IPL 2022: ನಿಗದಿಗಿಂತ ಒಂದು ವಾರ ಮುಂಚಿತವಾಗಿ ಐಪಿಎಲ್ ಟೂರ್ನಿ ಆರಂಭ..!

First Published Jan 22, 2022, 6:16 PM IST

ಬೆಂಗಳೂರು: 2022ನೇ ಸಾಲಿನ ಐಪಿಎಲ್ ಟೂರ್ನಿಯ ಮೆಗಾ ಹರಾಜಿಗೆ (IPL Mega Auction) ಈಗಾಗಲೇ ಭರದ ಸಿದ್ದತೆಗಳು ಆರಂಭವಾಗಿವೆ. ಹೀಗಿರುವಾಗಲೇ ಬಿಸಿಸಿಐ(BCCI) ಇಂದು(ಜ.22) ಎಲ್ಲಾ ಫ್ರಾಂಚೈಸಿಗಳ ಜತೆಗೆ ಮಹತ್ವದ ಸಭೆಯೊಂದನ್ನು ನಡೆಸಿದ್ದು, ಈ ಮೊದಲು ನಿಗದಿ ಮಾಡಲಾಗಿದ್ದ ದಿನಾಂಕಕ್ಕಿಂತ ಒಂದು ವಾರ ಮುಂಚಿತವಾಗಿಯೇ 15ನೇ ಆವೃತ್ತಿಯ  ಇಂಡಿಯನ್‌ ಪ್ರೀಮಿಯರ್ ಲೀಗ್ (Indian Premier League) ಟೂರ್ನಿ ಆರಂಭಿಸಲು ಬಿಸಿಸಿಐ ತೀರ್ಮಾನಿಸಿದೆ ಎಂದು ಖ್ಯಾತ ಕ್ರಿಕೆಟ್ ವೆಬ್‌ಸೈಟ್ ಕ್ರಿಕ್‌ಬಜ್ ವರದಿ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

2022ರ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯು ಏಪ್ರಿಲ್ 02ರಿಂದ ಆರಂಭವಾಗಲಿದೆ ಎಂದು ಈ ಮೊದಲು ವರದಿಯಾಗಿತ್ತು. ಆದರೆ ಇದೀಗ ಬಿಸಿಸಿಐ ಈ ಮೊದಲು ತೀರ್ಮಾನಿಸಿದ ದಿನಾಂಕಕ್ಕಿಂತ ಒಂದು ವಾರ ಮುಂಚಿತವಾಗಿ ಅಂದರೆ ಮಾರ್ಚ್‌ 27ರಿಂದ ಐಪಿಎಲ್‌ ಆಯೋಜಿಸಲು ತೀರ್ಮಾನಿಸಿದೆ ಎಂದು ಕ್ರಿಕೆಟ್ ವೆಬ್‌ಸೈಟ್ ಕ್ರಿಕ್‌ಬಜ್ ವರದಿ ಮಾಡಿದೆ.

ಈ ಸಭೆಯಲ್ಲಿ ಪ್ರಾಥಮಿಕ ಹಂತದ ಮಾತುಕತೆಯಲ್ಲಿ ಸಂಪೂರ್ಣ ಐಪಿಎಲ್ ಟೂರ್ನಿಯನ್ನು ಮಹಾರಾಷ್ಟ್ರದಲ್ಲೇ ನಡೆಸಲು ಚರ್ಚಿಸಲಾಗಿದೆ. ಹಾಗೂ ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಮುಂಬೈನ ವಾಂಖೆಡೆ ಮೈದಾನ ಆತಿಥ್ಯ ವಹಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಈ ಮೊದಲೇ ವರದಿಯಾದಂತೆ ಬಿಸಿಸಿಐ ಈ ಬಾರಿ ಶತಾಯಗತಾಯ ಭಾರತದಲ್ಲೇ ಐಪಿಎಲ್ ಟೂರ್ನಿ ಆಯೋಜಿಸಲು ತೀರ್ಮಾನಿಸಿದೆ. ಅದರಂತೆ ಮುಂಬೈ ಹಾಗೂ ಪುಣೆಯಲ್ಲಿ ಒಟ್ಟು 4 ಸ್ಟೇಡಿಯಂಗಳಲ್ಲಿ ಐಪಿಎಲ್‌ ಪಂದ್ಯಗಳು ಜರುಗುವ ಸಾಧ್ಯತೆಯಿದೆ. ಯಾಕೆಂದರೆ ಈ 4 ಸ್ಟೇಡಿಯಂಗಳು ಸಮೀಪದಲ್ಲಿವೆ.

ಬಿಸಿಸಿಐ ಆಯೋಜಿಸಿದ್ದ ಈ ಸಭೆಯಲ್ಲಿ ಅಂಬಾನಿ, ಎನ್. ಶ್ರೀನಿವಾಸನ್‌, ಶಾರುಕ್ ಖಾನ್, ಪ್ರೀತಿ ಝಿಂಟಾ, ಪಾರ್ತ್ ಜಿಂದಾಲ್‌ ಸೇರಿದಂತೆ ಎಲ್ಲಾ ಫ್ರಾಂಚೈಸಿಯ ಮಾಲೀಕರು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಮುಖ್ಯವಾಗಿ ಟೂರ್ನಿ ಆಯೋಜನೆಯ ಸ್ಥಳದ ಬಗ್ಗೆ ಚರ್ಚಿಸಲಾಗಿದ್ದು, ಒಂದು ವೇಳೆ ಟೂರ್ನಿಯು ಮಾರ್ಚ್‌ ಕೊನೆಯಲ್ಲಿ ಆರಂಭವಾದರೆ, ಮೇ ಕೊನೆಯ ವಾರದಲ್ಲಿ ಮುಕ್ತಾಯವಾಗಲಿದೆ ಎಂದು ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಮುಂಬೈ-ಪುಣೆ ಮಾತ್ರವಲ್ಲದೇ, ಯುಎಇ ಹಾಗೂ ದಕ್ಷಿಣ ಆಫ್ರಿಕಾದಲ್ಲಿ 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಆಯೋಜಿಸುವ ಕುರಿತಂತೆ ಚರ್ಚಿಸಲಾಯಿತು. ಆದರೆ ಬಹುತೇಕ ಫ್ರಾಂಚೈಸಿಗಳು ಯುಎಇನಲ್ಲಿ ಐಪಿಎಲ್‌ ಆಯೋಜಿಸಲು ವಿರೋಧ ವ್ಯಕ್ತಪಡಿಸಿವೆ ಎನ್ನಲಾಗಿವೆ.

शारजाह

ಯಾಕೆಂದರೆ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಹೆಚ್ಚಾಗಿ ಇಬ್ಬನಿ ಬೀಳುವ ಸಾಧ್ಯತೆ ಇರುವುದರಿಂದ ಟಾಸ್ ಮಹತ್ವದ ಪಾತ್ರ ನಿಭಾಯಿಸಲಿದೆ. ಟಾಸ್‌ ಫ್ಯಾಕ್ಟರ್‌ ಗಮನದಲ್ಲಿಟ್ಟುಕೊಂಡು ಯುಎಇನಲ್ಲಿ ಐಪಿಎಲ್ ಆಯೋಜಿಸಲು ಫ್ರಾಂಚೈಸಿಗಳು ವಿರೋಧ ವ್ಯಕ್ತಪಡಿಸಿವೆ ಎನ್ನಲಾಗಿವೆ.

ಮಹಾರಾಷ್ಟ್ರದಲ್ಲಿ ಕೋವಿಡ್‌ 19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್‌ ಟೂರ್ನಿಯನ್ನು ಎಲ್ಲಿ ಆಯೋಜಿಸಬೇಕು ಎನ್ನುವುದನ್ನು ಫೆಬ್ರವರಿ 20ರಂದು ಬಿಸಿಸಿಐ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಇದೇ ಜನವರಿ 24ರಂದು ಮಹಾರಾಷ್ಟ್ರದಲ್ಲಿ ಶಾಲೆಗಳು ಆರಂಭವಾಗುತ್ತಿರುವುದು ಬಿಸಿಸಿಐ ಆತ್ಮವಿಶ್ವಾಸವನ್ನು ಹೆಚ್ಚಿಸುವಂತೆ ಮಾಡಿದೆ.

ಇನ್ನು ಇದೇ ವೇಳೆ ಜನವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿಯೇ ಐಪಿಎಲ್ ಆಟಗಾರರ ಹರಾಜು ನಡೆಸಲು ಬಿಸಿಸಿಐ ಸ್ಪಷ್ಟ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ಐಪಿಎಲ್ ಮೆಗಾ ಹರಾಜು ಮುಂಬೈಗೆ ಸ್ಥಳಾಂತರವಾಗಲಿದೆ ಎನ್ನುವ ಗಾಳಿಸುದ್ದಿಗೆ ತೆರೆ ಬಿದ್ದಿದೆ.

click me!