Asia Cup 2023: ಲಂಕಾ ಎದುರು 4 ಅಪರೂಪದ ದಾಖಲೆ ಬರೆದ ರೋಹಿತ್ ಶರ್ಮಾ..!

First Published | Sep 12, 2023, 5:55 PM IST

ಕೊಲಂಬೊ(ಸೆ.12): ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮತ್ತೊಂದು ಜವಾಬ್ದಾರಿಯುತ ಇನಿಂಗ್ಸ್‌ ಆಡುವಲ್ಲಿ ಯಶಸ್ವಿಯಾಗಿದ್ದಾರೆ. ಏಷ್ಯಾಕಪ್ ಟೂರ್ನಿಯ ಸೂಪರ್ 12 ಹಂತದ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ರೋಹಿತ್ ಶರ್ಮಾ 48 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 53 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಪಂದ್ಯದಲ್ಲಿ ಹಿಟ್‌ಮ್ಯಾನ್ 4 ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
 

1. ಎರಡನೇ ಅತಿವೇಗವಾಗಿ 10 ಸಾವಿರ ರನ್ ಪೂರೈಸಿದ ಬ್ಯಾಟರ್:

ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, 241 ಏಕದಿನ ಇನಿಂಗ್ಸ್‌ಗಳನ್ನಾಡಿ, ಒನ್‌ ಡೇ ಕ್ರಿಕೆಟ್‌ನಲ್ಲಿ 10+ ಸಾವಿರ ಬಾರಿಸುವ ಮೂಲಕ ಹೊಸದೊಂದು ಸಾಧನೆ ಮಾಡಿದ್ದಾರೆ.
 

ವಿರಾಟ್ ಕೊಹ್ಲಿ(205 ಇನಿಂಗ್ಸ್‌) ಬಳಿಕ ಅತಿಕಡಿಮೆ ಇನಿಂಗ್ಸ್‌ಗಳನ್ನಾಡಿ 10 ಸಾವಿರ ರನ್ ಪೂರೈಸಿದ ಬ್ಯಾಟರ್ ಎನ್ನುವ ಹಿರಿಮೆ ಇದೀಗ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಾಲಾಗಿದೆ.
 

Latest Videos


2.ಆರಂಭಿಕನಾಗಿ ಅತಿವೇಗವಾಗಿ 8000 ರನ್ ಪೂರೈಸಿದ ಬ್ಯಾಟರ್:

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಆರಂಭಿಕನಾಗಿ ಕಣಕ್ಕಿಳಿದ ಬಳಿಕ ಅವರ ಅದೃಷ್ಟವೇ ಬದಲಾಗಿ ಹೋಯಿತು. ಇದೀಗ ಆರಂಭಿಕನಾಗಿ ಅತಿ ವೇಗವಾಗಿ 8 ಸಾವಿರ ರನ್ ಬಾರಿಸಿದ ದಾಖಲೆ ಹಿಟ್‌ಮ್ಯಾನ್ ಪಾಲಾಗಿದೆ.
 

ರೋಹಿತ್ ಶರ್ಮಾ ಮಧ್ಯಮ ಕ್ರಮಾಂಕದಲ್ಲಿ 82 ಇನಿಂಗ್ಸ್‌ಗಳನ್ನಾಡಿ 2000 ರನ್ ಗಳಿಸಿದ್ದರು. ಇದಾದ ಬಳಿಕ ಆರಂಭಿಕನಾಗಿ ಬಡ್ತಿಪಡೆದ ರೋಹಿತ್ ಶರ್ಮಾ, ಕೇವಲ 159 ಇನಿಂಗ್ಸ್‌ಗಳನ್ನಾಡಿ 8,000 ರನ್ ಸಿಡಿಸಿದ್ದಾರೆ.
 

3. ಏಷ್ಯಾಕಪ್ ಟೂರ್ನಿಯಲ್ಲಿ 10 ಬಾರಿ 50+ ರನ್ ಬಾರಿಸಿದ ಮೊದಲ ಬ್ಯಾಟರ್:

ಏಷ್ಯಾಕಪ್ ಟೂರ್ನಿಯಲ್ಲಿ ಭರ್ಜರಿ ಲಯದಲ್ಲಿರುವ ರೋಹಿತ್ ಶರ್ಮಾ, ಇದೀಗ ಹ್ಯಾಟ್ರಿಕ್ ಫಿಫ್ಟಿ ಬಾರಿಸಿದ ಸಾಧನೆ ಮಾಡಿದ್ದಾರೆ. ಇದಷ್ಟೇ ಅಲ್ಲದೇ ಫಿಫ್ಟಿ ಬಾರಿಸುವುದರಲ್ಲೂ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. 
 

ರೋಹಿತ್ ಶರ್ಮಾ, ಇದೀಗ ಏಷ್ಯಾಕಪ್ ಇತಿಹಾಸದಲ್ಲಿ ಸಚಿನ್ ತೆಂಡುಲ್ಕರ್(09) ಹಿಂದಿಕ್ಕಿ ಅತಿಹೆಚ್ಚು ಫಿಫ್ಟಿ ಪ್ಲಸ್(10) ರನ್ ಬಾರಿಸಿದ ಬ್ಯಾಟರ್ ಎನ್ನುವ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ.
 

4. ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್

ಪ್ರಸಕ್ತ ಏಷ್ಯಾಕಪ್ ಟೂರ್ನಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ರೋಹಿತ್ ಶರ್ಮಾ, ಸದ್ಯ 4 ಪಂದ್ಯಗಳನ್ನಾಡಿ 3 ಅರ್ಧಶತಕ ಸಹಿತ 66.67ರ ಸರಾಸರಿಯಲ್ಲಿ 194 ರನ್ ಗಳಿಸುವ ಮೂಲಕ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ.
 

ಇನ್ನುಳಿದಂತೆ ಬಾಂಗ್ಲಾದೇಶದ ನಜ್ಮುಲ್ ಹೊಸೈನ್ ಶಾಂಟೋ 2 ಪಂದ್ಯಗಳನ್ನಾಡಿ 193 ರನ್ ಬಾರಿಸಿ ಎರಡನೇ ಸ್ಥಾನಕ್ಕೆ ಜಾರಿದರೆ, ಪಾಕಿಸ್ತಾನದ ಬಾಬರ್ ಅಜಂ 178 ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

click me!