ಏಷ್ಯಾಕಪ್ ಫೈನಲ್‌ಗೇರದ ಪಾಕ್‌ ತಂಡದಲ್ಲಿ ಕಿತ್ತಾಟ..! ಡ್ರೆಸ್ಸಿಂಗ್ ರೂಂನಲ್ಲಿ ಬಾಬರ್-ಅಫ್ರಿದಿ ನಡುವೆ ಮಾತಿನ ಚಕಮಕಿ

First Published | Sep 16, 2023, 5:16 PM IST

ಕೊಲಂಬೋ: ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿರುವ ಪಾಕಿಸ್ತಾನ ತಂಡಕ್ಕೆ ಇದೀಗ ಏಷ್ಯಾಕಪ್ ಟೂರ್ನಿಯಲ್ಲಿ ಮುಖಭಂಗ ಎದುರಾಗಿದೆ. ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲೇ ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಯಾನ ಅಂತ್ಯವಾಗಿದೆ. ಹೀಗಿರುವಾಗಲೇ ಪಾಕ್ ತಂಡದ ಡ್ರೆಸ್ಸಿಂಗ್‌ ರೂಂನಲ್ಲಿ ಮಾತಿನ ಚಕಮಕಿ ನಡೆದಿದೆ. ಈ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
 

ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಏಷ್ಯಾಕಪ್ ಟೂರ್ನಿ ಗೆದ್ದು, ಭರ್ಜರಿಯಾಗಿಯೇ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಪ್ರವಾಸ ಮಾಡುವ ಕನವರಿಕೆಯಲ್ಲಿತ್ತು.

ಆದರೆ ಸೂಪರ್ 4 ಹಂತದ ಶ್ರೀಲಂಕಾ ಎದುರಿನ ಪಂದ್ಯದಲ್ಲಿ 2 ವಿಕೆಟ್‌ ಅಂತರದ ವಿರೋಚಿತ ಸೋಲು ಕಾಣುವ ಮೂಲಕ ಪಾಕಿಸ್ತಾನ ಕ್ರಿಕೆಟ್‌ ತಂಡದ ಏಷ್ಯಾಕಪ್ ಅಭಿಯಾನ ಸೂಪರ್ 4 ಹಂತದಲ್ಲಿಯೇ ಮುಕ್ತಾಯವಾಗಿದೆ.
 

Latest Videos


ಪಾಕಿಸ್ತಾನದ ಹಲವು ಕ್ರಿಕೆಟಿಗರಿಂದ ನೀರಸ ಪ್ರದರ್ಶನ ಮೂಡಿಬಂದಿದ್ದೇ, ಬಾಬರ್ ಅಜಂ ಪಡೆಯ ಹಿನ್ನಡೆಗೆ ಕಾರಣ ಎನಿಸಿಕೊಂಡಿತು. ಅದರಲ್ಲೂ ಸ್ಟಾರ್ ಆಲ್ರೌಂಡರ್ ಶಾದಾಬ್ ಖಾನ್, ಉದ್ಘಾಟನಾ ಪಂದ್ಯದಲ್ಲಿ ನೇಪಾಳ ಎದುರು 4 ವಿಕೆಟ್ ಕಬಳಿಸಿದ್ದರು. ಇದಾದ ಬಳಿಕ ಅದೇ ಲಯ ಮುಂದುವರೆಸಿಕೊಂಡು ಹೋಗಲು ವಿಫಲವಾಗಿದ್ದರು.

ಲಂಕಾ ಎದುರಿನ ಸೋಲಿನ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕ್ ನಾಯಕ ಬಾಬರ್ ಅಜಂ, "ಶಾದಾಬ್ ಚೆನ್ನಾಗಿಯೇ ಬೌಲಿಂಗ್ ಮಾಡಿದರು, ಆದರೆ ವಿಕೆಟ್ ಸಿಗಲಿಲ್ಲ. ಅವರು ನಮ್ಮ ತಂಡದ ಬೆಸ್ಟ್ ಬೌಲರ್" ಎಂದು ಹೇಳಿದ್ದರು.

ಇದಾದ ಬಳಿಕ ಪಾಕಿಸ್ತಾನ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಆಕ್ರೋಶ ಭುಗಿಲೆದ್ದಿದೆ. ಪರಿಣಾಮ ಬಾಬರ್ ಅಜಂ ಹಾಗೂ ವೇಗಿ ಶಾಹೀನ್ ಅಫ್ರಿದಿ ನಡುವೆ ಮಾತಿನ ಚಕಮಕಿ ನಡೆದಿದ್ದು, ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಮಧ್ಯ ಪ್ರವೇಶಿ ಗಲಾಟೆ ತಣ್ಣಗೆ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
 

ಲಂಕಾ ಎದುರು ಪಂದ್ಯದ ಸೋಲಿನ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ, ತಮ್ಮ ತಂಡದ ಆಟಗಾರರನ್ನು ಉದ್ದೇಶಿಸಿ, 'ಆಟಗಾರರು ಜವಾಬ್ದಾರಿ ಅರಿತು ಆಡಲಿಲ್ಲ' ಎಂದು ಬೇಸರ ಹೊರಹಾಕಿದ್ದಾರೆ.

ಇದನ್ನು ಕೇಳುತ್ತಾ ಕುಳಿತಿದ್ದ ಶಾಹೀನ್ ಅಫ್ರಿದಿ, ನಾಯಕ ಬಾಬರ್ ಅಜಂ ಅವರನ್ನು ಉದ್ದೇಶಿಸಿ, 'ಕೊನೆಯ ಪಕ್ಷ ಯಾರೆಲ್ಲಾ ಚೆನ್ನಾಗಿ ಬೌಲಿಂಗ್ ಮಾಡಿದ್ದಾರೋ ಹಾಗೂ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದಾರೋ ಅವರನ್ನಾದರೂ ಶ್ಲಾಘಿಸಿ' ಎಂದು ತಿರುಗೇಟು ನೀಡಿದ್ದಾರೆ.
 

ತಾವು ಮಾತನಾಡುತ್ತಿದ್ದ ವೇಳೆ ಶಾಹೀನ್ ಅಫ್ರಿದಿ ಮಧ್ಯಪ್ರವೇಶಿಸಿ ಮಾತನಾಡಿದ್ದು, ಬಾಬರ್ ಅಜಂ ಅವರಿಗೆ ಮತ್ತಷ್ಟು ಸಿಟ್ಟು ತರಿಸುವಂತೆ ಮಾಡಿದೆ. ತಕ್ಷಣವೇ ಬಾಬರ್ ಅಜಂ, 'ಯಾರು ಚೆನ್ನಾಗಿ ಪ್ರದರ್ಶನ ತೋರಿದ್ದಾರೆ ಎನ್ನುವುದು ನನಗೆ ಗೊತ್ತಿದೆ' ಎಂದಿದ್ದಾರೆ.

ಈ ವಾದವಿವಾದ ಜೋರಾಗುವುದನ್ನು ಮನಗಂಡ ಪಾಕಿಸ್ತಾನ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಮಧ್ಯ ಪ್ರವೇಶಿಸಿ, ಈ ಗಲಾಟೆಯನ್ನು ತಣ್ಣಗಾಗಿಸಿದ್ದಾರೆ ಎಂದು ಬೋಲ್‌ ನ್ಯೂಸ್ ವರದಿ ಮಾಡಿದೆ.

ಮುಂಬರುವ ವಿಶ್ವಕಪ್ ಟೂರ್ನಿಗೂ ಮುನ್ನ ಡ್ರೆಸ್ಸಿಂಗ್ ರೂಂನಲ್ಲಿ ಈ ರೀತಿ ನಾಯಕ ಹಾಗೂ ಬೌಲರ್‌ ನಡುವೆ ಕಿತ್ತಾಟ ನಡೆದಿದ್ದು, ಪಾಕಿಸ್ತಾನ ತಂಡದ ಪಾಲಿಗಂತೂ ಒಳ್ಳೆಯ ಬೆಳವಣಿಗೆಯಲ್ಲ ಎಂದು ಪಾಕ್ ಅಭಿಮಾನಿಗಳು ಹಣೆ ಹಣೆ ಚಚ್ಚಿಕೊಳ್ಳಲಾರಂಭಿಸಿದ್ದಾರೆ.
 

click me!