ಬಹುನಿರೀಕ್ಷಿತ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯವು ಸೆಪ್ಟೆಂಬರ್ 17ರಂದು ಕೊಲಂಬೊದಲ್ಲಿ ಆರಂಭವಾಗಲಿದ್ದು, ಪ್ರಶಸ್ತಿಗಾಗಿ ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳು ಕಾದಾಡಲಿವೆ.
ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತಕ್ಕೆ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಎಂಟ್ರಿಕೊಟ್ಟಿದ್ದವು. ಈ ಪೈಕಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಫೈನಲ್‌ಗೇರಲು ವಿಫಲವಾಗಿವೆ.
ಕಳೆದ 15 ಏಷ್ಯಾಕಪ್ ಆವೃತ್ತಿಯ ಪೈಕಿ ಭಾರತ 7 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರೆ, ಶ್ರೀಲಂಕಾ 6 ಬಾರಿ ಏಷ್ಯಾಕಪ್‌ಗೆ ಮುತ್ತಿಕ್ಕಿದ್ದು, ಭಾರತದ ದಾಖಲೆ ಸರಿಗಟ್ಟಲು ಎದುರು ನೋಡುತ್ತಿದೆ.
ಲಂಕಾದ ಸ್ಪಿನ್ನರ್ ಮಹೀಶ್ ತೀಕ್ಷಣ ಮೂರನೇ ಗ್ರೇಡ್‌ನ ಸ್ನಾಯುಸೆಳೆತಕ್ಕೆ ಒಳಗಾಗಿದ್ದು, ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ತೀಕ್ಷಣ ಏಷ್ಯಾಕಪ್ ಫೈನಲ್‌ಗೆ ಅಲಭ್ಯರಾಗಿದ್ದರೂ, ಏಕದಿನ ವಿಶ್ವಕಪ್‌ಗೆ ಲಂಕಾ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆಯಿದೆ.
ಮಹೀಶ್ ತೀಕ್ಷಣ ಪಾಕಿಸ್ತಾನ ಎದುರಿನ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ಮಾಡುವ ವೇಳೆ ಬಲಗಾಲಿನ ಸ್ನಾಯುಸೆಳೆತಕ್ಕೆ ಒಳಗಾಗಿದ್ದು, ಭಾನುವಾರ ಭಾರತ ವಿರುದ್ದ ನಡೆಯಲಿರುವ ಫೈನಲ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಲಂಕಾ ತಂಡವು ಈಗಾಗಲೇ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ವನಿಂದು ಹಸರಂಗ, ದುಸ್ಮಂತಾ ಚಮೀರಾ, ಲಹಿರು ಮದುಶನಕ ಹಾಗೂ ಲಹಿರು ಕುಮಾರ, ಗಾಯದ ಸಮಸ್ಯೆಯಿಂದಾಗಿ ಏಷ್ಯಾಕಪ್‌ನಿಂದ ಹೊರಗುಳಿದಿದ್ದರು. ಈಗ ತೀಕ್ಷಣ ಅವರ ಅಲಭ್ಯತೆ ಲಂಕಾದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮಹೀಶ್ ತೀಕ್ಷಣ 2023ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಪ್ರಮುಖ ಬೌಲಿಂಗ್ ಅಸ್ತ್ರವಾಗಿ ಗುರುತಿಸಿಕೊಂಡಿದ್ದರು. ಈ ವರ್ಷ ಮಹೀಶ್ ತೀಕ್ಷಣ ಕೇವಲ 15 ಪಂದ್ಯಗಳನ್ಣಾಡಿ 31 ವಿಕೆಟ್ ಕಬಳಿಸುವ ಮೂಲಕ ಲಂಕಾ ಪರ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಅಗಿ ಹೊರಹೊಮ್ಮಿದ್ದರು.
ಮಹೀಶ್ ತೀಕ್ಷಣ ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಲಂಕಾ ತಂಡದ ಕೀ ಬೌಲರ್ ಆಗಿ ಹೊರಹೊಮ್ಮುವ ಸಾಧ್ಯತೆಯಿದೆ. ಹೀಗಾಗಿ ತೀಕ್ಷಣ ಆದಷ್ಟು ಬೇಗ ಚೇತರಿಸಿಕೊಳ್ಳಲು ಲಂಕಾ ತಂಡವು ಪ್ರಾರ್ಥಿಸುತ್ತಿದೆ.
ಅಕ್ಟೋಬರ್ 05ರಿಂದ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಳ್ಳಲಿವೆ. ತಂಡಗಳ 15 ಆಟಗಾರರ ಹೆಸರನ್ನು ಅಂತಿಮಗೊಳಿಸಲು ಸೆಪ್ಟೆಂಬರ್ 28 ಕೊನೆಯ ದಿನಾಂಕವಾಗಿದೆ.