ಈ 8 ವಿಶ್ವದಾಖಲೆಗಳೇ ಸಾಕು ರೋಹಿತ್ ಶರ್ಮಾ ನಿಜವಾದ ಹಿಟ್‌ಮ್ಯಾನ್ ಅನ್ನೋಕೆ!

First Published | Oct 11, 2024, 3:42 PM IST

ಬೆಂಗಳೂರು: ಭಾರತ ಟೆಸ್ಟ್‌ ಹಾಗೂ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಹಿಟ್‌ಮ್ಯಾನ್ ಎಂದು ಕರೆಯುವುದು ಎಲ್ಲರಿಗೂ ಗೊತ್ತೇ ಇದೆ. ರೋಹಿತ್ ಶರ್ಮಾ ಹೆಸರಿನಲ್ಲಿರುವ ಈ 8 ವಿಶ್ವದಾಖಲೆಗಳನ್ನು ನೋಡಿದರೆ, ರೋಹಿತ್ ಹೆಸರಿಗಷ್ಟೇ ಹಿಟ್‌ಮ್ಯಾನ್ ಅಲ್ಲ, ನಿಜವಾಗಿಯೂ ಹಿಟ್‌ಮ್ಯಾನ್ ಎನ್ನುವುದು ನಿಮಗೆಲ್ಲರಿಗೂ ಅರ್ಥವಾಗುತ್ತೆ. ಅಷ್ಟಕ್ಕೂ ಯಾವುದವು 8 ವಿಶ್ವದಾಖಲೆ, ತಿಳಿಯೋಣ ಬನ್ನಿ.
 

1. ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್

ರೋಹಿತ್ ಶರ್ಮಾ 2014ರಲ್ಲಿ ಶ್ರೀಲಂಕಾ ವಿರುದ್ದ ಏಕದಿನ ಪಂದ್ಯದಲ್ಲಿ ಬರೋಬ್ಬರಿ 264 ರನ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿದೆ.
 

2. ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ದ್ವಿಶತಕ:

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸುವುದು ಅಷ್ಟು ಸುಲಭದ ಸಾಧನೆಯಲ್ಲ. ಆದರೆ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಒಂದಲ್ಲ, ಎರಡಲ್ಲಾ ಬರೋಬ್ಬರಿ ಮೂರು ಬಾರಿ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.

Tap to resize

3. ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಬಾರಿ 150+ ಸಾಧನೆ

ರೋಹಿತ್ ಶರ್ಮಾ, ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಬರೋಬ್ಬರಿ 8 ಬಾರಿ 150+ ರನ್ ಬಾರಿಸುವ ಮೂಲಕ ಅತಿಹೆಚ್ಚು ಬಾರಿ ಈ ಸಾಧನೆ ಮಾಡಿದ ಜಗತ್ತಿನ ಏಕೈಕ ಬ್ಯಾಟರ್ ಎನ್ನುವ ವಿಶ್ವದಾಖಲೆ ನಿರ್ಮಿಸಿದ್ದಾರೆ.

4. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್:

ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4,231 ರನ್ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನ್ನುವ ದಾಖಲೆ ಬರೆದಿದ್ದಾರೆ.

5. ಅತಿಹೆಚ್ಚು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಸಾಧನೆ:

ರೋಹಿತ್ ಶರ್ಮಾ ಒಟ್ಟಾರೆ 159 ಬಾರಿ ಭಾರತ ಪರ ಟಿ20 ಪಂದ್ಯವನ್ನಾಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ಪಂದ್ಯವನ್ನಾಡಿದ ಸಾಧನೆ ಮಾಡಿದ್ದಾರೆ.

6. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್:

ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಬರೋಬ್ಬರಿ 205 ಸಿಕ್ಸರ್ ಸಿಡಿಸುವ ಮೂಲಕ ಅತಿಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವದಾಖಲೆ ನಿರ್ಮಿಸಿದ್ದಾರೆ. ರೋಹಿತ್ ಹೊರತುಪಡಿಸಿ ಯಾವೊಬ್ಬ ಬ್ಯಾಟರ್ ಕೂಡಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್ ಸಮೀಪವೂ ಬಂದಿಲ್ಲ.

7. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ

ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಟ್ಟು 5 ಶತಕ ಸಿಡಿಸಿದ್ದಾರೆ. ಈ ಮೂಲಕ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಗ್ಲೆನ್ ಮ್ಯಾಕ್ಸ್‌ವೆಲ್ ಜತೆ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

8. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್

ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ 600ಕ್ಕೂ ಅಧಿಕ ಸಿಕ್ಸರ್ ಬಾರಿಸಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 623 ಸಿಕ್ಸರ್ ಸಿಡಿಸಿದ್ದಾರೆ.

Latest Videos

click me!