2023ರಲ್ಲಿ ವಿರಾಟ್ ಕೊಹ್ಲಿ ಮಾಡಿದ 5 ಅಪರೂಪದ ದಾಖಲೆಗಳಿವು..!

First Published | Dec 31, 2023, 6:15 PM IST

ಬೆಂಗಳೂರು: ಆಧುನಿಕ ಕ್ರಿಕೆಟ್‌ನ ಸೂಪರ್‌ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 2023ರಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಕೊನೆಯ ದಿನವಾದ ಇಂದು 2023ರಲ್ಲಿ ವಿರಾಟ್ ಕೊಹ್ಲಿ ರಚಿಸಿದ 5 ಅಪರೂಪದ ದಾಖಲೆಗಳನ್ನು ನೆನಪಿಸಿಕೊಳ್ಳೋಣ ಬನ್ನಿ.
 

1. ಏಕದಿನ ಕ್ರಿಕೆಟ್‌ನಲ್ಲಿ 51 ಶತಕ ಸಿಡಿಸಿದ ವಿರಾಟ್ ಕೊಹ್ಲಿ:

2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ಎದುರಿನ ಸೆಮಿಫೈನಲ್ ಪಂದ್ಯದಲ್ಲಿ ಏಕದಿನ ಕ್ರಿಕೆಟ್ ವೃತ್ತಿಬದುಕಿನಲ್ಲಿ 51ನೇ ಏಕದಿನ ಶತಕ ಬಾರಿಸಿ ಮಿಂಚಿದರು.
 

ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಎನ್ನುವ ವಿಶ್ವದಾಖಲೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 49 ಶತಕ ಸಿಡಿಸಿರುವ ಸಚಿನ್ ತೆಂಡುಲ್ಕರ್ ಎರಡನೇ ಸ್ಥಾನದಲ್ಲಿದ್ದಾರೆ.

Latest Videos


2. ಏಕದಿನ ವಿಶ್ವಕಪ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಕೊಹ್ಲಿ:

ಕಳೆದ ಎರಡು ದಶಕಗಳಿಂದ ಏಕದಿನ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಬಾರಿಸಿದ ದಾಖಲೆ ಮಾಸ್ಟರ್ ಬ್ಯಾಟರ್ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿತ್ತು. 2003ರ ಏಕದಿನ ವಿಶ್ವಕಪ್‌ನಲ್ಲಿ ಸಚಿನ್ 673 ರನ್ ಬಾರಿಸಿದ್ದರು.
 

ಆದರೆ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್ ದಾಖಲೆ ನುಚ್ಚುನೂರು ಮಾಡುವಲ್ಲಿ ಯಶಸ್ವಿಯಾದರು. 2023ರ ವಿಶ್ವಕಪ್‌ನಲ್ಲಿ 3 ಶತಕ ಸಹಿತ 765 ರನ್ ಸಿಡಿಸಿ, ಅಪರೂಪದ ದಾಖಲೆ ತಮ್ಮದಾಗಿಸಿಕೊಂಡರು.

3. ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 13 ಸಾವಿರ ರನ್ ಬಾರಿಸಿದ ಕೊಹ್ಲಿ

ಏಕದಿನ ಕ್ರಿಕೆಟ್‌ನಲ್ಲಿ ರನ್ ರಾಶಿಯೇ ಗುಡ್ಡೆ ಹಾಕುತ್ತಿರುವ ವಿರಾಟ್ ಕೊಹ್ಲಿ, 2023ರಲ್ಲಿ ಮತ್ತೊಂದು ಅಪರೂಪದ ದಾಖಲೆ ಬರೆದರು. ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 13 ಸಾವಿರ ರನ್ ಬಾರಿಸಿದ ಬ್ಯಾಟರ್ ಎನ್ನುವ ಹಿರಿಮೆಗೆ ಕೊಹ್ಲಿ ಪಾತ್ರರಾದರು.
 

ವಿರಾಟ್ ಕೊಹ್ಲಿ ಕೇವಲ 267 ಏಕದಿನ ಇನಿಂಗ್ಸ್‌ನಲ್ಲಿ 13 ಸಾವಿರ ರನ್ ಬಾರಿಸಿದರು. ಈ ಮೊದಲು ಸಚಿನ್ ತೆಂಡುಲ್ಕರ್ 321 ಇನಿಂಗ್ಸ್‌ಗಳನ್ನಾಡಿ 13 ಸಾವಿರ ರನ್ ಪೂರೈಸಿದ್ದರು.
 

4. ಭಾರತ ಪರ 500 ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ

ಕಳೆದ ಒಂದೂವರೆ ದಶಕದಿಂದ ಟೀಂ ಇಂಡಿಯಾ ಅವಿಭಾಜ್ಯ ಅಂಗವಾಗಿರುವ ವಿರಾಟ್ ಕೊಹ್ಲಿ, ಭಾರತ ಪರ 500 ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಸಾಧನೆ ಮಾಡಿದರು.
 

2008ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ 2023ರಲ್ಲಿ ಭಾರತ ಪರ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದರು. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ವಿರಾಟ್ ಕೊಹ್ಲಿ ಪಾಲಿನ 500ನೇ ಅಂತಾರಾಷ್ಟ್ರೀಯ ಪಂದ್ಯ ಎನಿಸಿಕೊಂಡಿತು.

5. ಐಪಿಎಲ್‌ನಲ್ಲಿ 7 ಸಾವಿರ ರನ್ ಬಾರಿಸಿದ ಮೊದಲ ಕ್ರಿಕೆಟಿಗ ಕೊಹ್ಲಿ

ಅಂತಾರಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲದೇ ಐಪಿಎಲ್‌ನಲ್ಲೂ ವಿರಾಟ್ ಕೊಹ್ಲಿ ತಮ್ಮ ಖದರ್ ತೋರಿಸಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ಕೊಹ್ಲಿ, 7000 ರನ್ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
 

ವಿರಾಟ್ ಕೊಹ್ಲಿ ಆರ್‌ಸಿಬಿ ಪರ 237 ಐಪಿಎಲ್ ಪಂದ್ಯಗಳನ್ನಾಡಿ 7263 ರನ್‌ ಬಾರಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ 7000 ರನ್ ಸಾಧನೆ ಮಾಡಿದರು.

click me!