ಏಷ್ಯಕಪ್ ಕ್ರಿಕೆಟ್ ಟೂರ್ನಿಯು ಮುಂಬರುವ ಆಗಸ್ಟ್ 05ರಿಂದ ಸೆಪ್ಟೆಂಬರ್ 17ರ ವರೆಗೆ ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಜರುಗಲಿದ್ದು, ಇಂದು ಈ ಟೂರ್ನಿಗೆ 17 ಆಟಗಾರರನ್ನೊಳಗೊಂಡ ಬಲಾಢ್ಯ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಟೀಂ ಇಂಡಿಯಾ 17 ಆಟಗಾರರ ಪಡೆಯನ್ನು ಪ್ರಕಟಿಸಲಾಗಿದ್ದು, ಕನ್ನಡಿಗ ಕೆ ಎಲ್ ರಾಹುಲ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಸಾಕಷ್ಟು ಸಮಯದ ಬಳಿಕ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಏಷ್ಯಾಕಪ್‌ಗೆ ಸಜ್ಜಾಗಿರುವ ಭಾರತ ತಂಡವು ಆರಂಭಿಕ ಕೆಲ ಪಂದ್ಯಗಳಿಂದ ಕೆ ಎಲ್ ರಾಹುಲ್ ಅವರ ಸೇವೆಯಿಂದ ವಂಚಿತರಾಗುವ ಕುರಿತಂತೆ ಅಜಿತ್ ಅಗರ್ಕರ್ ತುಟಿಬಿಚ್ಚಿದ್ದಾರೆ. ರಾಹುಲ್ ಅವರಲ್ಲಿ ಹೊಸ ಗಾಯದ ಸಮಸ್ಯೆ ಕಾಣಿಸಿಕೊಂಡಿದ್ದರಿಂದಾಗಿ ಏಷ್ಯಾಕಪ್ ಟೂರ್ನಿಯ ಆರಂಭಿಕ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಎಂದು ಅಗರ್ಕರ್ ತಿಳಿಸಿದ್ದಾರೆ.
ಈ ಕಾರಣಕ್ಕಾಗಿಯೇ ಕೆ ಎಲ್ ರಾಹುಲ್ ಅವರಿಗೆ ಬ್ಯಾಕ್ ಅಪ್ ಆಟಗಾರನಾಗಿ ಮೀಸಲು ಆಟಗಾರನ ರೂಪದಲ್ಲಿ ಕೇರಳ ಮೂಲದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸದ ವೇಳೆ ರಾಹುಲ್‌ಗೆ ಹೊಸದಾಗಿ ಗಾಯವಾಗಿರುವ ಸುಳಿವನ್ನು ಅಗರ್ಕರ್ ಬಿಚ್ಚಿಟ್ಟಿದ್ದಾರೆ.
ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾದ ಬಳಿಕ ಮೊದಲ ಬಾರಿಗೆ ತಂಡವನ್ನು ಆಯ್ಕೆ ಮಾಡಿ ಸುದ್ದಿಗೋಷ್ಟಿ ನಡೆಸಿದ ಅಜಿತ್ ಅಗರ್ಕರ್, ಕೆ ಎಲ್ ರಾಹುಲ್ ಏಷ್ಯಾಕಪ್ ಟೂರ್ನಿಯ ಎರಡು ಅಥವಾ ಮೂರನೇ ಪಂದ್ಯದ ವೇಳೆಗೆ ಸಂಪೂರ್ಣ ಫಿಟ್ ಆಗಿರಲಿದ್ದಾರೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಕನ್ನಡಿಗ ಕೆ ಎಲ್ 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಧ್ಯದಲ್ಲಿಯೇ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದರು. ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ ಎಲ್ ರಾಹುಲ್, ಲಖನೌದಲ್ಲಿ ಆರ್‌ಸಿಬಿ ಎದುರಿನ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ಮಾಡುವ ಸಂದರ್ಭದಲ್ಲಿ ಗಾಯಗೊಂಡು ಕ್ರಿಕೆಟ್‌ನಿಂದ ದೂರ ಉಳಿದಿದ್ದರು.
ಇನ್ನೊಂದೆಡೆ ಬೆನ್ನು ನೋವಿನ ಸಮಸ್ಯೆಯಿಂದಾಗಿ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದಲೇ ಹೊರಬಿದ್ದಿದ್ದ ಮುಂಬೈ ಮೂಲದ ಪ್ರತಿಭಾನ್ವಿತ ಬ್ಯಾಟರ್ ಶ್ರೇಯಸ್ ಅಯ್ಯರ್, ಕೊನೆಗೂ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ 4ನೇ ಕ್ರಮಾಂಕದ ಬ್ಯಾಟರ್ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಂತೆ ಆಗಿದೆ.
ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಆಗಸ್ಟ್ 30ರಿಂದ ಆರಂಭವಾದರೂ, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸೆಪ್ಟೆಂಬರ್ 02ರಂದು ಪಾಕಿಸ್ತಾನ ಎದುರು ಕಣಕ್ಕಿಳಿಯುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಶ್ರೀಲಂಕಾದ ಕ್ಯಾಂಡಿ ಮೈದಾನ ಆತಿಥ್ಯ ವಹಿಸಲಿದೆ.