Happy Birthday Rahul Dravid: 'ದ ವಾಲ್‌' ಖ್ಯಾತಿಯ ದ್ರಾವಿಡ್ ಹೆಸರಿನಲ್ಲಿರುವ 5 ಅಪರೂಪದ ದಾಖಲೆಗಳಿವು..!

First Published Jan 11, 2023, 1:48 PM IST

ಬೆಂಗಳೂರು(ಜ.11): ಟೀಂ ಇಂಡಿಯಾ ಹೆಡ್ ಕೋಚ್ ಹಾಗೂ ಭಾರತ ಕಂಡ ದಿಗ್ಗಜ ಕ್ರಿಕೆಟಿಗ ರಾಹುಲ್‌ ದ್ರಾವಿಡ್ ಇಂದು(ಜ.11-2023)ರಂದು ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರಕ್ಕೂ ಅಧಿಕ ರನ್‌ ಬಾರಿಸಿದ ಕೆಲವೇ ಕೆಲವು ಬ್ಯಾಟರ್‌ಗಳಲ್ಲಿ ಒಬ್ಬರೆನಿಸಿಕೊಂಡಿರುವ ದ್ರಾವಿಡ್, ಇದೀಗ ಫಿಫ್ಟಿ ಬಾರಿಸಿದ್ದಾರೆ. 

1. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು 90+ ರನ್‌ಗೆ ವಿಕೆಟ್ ಒಪ್ಪಿಸಿದ ಬ್ಯಾಟರ್ ದ್ರಾವಿಡ್..!

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ದಾಖಲೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ. ಅದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬಾರಿ 90+ ರನ್ ಬಾರಿಸಿದ ಜಂಟಿ ದಾಖಲೆ ಸಚಿನ್, ತೆಂಡುಲ್ಕರ್, ಸ್ಟೀವ್‌ ವಾ ಹಾಗೂ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ. ಈ ಮೂವರು ಬ್ಯಾಟರ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 10 ಬಾರಿ 90+ ರನ್‌ಗೆ ವಿಕೆಟ್ ಒಪ್ಪಿಸಿದ್ದಾರೆ.
 

2. ಭಾರತ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಎರಡನೇ ಗರಿಷ್ಠ ರನ್‌ ಬಾರಿಸಿದ ಬ್ಯಾಟರ್ ದ್ರಾವಿಡ್:

ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್, ಟೆಸ್ಟ್‌ ಕ್ರಿಕೆಟ್‌ನಲ್ಲಿ 13,288 ರನ್‌ ಬಾರಿಸುವ ಮೂಲಕ, ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್ ತೆಂಡುಲ್ಕರ್ ಬಳಿಕ ಅತಿಹೆಚ್ಚು ರನ್‌ ಬಾರಿಸಿದ ಎರಡನೇ ಬ್ಯಾಟರ್ ರಾಹುಲ್ ದ್ರಾವಿಡ್

3. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಎಸೆತಗಳನ್ನು ಎದುರಿಸಿದ ಏಕೈಕ ಬ್ಯಾಟರ್ ರಾಹುಲ್ ದ್ರಾವಿಡ್:

ರಾಹುಲ್ ದ್ರಾವಿಡ್‌, ಕ್ರಿಕೆಟ್ ಆಡುವ ಸಂದರ್ಭದಲ್ಲಿ ಟೀಂ ಇಂಡಿಯಾ ಪಾಲಿನ ಆಪತ್ಬಾಂದವ ಎನಿಸಿಕೊಂಡಿದ್ದರು. ದ್ರಾವಿಡ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಟ್ಟು 31,258 ಎಸೆತಗಳನ್ನು ಎದುರಿಸಿದ್ದಾರೆ. ಯಾವೊಬ್ಬ ಕ್ರಿಕೆಟಿಗ ಕೂಡಾ ಟೆಸ್ಟ್‌ ಕ್ರಿಕೆಟ್‌ನಲ್ಲಿ 30 ಸಾವಿರಕ್ಕೂ ಅಧಿಕ ಎಸೆತಗಳನ್ನು ಎದುರಿಸಿಲ್ಲ
 

4. ಸತತ 4 ಟೆಸ್ಟ್ ಶತಕ ಸಿಡಿಸಿದ ಭಾರತ ಏಕೈಕ ಬ್ಯಾಟರ್ ರಾಹುಲ್ ದ್ರಾವಿಡ್:

ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ 4 ಇನಿಂಗ್ಸ್‌ಗಳಲ್ಲಿ 4 ಶತಕ ಸಿಡಿಸಿದ ಬಾರಿಸಿದ ಟೀಂ ಇಂಡಿಯಾದ ಏಕೈಕ ಬ್ಯಾಟರ್ ಎನ್ನುವ ಹೆಗ್ಗಳಿಕೆ ದ್ರಾವಿಡ್ ಹೆಸರಿನಲ್ಲಿದೆ. ದ್ರಾವಿಡ್‌ ಆಗಸ್ಟ್ 08, 2002ರಿಂದ ಅಕ್ಟೋಬರ್ 09, 2002ರ ಅವಧಿಯಲ್ಲಿ  ಇಂಗ್ಲೆಂಡ್‌ ಎದುರು ಹ್ಯಾಟ್ರಿಕ್ ಸೆಂಚುರಿ ಬಾರಿಸಿದ್ದರು, ಇದಾದ ಬಳಿಕ ವೆಸ್ಟ್‌ ಇಂಡೀಸ್ ಎದುರು ಒಂದು ಶತಕ ಸಿಡಿಸಿದ್ದರು. 
 

5. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಕ್ಯಾಚ್ ಹಿಡಿದ ಕ್ರಿಕೆಟಿಗ ದ್ರಾವಿಡ್:

ಅತ್ಯಂತ ಸುರಕ್ಷಿತ ಸ್ಲಿಪ್‌ ಫೀಲ್ಡರ್ ಎನ್ನುವ ಅನ್ವರ್ಥನಾಮ ದ್ರಾವಿಡ್‌ಗಿದೆ. ರಾಹುಲ್ ದ್ರಾವಿಡ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಟ್ಟು 210 ಕ್ಯಾಚ್ ಹಿಡಿಯುವ ಮೂಲಕ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಕ್ಯಾಚ್ ಹಿಡಿದ ವಿಕೆಟ್‌ಕೀಪರ್‌ಯೇತರ ಫೀಲ್ಡರ್ ಎನ್ನುವ ಹೆಗ್ಗಳಿಕೆ ದ್ರಾವಿಡ್ ಹೆಸರಿನಲ್ಲಿದೆ.
 

click me!