2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಅನನುಭವಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಟ್ರೋಫಿ ಜಯಿಸುವ ಮೂಲಕ ಚಾರಿತ್ರಿಕ ಸಾಧನೆ ಮಾಡಿತ್ತು.
ರೋಹಿತ್ ಶರ್ಮಾ 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲೇ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಧೋನಿ ನೇತೃತ್ವದ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆಲುವಿನಲ್ಲಿ ರೋಹಿತ್ ಶರ್ಮಾ ಕೂಡಾ ಪ್ರಮುಖ ಪಾತ್ರವಹಿಸಿದ್ದರು.
2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಮಧ್ಯಮ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ಕೆಲವೊಂದು ಉಪಯುಕ್ತ ಇನಿಂಗ್ಸ್ ಆಡಿದ್ದರು. ಪಾಕಿಸ್ತಾನ ವಿರುದ್ದದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ರೋಹಿತ್ 16 ಎಸೆತಗಳಲ್ಲಿ 30 ರನ್ ಸಿಡಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾಗಿದ್ದರು.
ಇದಾಗಿ 14 ವರ್ಷಗಳು ಕಳೆದಿವೆ. ಆದರೆ ಮತ್ತೊಮ್ಮೆ ಟೀಂ ಇಂಡಿಯಾ ಟಿ20 ವಿಶ್ವಕಪ್ ಟ್ರೋಫಿ ಜಯಿಸಲು ಸಾಧ್ಯವಾಗಿಲ್ಲ. ಇದೀಗ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಮುಂಬರುವ ಟಿ20 ಟೂರ್ನಿಯನ್ನು ಗೆಲ್ಲುವ ಶಪಥ ಮಾಡಿದ್ದಾರೆ.
ಈ ಕುರಿತಂತೆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ಸೆಪ್ಟೆಂಬರ್ 24, 2007, ಜೊಹಾನ್ಸ್‌ಬರ್ಗ್. ಆ ದಿನ ಕೋಟ್ಯಾಂತರ ಭಾರತೀಯರ ಕನಸು ನನಸಾದ ದಿನ. ನಮ್ಮಂತಹ ಅನನುಭವಿ ಆಟಗಾರರನ್ನೊಳಗೊಂಡ ತಂಡ ಇತಿಹಾಸವನ್ನು ನಿರ್ಮಿಸಿತ್ತು.
ಇದಾಗಿ 14 ವರ್ಷಗಳು ಕಳೆದಿವೆ. ನಾವೀಗ ಸಾಕಷ್ಟು ದೂರ ಕ್ರಮಿಸಿದ್ದೇವೆ. ನಾವೀಗಾಗಲೇ ಸಾಕಷ್ಟು ಇತಿಹಾಸವನ್ನು ನಿರ್ಮಿಸಿದ್ದೇವೆ. ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇವೆ. ಹಾಗಂತ ನಮ್ಮ ಸ್ಪೂರ್ತಿಯನ್ನು ಕಳೆದುಕೊಂಡಿಲ್ಲ ಎಂದಿದ್ದಾರೆ.
ಯಾಕೆಂದರೆ ನಾವೆಂದಿಗೂ ಕೈಚೆಲ್ಲಿ ಕುಳಿತಿಲ್ಲ. ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾವೆಲ್ಲರೂ ನಮ್ಮ ಶಕ್ತಿಮೀರಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಇತಿಹಾಸ ಮರುಕಳಿಸುವಂತೆ ಮಾಡುತ್ತೇವೆ. ನಾವು ಅದಕ್ಕಾಗಿಯೇ ಸಜ್ಜಾಗಿದ್ದೇವೆ. ಟಿ20 ಟ್ರೋಫಿ ನಮ್ಮದು, ಅದನ್ನು ಸಾಕಾರ ಮಾಡೋಣ ಎಂದು ರೋಹಿತ್ ಶರ್ಮಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
team india
ಕುತೂಹಲಕಾರಿ ಸಂಗತಿಯೆಂದರೆ 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ರೋಹಿತ್ ಶರ್ಮಾ, ಇದೀಗ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪ್ರತಿನಿಧಿಸುತ್ತಿರುವ ಏಕೈಕ ಆಟಗಾರ ಎನಿಸಿದ್ದಾರೆ.
ಈ ಬಾರಿ ಯುಎಇನಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 17ರಿಂದ ಆರಂಭವಾಗಲಿದ್ದು, ಮೊದಲಿಗೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಇನ್ನು ಅಕ್ಟೋಬರ್ 23ರಿಂದ ಸೂಪರ್ 12 ಪಂದ್ಯಗಳು ಆರಂಭವಾಗಲಿವೆ.
ಇನ್ನು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಅಕ್ಟೋಬರ್ 24ರಂದು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ
2007ರಲ್ಲಿ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಬಾರಿ ಟೀಂ ಇಂಡಿಯಾ ಮೆಂಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಹೀಗಾಗಿ ಮತ್ತೊಮ್ಮೆ 14 ವರ್ಷಗಳ ಬಳಿಕ ಟಿ20 ವಿಶ್ವಕಪ್ ಟೀಂ ಇಂಡಿಯಾ ಪಾಲಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.