IPL 2021: ಪಂಜಾಬ್ ಮಣಿಸಿದ ಬೆನ್ನಲ್ಲೇ ಉಳಿದ ತಂಡಗಳಿಗೆ ಎಚ್ಚರಿಕೆ ಕೊಟ್ಟ ರೋಹಿತ್ ಶರ್ಮಾ..!

First Published | Sep 29, 2021, 2:52 PM IST

ಅಬುಧಾಬಿ: ಐದು ಬಾರಿಯ ಐಪಿಎಲ್‌ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ (Mumbai Indians) ತಂಡವು ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ದದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸೋಲಿನ ಸರಪಳಿಯಿಂದ ಕಡೆಗೂ ಪಾರಾಗಿದೆ. ಯುಎಇ ಚರಣದ ಮೊದಲ ಮೂರು ಪಂದ್ಯಗಳಲ್ಲಿ ಆಘಾತಕಾರಿ ಸೋಲು ಕಂಡಿದ್ದ ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡವು ತಿರುಗೇಟು ನೀಡುವ ಮುನ್ಸೂಚನೆ ನೀಡಿದೆ. ಇದೆಲ್ಲದರ ನಡುವೆ ಚಾಂಪಿಯನ್‌ ನಾಯಕ ರೋಹಿತ್ ಶರ್ಮಾ ಉಳಿದ ತಂಡಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಯುಎಇ ಚರಣದ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್‌ ಕೊನೆಗೂ ಗೆಲುವಿನ ಹಳಿಗೆ ಮರಳುವಲ್ಲಿ ಯಶಸ್ವಿಯಾಗಿದೆ. ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ನಡೆದ 42ನೇ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಮುಂಬೈ ಇಂಡಿಯನ್ಸ್‌ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
 

ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್‌ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಈ ಮೂಲಕ ಪ್ಲೇ ಆಫ್‌ಗೇರುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. 

Tap to resize

ಇದೇ ವೇಳೆ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್ ಶರ್ಮಾ, ತಂಡದಲ್ಲಿ ಸಾಕಷ್ಟು ಸುಧಾರಣೆಯಾಗಬೇಕು ಹಾಗೂ ಪ್ಲೇ ಆಫ್‌ಗೇರುವ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಹೇಳಿದ್ದಾರೆ.

ಒಂದು ತಂಡವಾಗಿ ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ. ಚುಟುಕು ಕ್ರಿಕೆಟ್‌ ಮಾದರಿಯಲ್ಲಿ ಕಠಿಣ ಪರಿಶ್ರಮದಿಂದಷ್ಟೇ ಫಲ ಸಿಗಲು ಸಾಧ್ಯ. ಇದೊಂದು ದೀರ್ಘಕಾಲಿಕ ಸರಣಿ. ನಮ್ಮ ತಂಡದಲ್ಲಿರುವ ಆಟಗಾರರು ಗೆಲುವಿನ ಹೋರಾಟಕ್ಕೆ ಸಜ್ಜಾಗಿದ್ದಾರೆ ಎಂದು ಪಂಜಾಬ್‌ ಎದುರಿನ ಗೆಲುವಿನ ಬಳಿಕ ರೋಹಿತ್ ಶರ್ಮಾ ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಹಾರ್ದಿಕ್ ಪಾಂಡ್ಯ ಆಡಿದ ರೀತಿ ತಂಡಕ್ಕೆ ಹಾಗೂ ಅವರ ಪಾಲಿಗೆ ಸಾಕಷ್ಟು ಮಹತ್ವದ್ದಾಗಿದೆ. ಅದಕ್ಕಿಂತ ಮುಖ್ಯವಾಗಿ ಹಾರ್ದಿಕ್‌ ಪಾಂಡ್ಯ ಕ್ರೀಸ್‌ನಲ್ಲಿ ಕೆಲಕಾಲ ತಳವೂರಿ ಬ್ಯಾಟಿಂಗ್ ಮಾಡಿದ್ದು ಸಾಕಷ್ಟು ಮಹತ್ವದ ಸಂಗತಿ. ಇಶಾನ್ ಕಿಶನ್‌ ಅವರನ್ನು ತಂಡದಿಂದ ಕೈಬಿಡುವ ತೀರ್ಮಾನ ಅತ್ಯಂತ ಕಠಿಣವಾಗಿತ್ತು. ತಂಡದಲ್ಲಿರುವ ಇತರರಿಗೆ ಅವಕಾಶ ನೀಡುವ ಉದ್ದೇಶದಿಂದ ಕಿಶನ್ ಅವರನ್ನು ಕೈ ಬಿಡಬೇಕಾಯಿತು.

ಸೌರಭ್ ತಿವಾರಿ ಚೆನ್ನಾಗಿಯೇ ಬ್ಯಾಟಿಂಗ್ ನಡೆಸಿದರು. ಚೆನ್ನೈ ಸೂಪರ್ ಕಿಂಗ್ಸ್ ಎದುರು ತಿವಾರಿ ಅರ್ಧಶತಕ ಬಾರಿಸಿದ್ದರು. ಪಂಜಾಬ್ ವಿರುದ್ದ ಕೂಡಾ ಸೌರಭ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ನಾನು ಯಾರನ್ನೂ ಹೊರಗಿಟ್ಟಿಲ್ಲ. ಇಶಾನ್ ಕಿಶನ್‌ ಕೂಡಾ ತಂಡ ಕೂಡಿಕೊಳ್ಳಲು ನಾವು ಬಯಸುತ್ತೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಯುಎಇನಲ್ಲಿರುವ ಪಿಚ್‌ಗಳು ನಾವು ಇಂಗ್ಲೆಂಡ್‌ನಲ್ಲಿ ಆಡಿದ ಪಿಚ್‌ಗಳಿಗಿಂತ ಉತ್ತಮವಾಗಿವೆ. ಕಳೆದ ವರ್ಷಾಂತ್ಯದಲ್ಲಿ ಇದ್ದಂತಹ ಪಿಚ್‌ ಗುಣಮಟ್ಟ ಈಗಲೂ ಹಾಗೆಯೇ ಇದೆ. ನಮ್ಮ ತಂತ್ರಗಳಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ಎದುರಾಳಿ ತಂಡದ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಆಯ್ಕೆ ಮಾಡಬೇಕು ಎಂದು ಹಿಟ್‌ ಮ್ಯಾನ್ ಹೇಳಿದ್ದಾರೆ.

ಪೊಲ್ಲಾರ್ಡ್ ನಮ್ಮ ತಂಡದ ಪ್ರಮುಖ ಆಟಗಾರ. ಕಳೆದ ಹಲವು ವರ್ಷಗಳಿಂದ ಅವರು ನಮ್ಮ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಅದು ಬ್ಯಾಟಿಂಗ್‌ನಲ್ಲೇ ಇರಲಿ, ಬೌಲಿಂಗ್‌ನಲ್ಲೇ ಇರಲಿ, ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಪೊಲ್ಲಾರ್ಡ್‌ ಪಂಜಾಬ್‌ ರಾಹುಲ್ ಹಾಗೂ ಗೇಲ್ ಅವರನ್ನು ಒಂದೇ ಓವರ್‌ನಲ್ಲಿ ಬಲಿ ಪಡೆದದ್ದು ಮಹತ್ವವೆನಿಸಿತು. ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು ಖುಷಿ ಕೊಟ್ಟಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಒಟ್ಟಿನಲ್ಲಿ ಮುಂಬೈ ಇಂಡಿಯನ್ಸ್‌ 11 ಪಂದ್ಯಗಳನ್ನಾಡಿ ಸದ್ಯ 10 ಅಂಕಗಳನ್ನು ಕಲೆಹಾಕಿದ್ದು, ಇನ್ನುಳಿದ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ. ಇಂತಹ ಪರಿಸ್ಥಿತಿಯನ್ನು ಎದುರಿಸಿ ಚಾಂಪಿಯನ್‌ ಆಗಿರುವ ಮುಂಬೈ ಇಂಡಿಯನ್ಸ್ ಬಗ್ಗೆ ಉಳಿದ ತಂಡಗಳು ಸಾಕಷ್ಟು ಎಚ್ಚರದಿಂದಿರಬೇಕು.

Latest Videos

click me!