2026ರ ಟಿ20 ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ಇದೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 6000 ರನ್ ಮತ್ತು 200 ವಿಕೆಟ್‌ಗಳ ಮೈಲಿಗಲ್ಲು ತಲುಪಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ನೆದರ್‌ಲೆಂಡ್ಸ್ ಎದುರು ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸತತ 4 ಗೆಲುವು ದಾಖಲಿಸುವ ಮೂಲಕ ಅಜೇಯವಾಗಿ ಸೂಪರ್-8 ಹಂತವನ್ನು ಪ್ರವೇಶಿಸಿದೆ. ಇನ್ನು ಇದೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
26
ಹೊಸ ಮೈಲಿಗಲ್ಲು ನೆಟ್ಟ ಹಾರ್ದಿಕ್ ಪಾಂಡ್ಯ
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2026ರ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈ ಹೊಸ ಮೈಲಿಗಲ್ಲು ಸ್ಥಾಪಿಸಿದರು. ಈ ಪಂದ್ಯದಲ್ಲಿ 21 ಎಸೆತಗಳಲ್ಲಿ 30 ರನ್ ಗಳಿಸಿದ ಅವರು, ಟಿ20 ಕ್ರಿಕೆಟ್‌ನಲ್ಲಿ 6,000 ರನ್ ಮತ್ತು 200 ವಿಕೆಟ್ ಪಡೆದ ಮೊದಲ ಭಾರತೀಯ ಆಟಗಾರನಾಗಿ ದಾಖಲೆ ಬರೆದರು. ತಮ್ಮ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಬಾರಿಸಿದ್ದರು. ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಔಟಾದರೂ, ಅಷ್ಟರಲ್ಲಾಗಲೇ ಅವರ ಹೆಸರು ದಾಖಲೆ ಪುಸ್ತಕ ಸೇರಿತ್ತು.
36
ಟಿ20 ಕ್ರಿಕೆಟ್‌ನಲ್ಲಿ ಹಾರ್ದಿಕ್ ಪಾಂಡ್ಯ ಟ್ರ್ಯಾಕ್ ರೆಕಾರ್ಡ್
ಹಾರ್ದಿಕ್ ಪಾಂಡ್ಯ ತಮ್ಮ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ 323 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 279 ಇನ್ನಿಂಗ್ಸ್‌ಗಳಿಂದ 6008 ರನ್ ಗಳಿಸಿದ್ದಾರೆ. ಅವರ ಸರಾಸರಿ 29.89 ಮತ್ತು ಸ್ಟ್ರೈಕ್ ರೇಟ್ 144.04 ಆಗಿದೆ.
ಬೌಲಿಂಗ್‌ನಲ್ಲೂ ಮಿಂಚಿರುವ ಅವರು 222 ವಿಕೆಟ್‌ಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. 2013ರಲ್ಲಿ ಬರೋಡಾ ಪರ ಮಧ್ಯಪ್ರದೇಶ ವಿರುದ್ಧ ಟಿ20ಗೆ ಪಾದಾರ್ಪಣೆ ಮಾಡಿದ ಹಾರ್ದಿಕ್, ಇಂದು ವಿಶ್ವದ ಅತ್ಯುತ್ತಮ ವೇಗದ ಬೌಲಿಂಗ್ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿ ಬೆಳೆದಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರಾನ್ ಪೊಲಾರ್ಡ್, ಆಂಡ್ರೆ ರಸೆಲ್ ಅವರಂತಹ ದಿಗ್ಗಜರ ಸಾಲಿಗೆ ಸೇರಿದ್ದಾರೆ.
ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಜೊತೆಗೂಡಿ ಶಿವಂ ದುಬೆ ಅದ್ಭುತ ಜೊತೆಯಾಟವಾಡಿದರು. ಇವರಿಬ್ಬರು ಐದನೇ ವಿಕೆಟ್‌ಗೆ 76 ರನ್‌ಗಳ ಕಾಣಿಕೆ ನೀಡಿದರು. ದುಬೆ ಕೇವಲ 31 ಎಸೆತಗಳಲ್ಲಿ 66 ರನ್ ಗಳಿಸಿ, ಟೀಮ್ ಇಂಡಿಯಾ 193/6 ಬೃಹತ್ ಸ್ಕೋರ್ ಮಾಡಲು ಪ್ರಮುಖ ಪಾತ್ರ ವಹಿಸಿದರು. ದುಬೆ ಅವರ ಇನ್ನಿಂಗ್ಸ್‌ನಲ್ಲಿ 6 ಸಿಕ್ಸರ್ ಮತ್ತು 4 ಬೌಂಡರಿಗಳಿದ್ದವು. ಸೂರ್ಯಕುಮಾರ್ ಯಾದವ್ (34) ಮತ್ತು ತಿಲಕ್ ವರ್ಮಾ (31) ಕೂಡ ಉಪಯುಕ್ತ ರನ್ ಗಳಿಸಿದರು. ನೆದರ್ಲೆಂಡ್ಸ್ ಬೌಲರ್‌ಗಳ ಪೈಕಿ ಲೋಗನ್ ವಾನ್ ಬೀಕ್ 3 ವಿಕೆಟ್ ಪಡೆದರು.
56
ಮುಂಬೈ ಇಂಡಿಯನ್ಸ್ ಪ್ರತಿಭೆ ಪಾಂಡ್ಯ
2015ರಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಆಡುವ ಮೂಲಕ ಹಾರ್ದಿಕ್ ಪಾಂಡ್ಯ ಬೆಳಕಿಗೆ ಬಂದರು. 2016ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ಮೂಲಕ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದರು. 2022ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದುಕೊಟ್ಟು ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ನಂತರ 2024ರಲ್ಲಿ ಮತ್ತೆ ಮುಂಬೈ ಇಂಡಿಯನ್ಸ್‌ಗೆ ನಾಯಕರಾಗಿ ಮರಳಿದರು.
ನಾಯಕನಾಗಿ ಟೀಂ ಇಂಡಿಯಾವನ್ನು 16 ಪಂದ್ಯಗಳಲ್ಲಿ ಮುನ್ನಡೆಸಿದ್ದು, ಅದರಲ್ಲಿ 10 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. ಸದ್ಯ ನಾಯಕತ್ವದ ಜವಾಬ್ದಾರಿಯಲ್ಲಿ ಇಲ್ಲದಿದ್ದರೂ, ತಂಡದ ಪ್ರಮುಖ ಸದಸ್ಯರಾಗಿ ಮುಂದುವರಿದಿದ್ದಾರೆ.
66
ನೆದರ್‌ಲೆಂಡ್ಸ್ ಎದುರು ಭಾರತಕ್ಕೆ ಭರ್ಜರಿ ಜಯ
ಈ ಗೆಲುವಿನೊಂದಿಗೆ ಭಾರತವು ಗ್ರೂಪ್-ಎ ನಲ್ಲಿ ಸತತ ನಾಲ್ಕು ಗೆಲುವುಗಳನ್ನು ದಾಖಲಿಸಿ ಅಜೇಯವಾಗಿ ಉಳಿದಿದೆ. 194 ರನ್‌ಗಳ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ 176/7 ರನ್‌ಗಳಿಗೆ ಸೀಮಿತವಾಗಿ, 17 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು. ಟೀಂ ಇಂಡಿಯಾ ಈಗಾಗಲೇ ಸೂಪರ್-8 ಹಂತವನ್ನು ತಲುಪಿದೆ.
ಗ್ರೂಪ್-1ರಲ್ಲಿ ಭಾರತವು ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ತಂಡಗಳನ್ನು ಎದುರಿಸಲಿದೆ. ಫೆಬ್ರವರಿ 22 ರಂದು ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತನ್ನ ಮೊದಲ ಸೂಪರ್-8 ಪಂದ್ಯವನ್ನು ಆಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.