ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ ವಿರುದ್ಧ ಆಡಿತ್ತು. ಆದರೆ ಮಳೆಯಿಂದ ಪಂದ್ಯ ರದ್ದಾಯಿತು. ಹೀಗಾಗಿ ಉಭಯ ತಂಡಗಳು ಒಂದೊಂದು ಅಂಕ ಹಂಚಿಕೊಂಡಿದೆ.
ಏಷ್ಯಾಕಪ್ ಟೂರ್ನಿ ಇನ್ನುಳಿದ ಪಂದ್ಯ ಟೀಂ ಇಂಡಿಯಾಗೆ ಅತ್ಯಂತ ಮಹತ್ವದ್ದಾಗಿದೆ. ದ್ವಿತೀಯ ಪಂದ್ಯದಲ್ಲಿ ಟೀಂ ಇಂಡಿಯಾ ನೇಪಾಳ ವಿರುದ್ಧ ಹೋರಾಟ ನಡೆಸಲಿದೆ.
ಈ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾಗೆ ಹಿನ್ನಡೆಯಾಗಿದೆ. ಕಾರಣ ಸುದೀರ್ಘ ದಿನಗಳ ಬಳಿಕ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ ವೇಗಿ ಜಸ್ಪ್ರೀತ್ ಬುಮ್ರಾ ಇದೀಗ ತವರಿಗೆ ಮರಳಿದ್ದಾರೆ.
ಶ್ರೀಲಂಕಾದ ಪಲ್ಲಕೆಲೆಯಲ್ಲಿ ಭಾರತದ ಪಂದ್ಯಗಳು ನಡೆಯಲಿದೆ. ಆದರೆ ನೇಪಾಳ ವಿರುದ್ಧದ ಪಂದ್ಯಕ್ಕೂ ಮೊದಲು ಜಸ್ಪ್ರೀತ್ ವೇಗಿ, ಮುಂಬೈಗೆ ಮರಳಿದ್ದಾರೆ.
ಫಿಟ್ನೆಸ್, ಇಂಜುರಿ ಕಾರಣದಿಂದ ತಂಡದಿಂದ ಹೊರಗುಳಿದಿದ್ದ ಬುಮ್ರಾ, ಏಷ್ಯಾಕಪ್ ಟೂರ್ನಿ ಮೂಲಕ ಕಮ್‌ಬ್ಯಾಕ್ ಮಾಡಿದ್ದರು. ಇದೀಗ ಬುಮ್ರಾ ತವರಿಗೆ ಮರಳಿರುವುದು ಫಿಟ್ನೆಸ್ ಕಾರಣದಿಂದ ಅಲ್ಲ.
ಸದ್ಯ ಬುಮ್ರಾ ಸಂಪೂರ್ಣ ಫಿಟ್ ಆಗಿದ್ದಾರೆ. ವೈಯುಕ್ತಿಕ ಕಾರಣದಿಂದ ಬುಮ್ರಾ ದಿಢೀರ್ ತವರಿಗೆ ಮರಳಿದ್ದಾರೆ. ಬುಮ್ರಾ ತವರಿಗೆ ವಾಪಸ್ ಆಗಲು ಬಿಸಿಸಿಐ ಅನುಮತಿ ಪಡೆದುಕೊಂಡಿದ್ದಾರೆ.
ನೇಪಾಳ ವಿರುದ್ಧದ ಭರ್ಜರಿ ಗೆಲುವು ದಾಖಲಿಸಿ ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಲು ಟೀಂ ಇಂಡಿಯಾ ತಯಾರಾಗಿದೆ. ಸೂಪರ್ 4 ಹಂತದ ಪಂದ್ಯದ ವೇಳೆ ಬುಮ್ರಾ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ.