ದಕ್ಷಿಣ ಆಫ್ರಿಕಾ ಎದುರಿನ 4 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಸಿಡಿಲಬ್ಬರದ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಡರ್ಬನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೇವಲ 50 ಎಸೆತಗಳನ್ನು ಎದುರಿಸಿ 10 ಮುಗಿಲೆತ್ತರದ ಸಿಕ್ಸರ್ ಹಾಗೂ 7 ಆಕರ್ಷಕ ಬೌಂಡರಿಗಳ ನೆರವಿನಿಂದ ಅಮೋಘ 107 ರನ್ ಸಿಡಿಸಿ ಮಿಂಚಿದ್ದರು.
ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸಂಜು ಸ್ಯಾಮ್ಸನ್ ಬಾರಿಸಿದ ಸತತ ಎರಡನೇ ಶತಕ ಎನಿಸಿಕೊಂಡಿದೆ. ಇದಕ್ಕೂ ಮೊದಲು ಬಾಂಗ್ಲಾದೇಶ ಎದುರಿನ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಸಂಜು ಸ್ಪೋಟಕ 111 ರನ್ ಸಿಡಿಸಿ ಅಬ್ಬರಿಸಿದ್ದರು.
Sanju Samson
ಇದರೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸತತ ಎರಡು ಶತಕ ಸಿಡಿಸಿದ ಭಾರತದ ಮೊದಲ ಬ್ಯಾಟರ್ ಎನ್ನುವ ಹಿರಿಮೆಗೆ ಸಂಜು ಸ್ಯಾಮ್ಸನ್ ಪಾತ್ರರಾಗಿದ್ದಾರೆ. ಸಂಜು ಸ್ಯಾಮ್ಸನ್ ಸ್ಪೋಟಕ ಬ್ಯಾಟಿಂಗ್ ನೋಡಿದ ಅವರ ಅಭಿಮಾನಿಗಳು 2026ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತದ ಪರ ಒಳ್ಳೆಯ ಓಪನ್ನರ್ ಸಿಕ್ಕರು ಎಂದು ಗುಣಗಾನ ಮಾಡುತ್ತಿದ್ದಾರೆ.
ಇದೀಗ ಸಂಜು ಸ್ಯಾಮ್ಸನ್ ಆಟದ ಜತೆ ಜತೆಗೆ ಅವರ ಖಾಸಗಿ ಬದುಕಿನ ಕುರಿತಾಗಿಯೂ ಚರ್ಚೆಗಳು ಆರಂಭವಾಗಿವೆ. ಸಂಜು ಸ್ಯಾಮ್ಸನ್ ಮಡದಿ ಚಾರುಲತಾ ರಮೇಶ್ ಕಾಲೇಜು ದಿನಗಳಿಂದಲೇ ಸಹಪಾಠಿಗಳಾಗಿದ್ದರು. ಚಾರುಲತಾಗೆ ಸಂಜು ಕಾಲೇಜು ದಿನಗಳಲ್ಲೇ ಮನಸೋತಿದ್ದರು.
ಸಂಜು ಸ್ಯಾಮ್ಸನ್ ಹಾಗೂ ಚಾರುಲತಾ ರಮೇಶ್ ಇಬ್ಬರೂ ಕಾಲೇಜು ದಿನಗಳಿಂದಲೇ ಒಬ್ಬರನ್ನೊಬ್ಬರು ಅರಿತಿದ್ದರು. ಇಬ್ಬರ ಲವ್ ಸ್ಟೋರಿ ಒಂದು ಮೆಸೇಜ್‌ನಿಂದ ಆರಂಭವಾಯಿತು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ಸಂಜು-ಚಾರುಲತಾ ಲವ್ ಸ್ಟೋರಿ ಯಾವ ಸಿನಿಮಾ ಸ್ಟೋರಿಗೂ ಕಮ್ಮಿಯೇನಿಲ್ಲ.
ಇದಾದ ಬಳಿಕ ಬರೋಬ್ಬರಿ 5 ವರ್ಷಗಳ ಕಾಲ ಡೇಟಿಂಗ್ ನಡೆಸಿದ ಈ ಜೋಡಿ 22 ಡಿಸೆಂಬರ್ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಮದುವೆಯಲ್ಲಿ ಕುಟುಂಬ ಹಾಗೂ ಆಪ್ತರು ಸೇರಿದಂತೆ ಕೇವಲ 30 ಮಂದಿಯಷ್ಟೇ ಹಾಜರಿದ್ದರು.
ಸಂಜು ಸ್ಯಾಮ್ಸನ್ ಹಾಗೂ ಚಾರುಲತಾ ರಮೇಶ್ ಒಳ್ಳೆಯ ಸಿರಿತನ ಹೊಂದಿದ್ದರು. ಹೀಗಿದ್ದೂ ಸಿಂಪಲ್ ಆಗಿಯೇ ಮದುವೆಗೆ ಕಾಲಿಡುವ ಮೂಲಕ ಹಲವರ ಪಾಲಿಗೆ ಸ್ಪೂರ್ತಿಯಾದರು. ಇದರ ಜತೆಗೆ ಅದೇ ವರ್ಷ ಕೇರಳದಲ್ಲಿ ಪ್ರವಾಹ ಉಂಟಾಗಿತ್ತು. ಹೀಗಾಗಿ ಸಂಜು ಸ್ಯಾಮ್ಸನ್ 15 ಲಕ್ಷ ರುಪಾಯಿಗಳನ್ನು ಕೇರಳ ಮುಖ್ಯಮಂತ್ರಿ ಪ್ರವಾಹ ಪರಿಹಾರ ನಿಧಿಗೆ ಅರ್ಪಿಸುವ ಮೂಲಕ ಮಾದರಿಯಾಗಿದ್ದರು.
ಸಂಜು ಸ್ಯಾಮ್ಸನ್ ಕ್ರಿಸ್ಟಿಯನ್ ಆಗಿದ್ದು, ಚಾರುಲತಾ ರಮೇಶ್ ಹಿಂದೂ ನಾಯಕ ಕುಟುಂಬದವರಾಗಿದ್ದಾರೆ. ಹೀಗಾಗಿ ಇವರು ವಿಶೇಷ ವಿವಾಹ ಕಾಯ್ದೆ(ಸ್ಪೆಷೆಲ್ ಮ್ಯಾರೆಜ್ ಆಕ್ಟ್) ಅಡಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.