IPL: ಗರಿಷ್ಠ 4 ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಲು ಬಿಸಿಸಿಐ ಅವಕಾಶ..?

First Published Oct 23, 2021, 11:22 AM IST

ನವದೆಹಲಿ: 14ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ (IPL) ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ತಂಡವನ್ನು ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ನಾಲ್ಕನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ 15ನೇ ಆವೃತ್ತಿಯ ಮೇಲೆ ಚಿತ್ತ ನೆಟ್ಟಿದೆ. 2022ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಮತ್ತೆರಡು ತಂಡಗಳು ಸೇರ್ಪಡೆಯಾಗಲಿವೆ. ಹೀಗಾಗಿ ಹಾಲಿ 8 ತಂಡಗಳು ತಮ್ಮ ತಂಡದಲ್ಲಿ ಇಂತಿಷ್ಟು ಆಟಗಾರರನ್ನು ಉಳಿಸಿಕೊಳ್ಳಲು ಬಿಸಿಸಿಐ (BCCI) ಅವಕಾಶ ನೀಡಿದೆ ಎಂದು ವರದಿಯಾಗಿದೆ. 
 

2022ರ ಐಪಿಎಲ್‌ಗೆ ಈಗಿನ 8 ತಂಡಗಳಿಗೆ ತಲಾ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ ಎಂದು ಪ್ರತಿಷ್ಠಿತ ಮಾಧ್ಯಮವೊಂದು ವರದಿ ಮಾಡಿದೆ. 

ಇತ್ತೀಚೆಗೆ ಮುಕ್ತಾಯಗೊಂಡ 14ನೇ ಆವೃತ್ತಿಯ ಫೈನಲ್‌ ಪಂದ್ಯದ ವೇಳೆ ಬಿಸಿಸಿಐ ಹಾಗೂ ತಂಡಗಳ ಪ್ರತಿನಿಧಿಗಳ ನಡುವೆ ನಡೆದ ಸಭೆಯಲ್ಲಿ ಮುಂದಿನ ಆವೃತ್ತಿಗಳಿಗೆ ಮಾದರಿ ಹೇಗಿರಬೇಕು ಎನ್ನುವುದನ್ನು ಚರ್ಚಿಸಿ ನಿರ್ಧರಿಸಲಾಯಿತು ಎನ್ನಲಾಗಿದೆ.

ಪ್ರತಿ ತಂಡವು ತಲಾ 4 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಇದರಲ್ಲಿ ಗರಿಷ್ಠ ಮೂವರು ಭಾರತೀಯರು ಹಾಗೂ ಗರಿಷ್ಠ ಇಬ್ಬರು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಸಿಗಲಿದೆ. 
 

ಒಟ್ಟು 4 ಆಟಗಾರರನ್ನು ಮೀರುವಂತಿಲ್ಲ ಎನ್ನುವ ನಿಯಮವನ್ನು ಬಿಸಿಸಿಐ ಸದ್ಯದಲ್ಲೇ ಘೋಷಿಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಂದರೆ ತಂಡವೊಂದು ಇಬ್ಬರು ಭಾರತೀಯರು ಹಾಗೂ ಇಬ್ಬರು ವಿದೇಶಿಗರು ಇಲ್ಲವೇ ಮೂವರು ಭಾರತೀಯರು ಹಾಗೂ ಒಬ್ಬ ವಿದೇಶಿ ಆಟಗಾರನನ್ನು ಉಳಿಸಿಕೊಳ್ಳಲು ಅವಕಾಶ ಸಿಗಲಿದೆ.

2022ರ ಆವೃತ್ತಿಗೆ ಈ ವರ್ಷ ಡಿಸೆಂಬರ್‌ನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಪ್ರತಿ ತಂಡವು ಆಟಗಾರರ ಖರೀದಿಗೆ ಗರಿಷ್ಠ 90 ಕೋಟಿ ರುಪಾಯಿ ಬಳಕೆ ಮಾಡಬಹುದಾಗಿದೆ. ತಂಡವೊಂದು 4 ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದರೆ ಶೇ.40-45ರಷ್ಟು ಹಣ ಖರ್ಚಾಗಲಿದೆ. 

IPL Auction

ಅಂದರೆ ಒಬ್ಬ ಆಟಗಾರನನ್ನೂ ಉಳಿಸಿಕೊಳ್ಳದ ತಂಡಕ್ಕಿಂತ ಅಂದಾಜು 36-40 ಕೋಟಿ ರು. ಕಡಿಮೆ ಹಣ ಉಳಿಯಲಿದ್ದು, ಹರಾಜಿನಲ್ಲಿ ಅಗತ್ಯವಿರುವ ಆಟಗಾರರನ್ನು ಖರೀದಿಸಲು ಕಷ್ಟವಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ಇದೇ ವೇಳೆ 2 ಹೊಸ ತಂಡಗಳಿಗೆ ಹರಾಜಿಗೂ ಮೊದಲೇ ಇಬ್ಬರು ಇಲ್ಲವೇ ಮೂವರು ತಾರಾ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ. 

ಭಾರತೀಯ ಆಟಗಾರರು ಲಭ್ಯವಿಲ್ಲದೆ ಹೋದರೆ ವಿದೇಶಿಗರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇನ್ನು, ಈ ವರ್ಷ ಹರಾಜಿನಲ್ಲಿ ರೈಟ್‌ ಟು ಮ್ಯಾಚ್‌ ಕಾರ್ಡ್‌ ಬಳಕೆ ಮಾಡುವ ಅವಕಾಶವಿರುವುದಿಲ್ಲ ಎನ್ನಲಾಗಿದೆ.

click me!