ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಯುಎಇ ಚರಣದ ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದಾಗ ಅಂದರೆ ಸೆಪ್ಟೆಂಬರ್ 16ರಂದು ದಿಢೀರ್ ಎನ್ನುವಂತೆ ಮುಂಬರುವ ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ತಾವು ಭಾರತ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದರು.
ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಈ ವಿಚಾರವನ್ನು ವಿರಾಟ್ ಕೊಹ್ಲಿ ಘೋಷಿಸಿದ್ದರು. ಇದು ಭಾರತೀಯ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸಂಚಲನವನ್ನು ಮೂಡಿಸಿತ್ತು.
ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಟೀಂ ಇಂಡಿಯಾ ಇದುವರೆಗೂ ಐಸಿಸಿ ಟ್ರೋಫಿ ಗೆದ್ದಿಲ್ಲ, ಹೀಗಾಗಿ ಕೊಹ್ಲಿಯನ್ನು ಬಿಸಿಸಿಐ ನಾಯಕತ್ವದ ಕೆಳಗಿಳಿಸಿದೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಈ ಕುರಿತಂತೆ ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ.
ಭಾರತ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವುದು ವಿರಾಟ್ ಕೊಹ್ಲಿ ಅವರ ಸ್ವಂತ ನಿರ್ಧಾರವಾಗಿತ್ತು. ಬಿಸಿಸಿಐ (BCCI) ಯಾವುದೇ ರೀತಿಯಲ್ಲಿ ಒತ್ತಡ ಹೇರಲಿಲ್ಲ ಎಂದು ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.
ಟಿ20 ವಿಶ್ವಕಪ್ (T20 World Cup) ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಿದ ಕೆಲವೇ ದಿನಗಳಲ್ಲಿ ವಿರಾಟ್ ಕೊಹ್ಲಿ, ತಾವು ವಿಶ್ವಕಪ್ ಬಳಿಕ ಟಿ20 ತಂಡದ ನಾಯಕನ ಹುದ್ದೆಯನ್ನು ಬಿಡುವುದಾಗಿ ಘೋಷಿಸಿದ್ದರು.
‘ಕೊಹ್ಲಿಯ ನಿರ್ಧಾರ ಕೇಳಿ ನನಗೆ ಆಶ್ಚರ್ಯವಾಯಿತು. ಇಂಗ್ಲೆಂಡ್ ಸರಣಿಯ (England Tour) ಬಳಿಕ ಅವರು ನಿರ್ಧಾರ ಕೈಗೊಂಡರು ಎನಿಸುತ್ತದೆ. ಅವರು ಅವರದ್ದೇ ನಿರ್ಧಾರವಾಗಿತ್ತು. ಈ ಬಗ್ಗೆ ನಾವು ಕೊಹ್ಲಿಯೊಂದಿಗೆ ಮಾತನಾಡುವುದಾಗಲಿ, ಒತ್ತಡ ಹೇರುವುದಾಗಲಿ ಮಾಡಿಲ್ಲ. ನಾನೂ ಒಬ್ಬ ಆಟಗಾರನಾಗಿದ್ದವನು. ಅಂತಹ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ’ ಎಂದು ಗಂಗೂಲಿ ಹೇಳಿದ್ದಾರೆ.
ಇನ್ನು ಮುಂದೆ ಭಾರತ ಹೆಚ್ಚಿನ ಪಂದ್ಯಗಳನ್ನು ಆಡಬೇಕಿದೆ. ಮೂರು ಮಾದರಿಯ ಕ್ರಿಕೆಟ್‌ನಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸುವುದು ಸುಲಭದ ಮಾತಲ್ಲ. ನಾನು ಐದು ವರ್ಷಗಳ ಕಾಲ ನಾಯಕನಾಗಿದ್ದರಿಂದ ಅದು ಅರ್ಥವಾಗಿದೆ ಎಂದು ಸೌರವ್ ಹೇಳಿದ್ದಾರೆ.
ಮೇಲ್ನೋಟಕ್ಕೆ ದೇಶದ ತಂಡದ ನಾಯಕ ಎನ್ನುವ ಹಿರಿಮೆ, ಕೀರ್ತಿ ಎಲ್ಲವೂ ಇರುತ್ತದೆ ಆದರೆ ಆಂತರಿಕವಾಗಿ ಮಾನಸಿಕವಾಗಿ ಆಟಗಾರ ಬಳಲಿ ಹೋಗಿರುತ್ತಾನೆ. ಅದು ಧೋನಿಯೇ ಇರಲಿ, ಕೊಹ್ಲಿಯೇ ಆಗಿರಲಿ ಎಂದು ಸೌರವ್ ಹೇಳಿದ್ದಾರೆ.
ಮುಂಬರುವ ನಾಯಕರೂ ಇದೇ ರೀತಿಯ ಒತ್ತಡವನ್ನು ಅನುಭವಿಸುತ್ತಾರೆ. ಟೀಂ ಇಂಡಿಯಾ ನಾಯಕರಾಗಿ ತಂಡವನ್ನು ಮುನ್ನಡೆಸುವುದು ಸಾಕಷ್ಟು ಸವಾಲಿನ ಕೆಲಸವಾಗಿದೆ ಎಂದು ದಾದಾ ಅಭಿಪ್ರಾಯಪಟ್ಟಿದ್ದಾರೆ.
ಕಳೆದೆರಡು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿಲ್ಲ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸೌರವ್, ಒಮ್ಮೊಮ್ಮೆ ಹೀಗಾಗುತ್ತೆ. ಎಲ್ಲಾ ವರ್ಷವೂ ಒಂದೇ ರೀತಿ ಇರುವುದಿಲ್ಲ. ವಿರಾಟ್ ಕೊಹ್ಲಿ ಓರ್ವ ಮನುಷ್ಯ, ರನ್ ಮಷೀನ್ ಅಲ್ಲ ಎಂದಿದ್ದಾರೆ.