ಜೆಗೆ ಒಂದು ಕೋಟಿ ರುಪಾಯಿ ವಾರ್ಷಿಕ ಸಂಭಾವನೆ ಪಡೆಯುತ್ತಿದ್ದಾರೆ.
ಇನ್ನೊಂದೆಡೆ ನೇಪಾಳ ಕ್ರಿಕೆಟ್ ಮಂಡಳಿಯು ತಮ್ಮ ತಂಡದಲ್ಲಿ ಕೇಂದ್ರಿಯ ಗುತ್ತಿಗೆಯನ್ನು 3 ವಿಭಾಗಗಳಾಗಿ ವಿಂಗಡಿಸಿದೆ. ನೇಪಾಳ ತಂಡದಲ್ಲಿ 'ಎ' ಗ್ರೇಡ್ ಹೊಂದಿದ ಆಟಗಾರರಿಗೆ 60 ಸಾವಿರ ರುಪಾಯಿ, 'ಬಿ' ಗ್ರೇಡ್ ಹೊಂದಿದ ಆಟಗಾರರಿಗೆ 50 ಸಾವಿರ ರುಪಾಯಿ ಹಾಗೂ 'ಸಿ' ಗ್ರೇಡ್ ಹೊಂದಿದ ಆಟಗಾರರು ತಿಂಗಳಿಗೆ 40 ಸಾವಿರ ರುಪಾಯಿ ಪಡೆಯುತ್ತಿದ್ದಾರೆ.
60 ಸಾವಿರ ರುಪಾಯಿ ಇದು ನೇಪಾಳದ ರುಪಾಯಿ. ಇದರ ಮೌಲ್ಯ ಭಾರತದಲ್ಲಿ ಕೇವಲ 37,719 ರುಪಾಯಿಗಳು ಮಾತ್ರ. ಅದೇ ರೀತಿ 50 ಸಾವಿರ ನೇಪಾಳ ರುಪಾಯಿ ಭಾರತದ 31,412 ರುಪಾಯಿಗಳಿಗೆ ಸಮ. ಇನ್ನು 40,000 ನೇಪಾಳದ ರುಪಾಯಿಗೆ ಭಾರತದಲ್ಲಿನ ರುಪಾಯಿ ಮೌಲ್ಯ ಕೇವಲ 25 ಸಾವಿರ ರುಪಾಯಿಗಳಾಗಿವೆ.
ಹೀಗಾಗಿ ಭಾರತದ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಜವಾನ ಕೂಡಾ ನೇಪಾಳದ ಕ್ರಿಕೆಟಿಗರಿಗಿಂತ ಹೆಚ್ಚಿನ ಸಂಬಳ ಪಡೆದುಕೊಳ್ಳುತ್ತಾರೆ. ಯಾಕೆಂದರೆ ನಮ್ಮ ದೇಶದಲ್ಲಿ ಕೊನೆಯ ಸ್ಯಾಲರಿ ಪ್ಯಾಕೇಜ್ ವಾರ್ಷಿಕ 5.5 ಲಕ್ಷ ರುಪಾಯಿಗಳಾಗಿವೆ.
ಒಂದು ಏಕದಿನ ಪಂದ್ಯಕ್ಕೆ ₹6000
ಕೇಂದ್ರ ಗುತ್ತಿಗೆ ಪಡೆದ ಆಟಗಾರರು ಮಾಸಿಕ ಸಂಬಳದ ಜತೆಗೆ ಪ್ರತಿ ಏಕದಿನ ಪಂದ್ಯವನ್ನಾಡಿದರೆ, ಅವರಿಗೆ ಭಾರತೀಯ ರುಪಾಯಿಗಳಲ್ಲಿ ಕೇವಲ 6,286 ರುಪಾಯಿಗಳು ಸಿಗಲಿವೆ. ಇನ್ನು ಪ್ರತಿ ಟಿ20 ಪಂದ್ಯವನ್ನಾಡಿದರೆ, ನೇಪಾಳಿ ಕ್ರಿಕೆಟಿಗರಿಗೆ ಭಾರತೀಯ ರುಪಾಯಿ ಲೆಕ್ಕದಲ್ಲಿ ಕೇವಲ 3,143 ರುಪಾಯಿಗಳನ್ನು ಪಡೆಯುತ್ತಿದ್ದಾರೆ.
ಇನ್ನು ಭಾರತೀಯ ಕ್ರಿಕೆಟಿಗರು ಒಂದು ಟೆಸ್ಟ್ ಪಂದ್ಯವನ್ನಾಡಿದರೆ 15 ಲಕ್ಷ ರುಪಾಯಿ, ಒಂದು ಏಕದಿನ ಪಂದ್ಯವನ್ನಾಡಿದರೆ 6 ಲಕ್ಷ ರುಪಾಯಿ ಹಾಗೂ ಒಂದು ಟಿ20 ಪಂದ್ಯವನ್ನಾಡಿದರೆ 3 ಲಕ್ಷ ರುಪಾಯಿ ಸಂಬಳವನ್ನು ಜೇಬಿಗಿಳಿಸಿಕೊಳ್ಳುತ್ತಾರೆ.
ಪುಟ್ಟ ರಾಷ್ಟ್ರ ನೇಪಾಳ ಈಗ ತಾನೆ ಕ್ರಿಕೆಟ್‌ನಲ್ಲಿ ಅಂಬೆಗಾಲಿಡುತ್ತಿದ್ದು, ನೇಪಾಳದ ಆಟಗಾರರು ಕೇವಲ ಹಣಕ್ಕಾಗಿ ಆಡದೇ ದೇಶವನ್ನು ಪ್ರತಿನಿಧಿಸಲು ಹೋರಾಟದ ಮನೋಭಾವ ತೋರುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ..!