ಮಿಚೆಲ್ ಸ್ಟಾರ್ಕ್‌ ಲೈಫ್‌ಸ್ಟೈಲ್, ಪತ್ನಿ, ನೆಟ್‌ ವರ್ತ್‌: ಇಲ್ಲಿದೆ ನೋಡಿ ಐಪಿಎಲ್ ದುಬಾರಿ ವೇಗಿಯ ಇಂಟ್ರೆಸ್ಟಿಂಗ್ ಮಾಹಿತಿ

First Published Jan 2, 2024, 4:28 PM IST

ಬೆಂಗಳೂರು: ಕಳೆದ ತಿಂಗಳಷ್ಟೇ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಆಸ್ಟ್ರೇಲಿಯಾದ ಮಾರಕ ವೇಗಿ ಮಿಚೆಲ್ ಸ್ಟಾರ್ಕ್, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನ್ನುವ ದಾಖಲೆ ನಿರ್ಮಿಸಿದ್ದಾರೆ. ನಾವಿಂದು ಕಾಂಗರೂ ಪಡೆಯ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರ ನೆಟ್‌ವರ್ತ್‌ ಸೇರಿದಂತೆ ಇಂಟ್ರೆಸ್ಟಿಂಗ್ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
 

ಮಿಚೆಲ್ ಸ್ಟಾರ್ಕ್ ಆಸ್ಟ್ರೇಲಿಯಾದ ಮಾರಕ ಎಡಗೈ ವೇಗಿಯಾಗಿದ್ದು, ಕಳೆದೊಂದು ದಶಕದಿಂದ ಆಸೀಸ್ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಸ್ಟಾರ್ಕ್‌ ಆಸೀಸ್‌ ತಂಡದ ಪರ ಟೆಸ್ಟ್, ಏಕದಿನ ಹಾಗೂ ಟಿ20 ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ.

ಮಿಚೆಲ್ ಸ್ಟಾರ್ಕ್‌, ಸದ್ಯ ಕಾಂಗರೂ ಪಡೆಯ ಪ್ರಮುಖ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಸ್ಟಾರ್ಕ್‌ ಕೋಲ್ಕತಾ ನೈಟ್ ರೈಡರ್ಸ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಕಳೆದ ಡಿಸೆಂಬರ್ 19ರಂದು ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ಫ್ರಾಂಚೈಸಿಯು 24.75 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 

ಮಿಚೆಲ್ ಸ್ಟಾರ್ಕ್ ಅವರ ಜೆರ್ಸಿ ನಂಬರ್ 56 ಆಗಿದ್ದು, ಅವರು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಾ ಬಂದಿದ್ದಾರೆ. ಆರೂವರೆ ಅಡಿ ಎತ್ತರವಿರುವ ಸ್ಟಾರ್ಕ್‌ ಅವರ ತೂಕ ಬರೋಬ್ಬರಿ 92 ಕೆಜಿ.

ಮಿಚೆಲ್ ಸ್ಟಾರ್ಕ್‌ ಜನವರಿ 30, 1990ರಲ್ಲಿ ಆಸ್ಟ್ರೇಲಿಯಾದ ನ್ಯೂ ಸೌಥ್ ವೇಲ್ಸ್‌ನಲ್ಲಿ ಜನಿಸಿದರು. 2016ರಲ್ಲಿ ಮಿಚೆಲ್ ಸ್ಟಾರ್ಕ್ ತಮ್ಮ ಗರ್ಲ್‌ ಫ್ರೆಂಡ್ ಹಾಗೂ ಆಸೀಸ್ ಮಹಿಳಾ ಕ್ರಿಕೆಟರ್ ಅಲಿಸಾ ಹೀಲಿ ಅವರನ್ನು ಮದುವೆಯಾದರು.
 

ಮಿಚೆಲ್ ಸ್ಟಾರ್ಕ್‌ ಅವರಿಗೆ ಒಬ್ಬ ಅಣ್ಣ ಹಾಗೂ ಇಬ್ಬರು ಅಕ್ಕಂದಿರು ಇದ್ದಾರೆ. ಈ ಪೈಕಿ ಬ್ರೆಂಡನ್ ಸ್ಟಾರ್ಕ್‌ ವೃತ್ತಿಪರ ಹೈಜಂಪರ್ ಆಗಿದ್ದು, ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾದ ದೇಶವನ್ನು ಪ್ರತಿನಿಧಿಸಿದ್ದಾರೆ.

ಮಿಚೆಲ್ ಸ್ಟಾರ್ಕ್ 9 ವಯಸ್ಸಿನವರಿದ್ದಾಗಲೇ ಕ್ರಿಕೆಟರ್ ಆಗುವ ನಿಟ್ಟಿನಲ್ಲಿ ಅಭ್ಯಾಸ ಶುರು ಮಾಡಿದರು. ಅವರು ನಾರ್ಥನ್ ಡಿಸ್ಟ್ರಿಕ್ಟ್ಸ್‌ ಪರ ಓರ್ವ ವಿಕೆಟ್‌ಕೀಪರ್ ವೇಗದ ಬೌಲರ್ ಆಗಿ ಕ್ರಿಕೆಟ್ ಆಡುವುದನ್ನು ಆರಂಭಿಸಿದರು.

ಮಿಚೆಲ್ ಸ್ಟಾರ್ಕ್‌ 14 ವರ್ಷದವರಿದ್ದಾಗ ಒಂದು ಕ್ರಿಕೆಟ್ ಕ್ಲಬ್‌ನ ಕೋಚ್ ವಿಕೆಟ್ ಕೀಪರ್ ಆಗುವುದನ್ನು ಬಿಟ್ಟು, ವೇಗದ ಬೌಲಿಂಗ್ ಕಡೆ ಗಮನ ಹರಿಸು ಎಂದು ಸಲಹೆ ನೀಡಿದರು. ಇದಾದ ಬಳಿಕ ಸ್ಟಾರ್ಕ್ ವೇಗದ ಬೌಲಿಂಗ್ ಕಡೆ ಹೆಚ್ಚು ಗಮನ ಹರಿಸಿದರು. ಪರಿಣಾಮ ಇಂದು ಸ್ಟಾರ್ಕ್ ಜಗತ್ತಿನ ಮಾರಕ ವೇಗಿಗಳಲ್ಲಿ ಒಬ್ಬರಾಗಿ ಬೆಳೆದು ನಿಂತಿದ್ದಾರೆ.

mitchell starc

2009ರಲ್ಲಿ ಮಿಚೆಲ್ ಸ್ಟಾರ್ಕ್ ತಮ್ಮ 19ನೇ ವಯಸ್ಸಿನಲ್ಲೇ ನ್ಯೂ ಸೌಥ್ ವೇಲ್ಸ್‌ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಡೊಮೆಸ್ಟಿಕ್‌ ಕ್ರಿಕೆಟ್‌ನಲ್ಲಿ ಸ್ಟಾರ್ಕ್ ಬೌಲಿಂಗ್ ಆಲ್ರೌಂಡರ್ ಆಗಿ ಗಮನ ಸೆಳೆದರು.

2010ರಲ್ಲಿ ಆಸೀಸ್ ತಂಡವು ಭಾರತ ಪ್ರವಾಸ ಕೈಗೊಂಡಿತ್ತು. ಈ ವೇಳೆ ವೇಗಿ ಜೋಶ್ ಹೇಜಲ್‌ವುಡ್ ಗಾಯಗೊಂಡಿದ್ದರಿಂದ ಮಿಚೆಲ್‌ ಸ್ಟಾರ್ಕ್‌ಗೆ ಆಸೀಸ್ ತಂಡದ ಪರ ಬುಲಾವ್ ಬಂದಿತು. 20 ಅಕ್ಟೋಬರ್ 2010ರಲ್ಲಿ ವಿಶಾಖಪಟ್ಟಣಂನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಸ್ಟಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.

Starc

ಇದಾದ ಬಳಿಕ ಮಿಚೆಲ್ ಸ್ಟಾರ್ಕ್ ಹಿಂದೆ ನೋಡುವ ಪ್ರಶ್ನೆಯೇ ಬರಲಿಲ್ಲ. ಇನ್ನು 2014ರಲ್ಲಿ ಸ್ಟಾರ್ಕ್‌ ಮೊದಲ ಬಾರಿಗೆ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಆರ್‌ಸಿಬಿ ಫ್ರಾಂಚೈಸಿ 5 ಕೋಟಿ ರುಪಾಯಿ ನೀಡಿ ಸ್ಟಾರ್ಕ್‌ ಅವರನ್ನು ಖರೀದಿಸಿತ್ತು.

2014ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಸ್ಟಾರ್ 14 ಪಂದ್ಯಗಳನ್ನಾಡಿ 14 ವಿಕೆಟ್ ಕಬಳಿಸಿದರು. ಹೀಗಾಗಿ ಸ್ಟಾರ್ಕ್‌ ಅವರನ್ನು ಆರ್‌ಸಿಬಿ ಫ್ರಾಂಚೈಸಿ ರೀಟೈನ್ ಮಾಡಿಕೊಂಡಿತು. ಇನ್ನು 2015ರ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಸ್ಟಾರ್ಕ್ ಕೇವಲ 13 ಪಂದ್ಯಗಳನ್ನಾಡಿ 20 ವಿಕೆಟ್ ಕಬಳಿಸಿದರು.

ಇದಾದ ಬಳಿಕ ಕೆಲ ವರ್ಷಗಳ ಕಾಲ ಮಿಚೆಲ್ ಸ್ಟಾರ್ಕ್‌ ಐಪಿಎಲ್‌ನಿಂದ ದೂರವೇ ಉಳಿದರು. ಇನ್ನು 2018ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಸ್ಟಾರ್ಕ್ ಅವರನ್ನು ಕೆಕೆಆರ್ ಫ್ರಾಂಚೈಸಿ 9.4 ಕೋಟಿ ರುಪಾಯಿಗೆ ಖರೀದಿಸಿತಾದರೂ, ಗಾಯದ ಸಮಸ್ಯೆಯಿಂದಾಗಿ ಒಂದೇ ಒಂದು ಪಂದ್ಯವನ್ನಾಡಲಿಲ್ಲ.
 

2023ರಲ್ಲಿ ಸ್ಟಾರ್ಕ್ ಕುರಿತಾಗಿ ಪ್ರಕಟವಾದ ವರದಿಯೊಂದರಲ್ಲಿ ಆಸೀಸ್ ಎಡಗೈ ವೇಗಿಯ ನೆಟ್ ವರ್ತ್ ಸುಮಾರು 25 ಮಿಲಿಯನ್ ಡಾಲರ್(ಸುಮಾರು 208 ಕೋಟಿ ರುಪಾಯಿ) ಎನ್ನಲಾಗಿದೆ. 

ಮಿಚೆಲ್ ಸ್ಟಾರ್ಕ್ ಪ್ರತಿವರ್ಷ ವೇತನ, ಐಪಿಎಲ್ ಕಾಂಟ್ರ್ಯಾಕ್ಟ್‌, ಬಿಗ್‌ಬ್ಯಾಶ್ ಲೀಗ್ ಹಾಗೂ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ಗಳಿಂದ ಪ್ರತಿವರ್ಷ ಸುಮಾರು 12.48 ಕೋಟಿ ರುಪಾಯಿ ಸಂಪಾದಿಸುತ್ತಾರೆ
 

click me!