Latest Videos

ಟೀಂ ಇಂಡಿಯಾ ಕೋಚ್ ಆಗಲು ರೆಡಿ, ಆದ್ರೆ ಒಂದು ಕಂಡೀಷನ್ ಎಂದ ಗೌತಮ್ ಗಂಭೀರ್..!

First Published May 26, 2024, 5:18 PM IST

ಬೆಂಗಳೂರು: ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನಿಸಿಕೊಂಡಿರುವ ಬಿಸಿಸಿಐ, ಇದೀಗ ತನ್ನ ಪುರುಷರ ಕ್ರಿಕೆಟ್ ತಂಡಕ್ಕೆ ಹೊಸ ಕೋಚ್ ಹುಡುಕಾಟದಲ್ಲಿದೆ. ಕೆಕೆಆರ್ ತಂಡದ ಮೆಂಟರ್ ಆಗಿರುವ ಗೌತಮ್ ಗಂಭೀರ್ ಅವರನ್ನು ಕೋಚ್ ಹುದ್ದೆಗೆ ಆಯ್ಕೆ ಮಾಡಲು ಬಿಸಿಸಿಐ ಒಲವು ತೋರಿದೆ. ಆದರೆ ಗೌತಿ ಒಂದು ಖಡಕ್ ಕಂಡೀಷನ್ ಹಾಕಿದ್ದಾರೆ ಎಂದು ವರದಿಯಾಗಿದೆ. ಏನದು ಕಂಡೀಷನ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಮುಗಿಯುತ್ತಿದ್ದಂತೆಯೇ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಒಪ್ಪಂದದ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ಬಿಸಿಸಿಐ ಹೊಸ ಕೋಚ್ ಹುಡುಕಾಟದಲ್ಲಿದೆ.

ಟೀಂ ಇಂಡಿಯಾ ಹೆಡ್ ಕೋಚ್ ಆಗಲು ಆಸಕ್ತಿ ಇರುವವರು ಅರ್ಜಿ ಸಲ್ಲಿಸಲು ಬಿಸಿಸಿಐ ಈಗಾಗಲೇ ಅರ್ಜಿ ಆಹ್ವಾನಿಸಿದೆ. ಸದ್ಯ ಎನ್‌ಸಿಎ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಹಾಗೂ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಈ ರೇಸ್‌ನಲ್ಲಿರುವ ಪ್ರಮುಖ ಭಾರತೀಯರೆನಿಸಿದ್ದಾರೆ.

ಇನ್ನು ಟೀಂ ಇಂಡಿಯಾ ಕೋಚ್ ಹುದ್ದೆಗೆ ರಿಕಿ ಪಾಂಟಿಂಗ್, ಜಸ್ಟಿನ್ ಲ್ಯಾಂಗರ್, ಸ್ಟಿಫನ್ ಫ್ಲೆಮಿಂಗ್, ಆಂಡಿ ಫ್ಲವರ್ ಸೇರಿದಂತೆ ಹಲವು ಹೆಸರುಗಳು ಕೇಳಿಬಂದಿದ್ದರೂ, ಬಿಸಿಸಿಐ, ಗೌತಮ್ ಗಂಭೀರ್ ಅವರನ್ನು ಆಯ್ಕೆ ಮಾಡಲು ಒಲವು ತೋರಿದೆ ಎನ್ನಲಾಗುತ್ತಿದೆ.

ಇದೀಗ ದೈನಿಕ್ ಜಾಗರಣ್ ವೆಬ್‌ಸೈಟ್ ವರದಿಯ ಪ್ರಕಾರ, ತಾವು ಟೀಂ ಇಂಡಿಯಾ ಕೋಚ್ ಆಗಬೇಕೆಂದರೆ ಒಂದು ಕಂಡೀಷನ್ ಇದೆ. ಅದನ್ನು ಪೂರೈಸಿದರಷ್ಟೇ ತಾವು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಹೌದು, 'ತಮ್ಮನ್ನು ಕೋಚ್ ಅಗಿ ಸೆಲೆಕ್ಟ್ ಮಾಡುವ ಗ್ಯಾರಂಟಿ ನೀಡಿದರಷ್ಟೇ ತಾವು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುತ್ತೇನೆ' ಇಲ್ಲದಿದ್ದರೆ ತಾವು ನಾಮಾಕಾವಸ್ತೆಗಾಗಿ ಅರ್ಜಿ ಹಾಕುವುದಿಲ್ಲ ಎಂದು ಗೌತಿ ಖಡಕ್ ಆಗಿ ಕಂಡೀಷನ್ ಹಾಕಿದ್ದಾರಂತೆ.

ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನಾಂಕವಾಗಿದೆ. ಆದರೆ ಈಗಾಗಲೇ ಎಷ್ಟು ಮಂದಿ ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಮಾಹಿತಿಯನ್ನು ಬಿಸಿಸಿಐ ಇದುವರೆಗೂ ಬಿಟ್ಟುಕೊಟ್ಟಿಲ್ಲ.

ಗೌತಮ್ ಗಂಭೀರ್ ಒಂದು ವೇಳೆ ಟೀಂ ಇಂಡಿಯಾ ಹೆಡ್ ಕೋಚ್ ಆಗಿ ನೇಮಕವಾದರೆ, ಕೆಕೆಆರ್ ತಂಡದ ಮೆಂಟರ್ ಹುದ್ದೆಯನ್ನು ಕೈಬಿಡಬೇಕಾಗುತ್ತದೆ. ಸದ್ಯ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಕೆಕೆಆರ್ ತಂಡವು ಫೈನಲ್‌ಗೆ ಲಗ್ಗೆಯಿಟ್ಟಿದೆ.

ಐಪಿಎಲ್‌ನಲ್ಲಿ ಗಂಭೀರ್ ನಾಯಕನಾಗಿ ಕೆಕೆಆರ್ ತಂಡವನ್ನು ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಇದಷ್ಟೇ ಅಲ್ಲದೇ ಗಂಭೀರ್ ಕೆಕೆಆರ್ ತಂಡದ ಮೆಂಟರ್ ಆದ ಮೇಲೆ ಅಭೂತ ಪ್ರದರ್ಶನ ತೋರಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಈ ಕಾರಣಕ್ಕಾಗಿಯೇ ಗೌತಿಯನ್ನು ಟೀಂ ಇಂಡಿಯಾ ಹೆಡ್ ಕೋಚ್ ಮಾಡಲು ಬಿಸಿಸಿಐ ಒಲವು ತೋರಿದೆ ಎನ್ನಲಾಗುತ್ತಿದೆ.

ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೆಂಟರ್ ಹುದ್ದೆಯನ್ನು ತೊರೆದು ಟೀಂ ಇಂಡಿಯಾ ಹೆಡ್ ಕೋಚ್ ಆಗಲು ಗೌತಮ್ ಗಂಭೀರ್ ಅರ್ಜಿ ಸಲ್ಲಿಸುತ್ತಾರೆಯೇ ಅಥವಾ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ.

click me!