ತಂದೆಯಾದ ವೇಗಿ ಜಸ್ಪ್ರೀತ್ ಬುಮ್ರಾ; ಮಗುವಿನ ಮುದ್ದಾದ ಹೆಸರಿಟ್ಟ ಟೀಂ ಇಂಡಿಯಾ ವೇಗಿ..!

First Published | Sep 4, 2023, 12:09 PM IST

ಮುಂಬೈ(ಸೆ.04): ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹಾಗೂ ಸಂಜನಾ ಗಣೇಶನ್ ದಂಪತಿಗಳು ಇದೀಗ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಜಸ್ಪ್ರೀತ್ ಬುಮ್ರಾ ಹಾಗೂ ಸಂಜನಾ ಗಣೇಶನ್ ಜೋಡಿ ಇದೀಗ ತಮ್ಮ ಕುಟುಂಬಕ್ಕೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

ಏಷ್ಯಾಕಪ್‌ ಟೂರ್ನಿಯನ್ನು ಅರ್ಧಕ್ಕೆ ತೊರೆದು ತವರಿಗೆ ವಾಪಾಸ್ಸಾಗಿದ್ದ ಜಸ್ಪ್ರೀತ್ ಬುಮ್ರಾ, ಇದೀಗ ತಮ್ಮ ಚೊಚ್ಚಲ ಮಗುವನ್ನು ಸ್ವಾಗತಿಸಿದ್ದಾರೆ. ಪತ್ನಿ ಸಂಜನಾ ಗಣೇಶನ್ ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
 

ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಭಾಗವಾಗಿ ಶ್ರೀಲಂಕಾಗೆ ತೆರಳಿದ್ದ ಜಸ್ಪ್ರೀತ್ ಬುಮ್ರಾ, ಇದೀಗ ತಂದೆಯ ಜವಾಬ್ದಾರಿಯನ್ನು ನಿಭಾಯಿಸುವ ಸಲುವಾಗಿ ನೇಪಾಳ ಎದುರಿನ ಪಂದ್ಯಕ್ಕೂ ಮುನ್ನ ದಿಢೀರ್ ಎನ್ನುವಂತೆ ಕೊಲಂಬೋದಿಂದ ನಿನ್ನೆಯಷ್ಟೇ ಮುಂಬೈಗೆ ವಾಪಸ್ಸಾಗಿದ್ದರು.

Latest Videos


ಇದೀಗ ತಾವು ತಂದೆಯಾಗಿರುವ ವಿಚಾರವನ್ನು ಸ್ವತಃ ಬುಮ್ರಾ ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ. ನಮ್ಮ ಪುಟ್ಟ ಕುಟುಂಬ ಬೆಳೆದಿದೆ & ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಸಂತೋಷವಾಗಿದೆ. ಇಂದು ಬೆಳಗ್ಗೆ ನಾವು ನಮ್ಮ ಕುಟುಂಬಕ್ಕೆ ಗಂಡು ಮಗುವನ್ನು ಸ್ವಾಗತಿಸಿದ್ದೇವೆ.

'ಅಂಗದ್‌ ಜಸ್ಪ್ರೀತ್ ಬುಮ್ರಾ' ಈ ಜಗತ್ತಿಗೆ ಬಂದಿದ್ದಾನೆ. ನಮಗೀಗ ಚಂದ್ರನ ಮೇಲೆ ನಿಂತಂಥಹ ಅನುಭವವಾಗುತ್ತಿದೆ. ಇದು ನಮ್ಮ ಬದುಕಿನ ಮತ್ತೊಂದು ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದಂತಾಗಿದೆ ಎಂದು ಬುಮ್ರಾ ಬರೆದುಕೊಂಡಿದ್ದಾರೆ.

ಜಸ್ಪ್ರೀತ್ ಬುಮ್ರಾ ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾ ಪಾಲಿಗೆ ಪ್ರಮುಖ ವೇಗದ ಅಸ್ತ್ರ ಎನಿಸಿಕೊಂಡಿದ್ದಾರೆ. ಭಾರತದ ಪಿಚ್‌ನಲ್ಲಿ ಬುಮ್ರಾ ದಾಳಿ ಎದುರಿಸುವುದು ಎದುರಾಳಿ ಪಡೆಗೆ ಸುಲಭದ ಮಾತಲ್ಲ.

ಬೆನ್ನು ನೋವಿನ ಸಮಸ್ಯೆಯಿಂದಾಗಿ ಸುಮಾರು ಒಂದು ವರ್ಷಗಳ ಕಾಲ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದ ಜಸ್ಪ್ರೀತ್ ಬುಮ್ರಾ, ಇದೀಗ ಸಂಪೂರ್ಣ ಫಿಟ್ನೆಸ್ ಸಾಧಿಸಿ ಐರ್ಲೆಂಡ್ ಎದುರಿನ ಸರಣಿ ವೇಳೆಗೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ್ದರು.
 

ಐರ್ಲೆಂಡ್ ಎದುರು ನಾಯಕನಾಗಿ ಹಾಗೂ ವೇಗಿಯಾಗಿ ಯಶಸ್ಸು ಕಂಡಿದ್ದ ಬುಮ್ರಾ, ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಕೂಡಿಕೊಂಡಿದ್ದರು. ಆದರೆ ಪಾಕಿಸ್ತಾನ ಎದುರಿನ ಮೊದಲ ಪಂದ್ಯದಲ್ಲಿ ಬುಮ್ರಾ 16 ರನ್ ಸಿಡಿಸಿದ್ದರು. ಆದರೆ ಬೌಲಿಂಗ್ ಮಾಡಲು ಮಳೆರಾಯ ಅವಕಾಶ ಕೊಟ್ಟಿರಲಿಲ್ಲ.

ಪಾಕಿಸ್ತಾನ ಎದುರಿನ ಪಂದ್ಯ ಮಳೆಯಿಂದಾಗಿ ಅರ್ಧಕ್ಕೆ ರದ್ದಾಗಿತ್ತು. ಇನ್ನು ಇದೀಗ ಬುಮ್ರಾ ತವರಿಗೆ ವಾಪಸ್ಸಾಗಿರುವುದರಿಂದ ಇಂದು ನಡೆಯಲಿರುವ ನೇಪಾಳ ಎದುರಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಬುಮ್ರಾ ಅನುಪಸ್ಥಿತಿಯಲ್ಲಿ ಶಮಿ ಆಡುವ ಹನ್ನೊಂದರ ಬಳಗ ಕೂಡಿಕೊಳ್ಳುವ ಸಾಧ್ಯತೆಯಿದೆ.

ಇದರ ಹೊರತಾಗಿಯೂ ಜಸ್ಪ್ರೀತ್ ಬುಮ್ರಾ, ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದ ವೇಳೆಗೆ ಭಾರತ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಬುಮ್ರಾ ತಂಡ ಕೂಡಿಕೊಂಡರೆ ಭಾರತದ ಬೌಲಿಂಗ್ ಪಡೆ ಮತ್ತಷ್ಟು ಸಧೃಡವಾಗಲಿದೆ.
 

ಜಸ್ಪ್ರೀತ್ ಬುಮ್ರಾ ಮತ್ತಷ್ಟು ಪಂದ್ಯಗಳನ್ನಾಡುವುದರಿಂದ ಪ್ರತಿಷ್ಠಿತ ವಿಶ್ವಕಪ್ ಟೂರ್ನಿಗೆ ಉತ್ತಮ ರೀತಿಯಲ್ಲಿ ತಯಾರಿ ನಡೆಸಲು ಅನುಕೂಲವಾಗಲಿದೆ. ಏಷ್ಯಾಕಪ್ ಬಳಿಕ ಟೀಂ ಇಂಡಿಯಾ, ಏಕದಿನ ವಿಶ್ವಕಪ್‌ಗೂ ಮುನ್ನ ತವರಿನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಎದುರು 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ.
 

click me!