ಸಂಧ್ಯಾ ಥಿಯೇಟರ್ನಲ್ಲಿ ನಡೆದ ನೂಕುನುಗ್ಗಲು ಘಟನೆ ಸಂಚಲನ ಮೂಡಿಸಿದೆ. ಮಹಿಳೆ ಸಾವಿನ ಬಗ್ಗೆ ಕೇಸ್ ದಾಖಲಿಸಿರೋ ಪೊಲೀಸರು ಹಲವರನ್ನ ಬಂಧಿಸಿದ್ದಾರೆ. ಅಲ್ಲು ಅರ್ಜುನ್ ಸರಿಯಾದ ಅನುಮತಿ ಇಲ್ಲದೆ ಸಂಧ್ಯಾ ಥಿಯೇಟರ್ಗೆ ಸಿನಿಮಾ ನೋಡಲು ಹೋಗಿದ್ದೇ ಈ ಅನಾಹುತಕ್ಕೆ ಕಾರಣ ಅಂತ ಪೊಲೀಸರು ಆರೋಪಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಇನ್ನೂ ಮುಂದುವರಿದಿದೆ. ಇತ್ತ ಮತ್ತೊಂದು ಬಂಧನವಾಗಿದೆ. ಅಲ್ಲು ಅರ್ಜುನ್ ವೈಯಕ್ತಿಕ ಸಿಬ್ಬಂದಿಯಲ್ಲಿ ಒಬ್ಬರಾದ ಬೌನ್ಸರ್ ಆಂಟೋನಿ ಬಂಧನವಾಗಿದೆ. ಸಂಧ್ಯಾ ಥಿಯೇಟರ್ನಲ್ಲಿ ಬೌನ್ಸರ್ಗಳು ಅಲ್ಲು ಅರ್ಜುನ್ ಅಭಿಮಾನಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೋ ಮಾಹಿತಿ ಇದೆ.
ಇಂದು ತೆಲಂಗಾಣ ಪೊಲೀಸರು ಮತ್ತೊಮ್ಮೆ ಅಲ್ಲು ಅರ್ಜುನ್ರನ್ನ ವಿಚಾರಣೆಗೆ ಕರೆದಿದ್ದಾರೆ. BNS 35(3) ಸೆಕ್ಷನ್ ಅಡಿ ನೋಟಿಸ್ ಜಾರಿ ಮಾಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಅಲ್ಲು ಅರ್ಜುನ್ ಚಿಕ್ಕಡಪಳ್ಳಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ಚಿಕ್ಕಡಪಳ್ಳಿ ಸಿಐ, ಎಸಿಪಿ ಅಲ್ಲು ಅರ್ಜುನ್ರನ್ನ ವಿಚಾರಣೆ ಮಾಡಿದ್ದಾರೆ. ಕಾಲ್ತುಳಿತ ಪ್ರಕರಣ ಸಂಬಂಧ ಕೆಲ ಕಠಿಣ ಪ್ರಶ್ನೆಗಳನ್ನು ಅಲ್ಲು ಅರ್ಜುನ್ ಎದುರಿಸಿದ್ದಾರೆ.
ಮೂರು ಗಂಟೆಗೂ ಹೆಚ್ಚು ಕಾಲ ನಡೆದ ವಿಚಾರಣೆಯಲ್ಲಿ 20ಕ್ಕೂ ಹೆಚ್ಚು ಪ್ರಶ್ನೆಗಳನ್ನ ಅಲ್ಲು ಅರ್ಜುನ್ಗೆ ಕೇಳಲಾಗಿದೆ. ಕೆಲವು ಪ್ರಶ್ನೆಗಳಿಗೆ ಅಲ್ಲು ಅರ್ಜುನ್ ಮೌನವಾಗಿದ್ದಾರೆ ಎನ್ನಲಾಗಿದೆ. ಅಲ್ಲು ಅರ್ಜುನ್ ಜೊತೆ ವಕೀಲ ಅಶೋಕ್ ರೆಡ್ಡಿ ಇದ್ದರು. ಅವರ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 18 ಜನರನ್ನ ಆರೋಪಿಗಳನ್ನಾಗಿ ಮಾಡಲಾಗಿದೆ. ಮೈತ್ರಿ ಮೂವಿ ಮೇಕರ್ಸ್ ಜೊತೆಗೆ, ಅಲ್ಲು ಅರ್ಜುನ್ ವೈಯಕ್ತಿಕ ಸಿಬ್ಬಂದಿ ಹೆಸರುಗಳನ್ನೂ ರಿಮಾಂಡ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಡಿಸೆಂಬರ್ 4ರಂದು ರಾತ್ರಿ ಪುಷ್ಪ 2 ಪ್ರೀಮಿಯರ್ ಪ್ರದರ್ಶನದ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ನಾಯಕಿ ರಶ್ಮಿಕಾ ಜೊತೆ ಸಂಧ್ಯಾ ಥಿಯೇಟರ್ಗೆ ಹೋಗಿದ್ದರು. ಅಲ್ಲು ಅರ್ಜುನ್ ಬಂದಿದ್ದರಿಂದ ಅಭಿಮಾನಿಗಳು ಥಿಯೇಟರ್ಗೆ ಮುಗಿಬಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಯ್ತು. ರೇವತಿ ಎಂಬ ಮಹಿಳೆ ಸಾವನ್ನಪ್ಪಿದರು. ರೇವತಿ 9 ವರ್ಷದ ಮಗ ಶ್ರೀತೇಜ್ಗೆ ಗಂಭೀರ ಗಾಯಗಳಾಗಿವೆ.
ಈ ಘಟನೆ ಬಗ್ಗೆ ತೆಲಂಗಾಣ ಪೊಲೀಸರು ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಅಲ್ಲು ಅರ್ಜುನ್ ಹೆಸರನ್ನ A11 ಆಗಿ ಸೇರಿಸಿದ್ದಾರೆ. ಡಿಸೆಂಬರ್ 13ರಂದು ಅಲ್ಲು ಅರ್ಜುನ್ ಬಂಧನವಾಯಿತು. ಅವರಿಗೆ ನಾಂಪಳ್ಳಿ ನ್ಯಾಯಾಲಯ 14 ದಿನಗಳ ರಿಮಾಂಡ್ ವಿಧಿಸಿತು. ಅಲ್ಲು ಅರ್ಜುನ್ ಪರ ವಕೀಲರು ಹೈಕೋರ್ಟ್ ಮೊರೆ ಹೋದರು. ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದರು. ವೈಎಸ್ಆರ್ಸಿಪಿ ಸಂಸದ, ವಕೀಲ ನಿರಂಜನ್ ರೆಡ್ಡಿ ಅವರನ್ನ ಕಣಕ್ಕಿಳಿಸಲಾಯಿತು.
ಅವರ ವಾದವನ್ನ ಒಪ್ಪಿಕೊಂಡ ನ್ಯಾಯಾಲಯ ಅಲ್ಲು ಅರ್ಜುನ್ಗೆ 4 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತು. ಆದ್ರೆ ಒಂದು ದಿನ ರಾತ್ರಿ ಅಲ್ಲು ಅರ್ಜುನ್ ಚಂಚಲ್ಗೂಡ ಜೈಲಿನಲ್ಲಿ ಕಳೆಯಬೇಕಾಯಿತು. ಹೈಕೋರ್ಟ್ನಲ್ಲಿ ವಾದ ನಡೆಯುತ್ತಿದ್ದಂತೆಯೇ ಕೆಳ ನ್ಯಾಯಾಲಯದ ತೀರ್ಪಿನಂತೆ ಅಲ್ಲು ಅರ್ಜುನ್ರನ್ನ ಚಂಚಲ್ಗೂಡ ಜೈಲಿಗೆ ಕಳುಹಿಸಲಾಯಿತು. ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ರೂ ಆದೇಶದ ಪ್ರತಿ ಜೈಲು ಅಧಿಕಾರಿಗಳಿಗೆ ತಲುಪಬೇಕಿತ್ತು. ಆ ಪ್ರತಿ ಸಕಾಲಕ್ಕೆ ಸಿಗಲಿಲ್ಲ ಅನ್ನೋ ಕಾರಣಕ್ಕೆ ಅಲ್ಲು ಅರ್ಜುನ್ರನ್ನ ಜೈಲಿನಲ್ಲಿ ಇರಿಸಲಾಗಿತ್ತು.