ಗುವಾಹಟಿ: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ 406 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತುವ ಮೂಲಕ ಹೊಸ ದಾಖಲೆ ಬರೆದಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್, ಈ ಪಿಚ್ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 405 ರನ್ ಕಲೆಹಾಕಿತ್ತು. ವೆಸ್ಟ್ ಇಂಡೀಸ್ ಪರ ಮೂವರು ಬ್ಯಾಟರ್‌ಗಳು ಆಕರ್ಷಕ ಶತಕ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ತಂಡವು 400+ ರನ್ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು.
26
ಹೊಸ ಮೈಲಿಗಲ್ಲು ನೆಟ್ಟ ಭಾರತ
ಇನ್ನು ಕಠಿಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೇವಲ ಎರಡು ವಿಕೆಟ್ ಕಳೆದುಕೊಂಡು ಇನ್ನೂ 39 ಎಸೆತ ಬಾಕಿ ಇರುವಂತೆಯೇ ಟೀಂ ಇಂಡಿಯಾ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು. ನಾಯಕ ಶುಭ್‌ಮನ್ ಗಿಲ್ ಅಜೇಯ 223 ರನ್ ಸಿಡಿಸಿದರೆ, ಮಾಜಿ ನಾಯಕ ರೋಹಿತ್ ಶರ್ಮಾ 101 ರನ್ ಚಚ್ಚಿದರು. ಈ ಮೂಲಕ ಟೀಂ ಇಂಡಿಯಾ ಮೊದಲ ಸಲ ಏಕದಿನ ಕ್ರಿಕೆಟ್‌ನಲ್ಲಿ 400+ ರನ್ ಯಶಸ್ವಿಯಾಗಿ ಚೇಸ್ ಮಾಡಿ ಹೊಸ ಮೈಲಿಗಲ್ಲು ನೆಟ್ಟಿತು.
36
ಇದು ಕ್ರಿಕೆಟ್ ಅಲ್ಲ, ಬರೀ ಬ್ಯಾಟಿಂಗ್
ಬುಧವಾರ ಭಾರತ-ವೆಸ್ಟ್ ಇಂಡೀಸ್ ಏಕದಿನ ಪಂದ್ಯದಲ್ಲಿ 800ಕ್ಕೂ ಅಧಿಕ ರನ್ ದಾಖಲಾದ ಹಿನ್ನೆಲೆ ಪಿಚ್ ಬಗ್ಗೆ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ‘ಇದು ಕ್ರಿಕೆಟ್ ಅಲ್ಲ, ಬರೀ ಬ್ಯಾಟಿಂಗ್’ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಜಿಯೋ ಸ್ಟಾರ್‌ನಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ‘ಬ್ಯಾಟ್ ಮತ್ತು ಚೆಂಡಿನ ಮಧ್ಯೆ ಹೆಚ್ಚಿನ ಸ್ಪರ್ಧೆ ಇರಬೇಕು ಎಂದು ನಾನು ಭಾವಿಸುತ್ತೇನೆ. ಇದು ಕ್ರಿಕೆಟ್ ಅಲ್ಲ, ಇದು ಬ್ಯಾಟಿಂಗ್ ಮಾತ್ರ. ಎದುರಾಳಿ ತಂಡ 400 ರನ್ ಗಳಿಸಿದರೆ ನಾವು 400 ರನ್‌ಗಳನ್ನು ಬೆನ್ನಟ್ಟುತ್ತೇವೆ. ದಾಖಲೆಗಳಿಗೆ ಇದು ಅತ್ಯುತ್ತಮ. ಆದರೆ ಬೌಲರ್‌ಗಳ ಬಗ್ಗೆಯೂ ಸಹಾನುಭೂತಿ ಇರಬೇಕು. ಕೆಲವೊಮ್ಮೆ ಬೌಲರ್‌ಗಳು ಅಂಕಿ ಅಂಶಗಳು ಸೂಚಿಸುವಷ್ಟು ಕಳಪೆಯಾಗಿ ಇರುವುದಿಲ್ಲ’ ಎಂದಿದ್ದಾರೆ.
56
ಎರಡನೇ ಯಶಸ್ವಿ ಚೇಸ್:
ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಯಶಸ್ವಿಯಾಗಿ ಬೆನ್ನತ್ತಿದ ದಾಖಲೆ ಇಂದಿಗೂ ದಕ್ಷಿಣ ಆಫ್ರಿಕಾ ಹೆಸರಿನಲ್ಲಿದೆ. 2006ರಲ್ಲಿ ಆಸ್ಟ್ರೇಲಿಯಾ ವಿರುದ್ದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 435 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿತ್ತು. ಇದೀಗ ಟೀಂ ಇಂಡಿಯಾ 406 ರನ್‌ಗಳನ್ನು ಯಶಸ್ವಿಯಾಗಿ ಚೇಸ್ ಮಾಡುವ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 400+ ರನ್‌ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿದ ಎರಡನೇ ತಂಡ ಎನ್ನುವ ಹಿರಿಮೆಗೆ ಟೀಂ ಇಂಡಿಯಾ ಪಾತ್ರವಾಗಿದೆ.
66
ಸರಣಿ ಕೈವಶ ಮಾಡಿಕೊಂಡ ಟೀಂ ಇಂಡಿಯಾ:
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇದೀಗ ಟೀಂ ಇಂಡಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಮೊದಲ ಪಂದ್ಯವನ್ನೂ ಟೀಂ ಇಂಡಿಯಾ 8 ವಿಕೆಟ್‌ಗಳಿಂದ ಜಯಿಸಿತ್ತು. ಇದೀಗ ಮೂರನೇ ಹಾಗೂ ಔಪಚಾರಿಕ ಪಂದ್ಯವು ಅಕ್ಟೋಬರ್ 03ರಂದು ಚಂಡೀಗಢದ ಪಿಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.