17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಯಾನ ಎಲಿಮಿನೇಟರ್ ಹಂತದಲ್ಲೇ ಮುಕ್ತಾಯವಾಯಿತು.
ಇನ್ನು ಆರ್‌ಸಿಬಿ ತಂಡವು ನಾಕೌಟ್ ಹಂತದಲ್ಲಿ ಸೋಲುವುದರೊಂದಿಗೆ ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವರ ಸ್ಪರ್ಧಾತ್ಮಕ ಕ್ರಿಕೆಟ್ ವೃತ್ತಿ ಬದುಕಿಗೂ ತೆರೆ ಬಿದ್ದಿತು.
ಇನ್ನು ವಿದಾಯದ ಬೆನ್ನಲ್ಲೇ ದಿನೇಶ್ ಕಾರ್ತಿಕ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಆರ್‌ಸಿಬಿ ಫ್ಯಾನ್ಸ್ ಸಪೋರ್ಟ್ ಅನ್ನು ಮನದುಂಬಿ ಸ್ಮರಿಸಿಕೊಂಡಿದ್ದಾರೆ.
ಹೌದು, 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ಆರ್‌ಸಿಬಿ ಹಾಗೂ ಆರ್‌ಸಿಬಿ ಫ್ಯಾನ್ಸ್ ಪಾತ್ರ ಮಹತ್ವದ್ದಾಗಿದೆ ಎಂದು ಡಿಕೆ ಹೇಳಿದ್ದಾರೆ.
2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮೀಸ್‌ನಲ್ಲಿ ಸೋತು ಹೊರಬೀಳುತ್ತಿದ್ದಂತೆಯೇ ದಿನೇಶ್ ಕಾರ್ತಿಕ್ ಅವರಿಗೆ ಟೀಂ ಇಂಡಿಯಾ ಡೋರ್ ಬಂದ್ ಆಗಿತ್ತು.
ಆದರೆ ಮರು ವರ್ಷ ಆರ್‌ಸಿಬಿ ತಂಡ ಕೂಡಿಕೊಂಡ ಡಿಕೆ ಅದ್ಭುತ ಪ್ರದರ್ಶನ ತೋರಿದ್ದರು. 2022ರ ಐಪಿಎಲ್ ಟೂರ್ನಿಯಲ್ಲಿ ಡಿಕೆ 55ರ ಸರಾಸರಿಯಲ್ಲಿ 330 ರನ್ ಸಿಡಿಸಿ ಆಯ್ಕೆ ಸಮಿತಿಯ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಎದುರಿನ ಸರಣಿಗೆ ಡಿಕೆಯನ್ನು ಆಯ್ಕೆ ಮಾಡಲಾಯಿತು. ಅಲ್ಲಿಯೂ ಉತ್ತಮ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ದಿನೇಶ್ ಕಾರ್ತಿಕ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಯಿತು.
"ಆರ್‌ಸಿಬಿ ಜತೆಗಿನ ನನ್ನ ಪಯಣ ಅತ್ಯದ್ಭುತ. ನನ್ನ ಪ್ರಕಾರ ಆರ್‌ಸಿಬಿ ಅಂದರೆ ಅದು ಫ್ಯಾನ್ಸ್. ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿಗೆ ದೊಡ್ಡ ಹೆಸರಿದೆ ಎನ್ನುವುದು ಗೊತ್ತು. ಆದರೆ ಆರ್‌ಸಿಬಿಗೆ ವಿರಾಟ್ ಕೊಹ್ಲಿಗಿಂತ ದೊಡ್ಡ ಫ್ಯಾನ್ ಬೇಸ್ ಇದೆ ಎಂದು ಡಿಕೆ ಹೇಳಿದ್ದಾರೆ.
ನನಗಂಗೂ ಆರ್‌ಸಿಬಿ ಅಭಿಮಾನಿಗಳು ಅಪಾರ ಪ್ರೀತಿ ಹಾಗೂ ಗೌರವ ನೀಡಿದ್ದಾರೆ. 2022ರ ಟಿ20 ವಿಶ್ವಕಪ್ ಆಯ್ಕೆ ನೆನಸಿಕೊಂಡರೆ, ಅದು ಸಾಧ್ಯವಾಗಿದ್ದು ಆರ್‌ಸಿಬಿ ಫ್ಯಾನ್ಸ್‌ನಿಂದ ಎಂದೆನಿಸುತ್ತದೆ. ಡಿಕೆಗೆ ಟೀಂ ಇಂಡಿಯಾದಲ್ಲಿ ಸ್ಥಾನ ನೀಡಬೇಕು ಎಂದು ದೊಡ್ಡ ಸಂಖ್ಯೆಯಲ್ಲಿ ಆರ್‌ಸಿಬಿ ಫ್ಯಾನ್ಸ್ ಆಗ್ರಹಿಸಿದ್ದರು. ಅದನ್ನಂತು ನಾನು ಯಾವತ್ತಿಗೂ ಮರೆಯೊಲ್ಲ ಎಂದು ಡಿಕೆ ಹೇಳಿದ್ದಾರೆ.
37 ವರ್ಷದ ದಿನೇಶ್ ಕಾರ್ತಿಕ್, ರಾಜಸ್ಥಾನ ರಾಯಲ್ಸ್ ಎದುರು ತಮ್ಮ ವೃತ್ತಿಜೀವನದ ಕೊನೆಯ ಐಪಿಎಲ್ ಪಂದ್ಯವನ್ನಾಡಿದ್ದಾರೆ. ಇದೀಗ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಡಿಕೆ ಕಾಮೆಂಟೇಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.