
ಟಾಲಿವುಡ್ ನಟ ಅಖಿಲ್ ಅಕ್ಕಿನೇನಿ ತಮ್ಮ ದೀರ್ಘಕಾಲದ ಗೆಳತಿ ಜೈನಾಬ್ ರಾವ್ಡ್ಜಿ ಅವರನ್ನು ಜೂನ್ 6, 2025 ರಂದು ಶುಕ್ರವಾರ ನಡೆದ ತೀರಾ ಖಾಸಗಿ ವಿವಾಹ ಸಮಾರಂಭದಲ್ಲಿ ಮದುವೆಯಾಗಿದ್ದಾರೆ. ಈ ಮೂಲಕ ಅಧಿಕೃತವಾಗಿ ವೈವಾಹಿಕ ಜೀವನದ ಹೊಸ ಅಧ್ಯಾಯ ಮುನ್ನುಡಿ ಬರೆದಿದ್ದಾರೆ. ಮದುವೆಯಲ್ಲಿ ಮೊದಲ ಮಗ ನಾಗಚೈತನ್ಯ ಮತ್ತು ಶೋಭಿತಾ ದೂಲಿಪಾಲ ಭಾಗವಹಿಸಿದ್ದಾರೋ ಇಲ್ಲವೋ ಎಂಬ ಬಗ್ಗೆ ಪ್ರಶ್ನೆ ಎದ್ದಿದೆ. ಏಕೆಂದರೆ ಎಲ್ಲೂ ಮದುವೆಯ ಫೋಟೋಗಳು ಸಿಕ್ಕಿಲ್ಲ. ಶೋಭಿತಾ ಗರ್ಭಿಣಿ ಎನ್ನಲಾಗುತ್ತಿದ್ದು, ಹಾಗಾಗಿ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ. ಸಮಂತಾರಿಂದ ವಿಚ್ಚೇದನ ಪಡೆದ ಬಳಿಕ ನಾಗಾರ್ಜುನ ಮೊದಲ ಮಗ ನಾಗ ಚೈತನ್ಯ ನಟಿ ಶೋಭಿತಾ ಅವರನ್ನು ಡಿಸೆಂಬರ್ 4, 2024ರಲ್ಲಿ ಖಾಸಗಿ ಸಮಾರಂಭದಲ್ಲಿ ಮದುವೆಯಾದರು. ಮೊದಲ ಮಗನ ಮದುವೆಯಾದ ಸರಿಯಾಗೊ 6 ತಿಂಗಳಿಗೆ ಎರಡನೇ ಮಗ ನಿಖಿಲ್ ಮದುವೆಯನ್ನು ಮಾಡಿದ್ದಾರೆ. ಈ ಹಿಂದೆ ಅಖಿಲ್ 2016ರಲ್ಲಿ ಶ್ರೀಯಾ ಭೂಪಾಲ್ ಅವರ ಜೊತೆಗೆ ಎಂಗೇಜ್ ಆಗಿದ್ದರು. ಆದರೆ ಕಾರಣಾಂತರಗಳಿಂದ ಆ ಮದುವೆ ಮುರಿದು ಬಿತ್ತು.
ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ನಾಗಾರ್ಜುನ ಅವರ ಹೊಸ ಮನೆಯಲ್ಲಿ ವಿವಾಹ ಸಮಾರಂಭ ನಡೆಯಿತು. ಕೆಲವೇ ಕೆಲವು ಸಂಬಂಧಿಕರು ಮತ್ತು ಸೆಲೆಬ್ರಿಟಿಗಳು ಮದುವೆಗೆ ಹಾಜರಿದ್ದರು. ಮೂರು ವರ್ಷಗಳಿಂದ ಸಂಬಂಧದಲ್ಲಿದ್ದ ಈ ಜೋಡಿ ನವೆಂಬರ್ 26, 2024 ರಂದು ನಿಶ್ಚಿತಾರ್ಥ ಮಾಡಿಕೊಂಡಿತ್ತು. ಈಗ ನಿಕಟ ಕುಟುಂಬ ಮತ್ತು ಸ್ನೇಹಿತರು ಮಾತ್ರ ಭಾಗಿಯಾದವರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಹಿಂದೂ ವಿವಾಹ ಪದ್ದತಿಯಂತೆ ಸತಿ ಪತಿಗಳಾಗಿದ್ದಾರೆ.
ಚಿರಂಜೀವಿ, ಪ್ರಶಾಂತ್ ನೀಲ್ ಸೇರಿದಂತೆ ಖ್ಯಾತರು ಈ ವಿವಾಹದಲ್ಲಿ ಕಾಣಿಸಿಕೊಂಡರು. ಮಿಕ್ಕಂತೆ ಸುರೇಶ್, ರಾಮ್ ಚರಣ್ ಮತ್ತು ಉಪಾಸನ ಹಾಜರಿದ್ದರು. ಅವರೊಂದಿಗೆ ದಗ್ಗುಬಾಟಿ ಕುಟುಂಬವೂ ಹಾಜರಿದ್ದರು ಎಂದು ತಿಳಿದುಬಂದಿದೆ. ವೆಂಕಟೇಶ್, ರಾಣಾ ಮತ್ತು ಸುರೇಶ್ ಬಾಬು ಅವರಂತಹ ಜನರು ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. ವಿವಾಹವು ಸರಳ ಕಾರ್ಯಕ್ರಮವಾಗಿತ್ತು. ಅಕ್ಕಿನೇನಿ ಕುಟುಂಬ ಗೌಪ್ಯತೆಯನ್ನು ಕಾಯ್ದುಕೊಂಡಿತ್ತು. ಆದರೆ ಈ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಒಂದು ಚಿತ್ರ ಲೀಕ್ ಆಗಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಲ್ಲಿವರೆಗೆ ಕುಟುಂಬದಿಂದ ಯಾವುದೇ ಅಧಿಕೃತ ಚಿತ್ರಗಳು ಹೊರ ಬಂದಿರಲಿಲ್ಲ.
ಅಖಿಲ್ ಮತ್ತು ಜೈನಾಬ್ ಇಬ್ಬರೂ ಸಾಂಪ್ರದಾಯಿಕ ತೆಲುಗು ಮದುವೆಯ ಉಡುಪನ್ನು ಧರಿಸಿದ್ದರು. ವಧು ತಿಳಿ ನೀಲಿಬಣ್ಣದ ಸೀರೆಯಲ್ಲಿ ಅದ್ಭುತವಾದ ವಜ್ರದ ಆಭರಣಗಳೊಂದಿಗೆ ಸೊಗಸಾಗಿ ಕಾಣುತ್ತಿದ್ದರು. ಸಮಾರಂಭದ ಸಾಂಸ್ಕೃತಿಕ ಬೇರುಗಳನ್ನು ಅಳವಡಿಸಿಕೊಂಡು, ಅಖಿಲ್ ಸರಳವಾದ ಬಿಳಿ ಕುರ್ತಾ ಮತ್ತು ಧೋತಿಯೊಂದಿಗೆ ಕಾಣಿಸಿಕೊಂಡರು. ದಂಪತಿಗಳ ಆಕರ್ಷಕವಾದ ಉಡುಪುಗಳು ಮತ್ತು ಸೌಂದರ್ಯಕ್ಕಾಗಿ ಆನ್‌ಲೈನ್‌ನಲ್ಲಿ ಹೆಚ್ಚಿನ ಪ್ರಶಂಸೆಯನ್ನು ಪಡೆದಿವೆ.
ನಾಗಾರ್ಜುನ ತಮ್ಮ ಮಗ ಅಖಿಲ್ ಮದುವೆಯನ್ನು ಸಂಪೂರ್ಣವಾಗಿ ಖಾಸಗಿ ಸಮಾರಂಭದಲ್ಲಿ ನಡೆಸುತ್ತಿದ್ದಾರೆ. ಯಾವುದೇ ಮಾಧ್ಯಮ ವರದಿಗೆ ಅವಕಾಶ ನೀಡಲಾಗಿಲ್ಲ. ಈ ಕಾರಣದಿಂದಾಗಿ, ಈ ಮದುವೆಗೆ ಸಂಬಂಧಿಸಿದ ಯಾವುದೇ ವಿಷಯಗಳು ಹೊರಬಂದಿಲ್ಲ. ಈ ನಡುವೆ ಅಕ್ಕಿನೇನಿ ಕುಟುಂಬವು ಈ ಮದುವೆ ಬಗ್ಗೆ ನಡೆಯುವ ಬಗ್ಗೆಯಾಗಲಿ ಅಧಿಕೃತವಾಗಿ ಘೋಷಿಸಿರಲಿಲ್ಲ. ಆದರೆ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ತಂದೆ ನಾಗಾರ್ಜುನ ನನ್ನ ಮಗನ ಮದುವೆ ಎಂದು ಬರೆದುಕೊಂಡು ಮದುವೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ವಿವಾಹದ ಹೆಚ್ಚಿನ ಫೋಟೋಗಳು ಯಾವುದನ್ನೂ ಹಾಕಿಕೊಂಡಿಲ್ಲ. ನವವಿವಾಹಿತರಿಗೆ ಚಲನಚಿತ್ರೋದ್ಯಮ ಮತ್ತು ಅಭಿಮಾನಿ ವಲಯದಿಂದ ಅಭಿನಂದನೆಗಳು ಹರಿದು ಬರುತ್ತಿವೆ.
ಈ ತಿಂಗಳ 8ನೇ ತಾರೀಖಿನ (ಭಾನುವಾರ) ಸಂಜೆ ನಾಗಾರ್ಜುನ ಅವರು ಅದ್ಧೂರಿ ಆರತಕ್ಷತೆ ಕಾರ್ಯಕ್ರಮವನ್ನು ಯೋಜಿಸಿದ್ದಾರೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಉಪ ಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ, ಇತರ ರಾಜಕೀಯ ಮುಖಂಡರು, ಹೆಚ್ಚಿನ ನಾಯಕರು, ನಿರ್ದೇಶಕರು, ನಿರ್ಮಾಪಕರು ಮತ್ತು ಉದ್ಯಮದ ಕೆಲವು ನಾಯಕಿಯರು ಇದರಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಅಖಿಲ್ ಪ್ರಸ್ತುತ `ಲೆನಿನ್` ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀಲೀಲಾ ನಟಿಸಿರುವ ಈ ಚಿತ್ರ ಚಿತ್ರೀಕರಣ ಹಂತದಲ್ಲಿದೆ. ಇದು ಬಿಡುಗಡೆಗೆ ಸಿದ್ಧವಾಗಲಿದೆ.
ಜೈನಬ್ ಗೌರವಾನ್ವಿತ ಮತ್ತು ಯಶಸ್ವಿ ಕುಟುಂಬ ಹಿನ್ನೆಲೆಯಿಂದ ಬಂದವರು. ಅವರ ತಂದೆ ಜುಲ್ಫಿ ರಾವ್ಜಿ, ನಿರ್ಮಾಣ ಉದ್ಯಮದಲ್ಲಿ ಪ್ರಮುಖ ವ್ಯಕ್ತಿ. ಸಿನೆಮಾ ಕ್ಷೇತ್ರದಲ್ಲಿ ಸಿನೆಮಾ ಹಂಚಿಕೆದಾರರಾಗಿ ವ್ಯಾಪಕ ಹೆಸರು ಗಳಿಸಿದ್ದಾರೆ. ಅವರ ಸಹೋದರ ಝೈನ್ ರಾವ್ಜಿ, ಭಾರತದ ಶುದ್ಧ ಇಂಧನ ಕ್ಷೇತ್ರದಲ್ಲಿ ಉದಯೋನ್ಮುಖ ಹೆಸರಾದ ZR ನವೀಕರಿಸಬಹುದಾದ ಇಂಧನ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ವ್ಯವಹಾರ ಆಧಾರಿತ ವಾತಾವರಣದಲ್ಲಿ ಬೆಳೆದರೂ, ಜೈನಾಬ್ ಬೇರೆಯದೇ ಹಾದಿಯನ್ನು ಆರಿಸಿಕೊಂಡರು. ಅವರ ಕುಟುಂಬದ ಬೆಂಬಲದೊಂದಿಗೆ ಬಹುಮುಖ ಪ್ರತಿಭೆಯ ವ್ಯಕ್ತಿಯಾಗಿ ಬೆಳೆದರು.ಜೈನಾಬ್ ರಾವ್ಜಿ ಮುಂಬೈನಲ್ಲಿ ಕಲಾವಿದೆ ಮತ್ತು ಸುಗಂಧ ದ್ರವ್ಯ ತಯಾರಕಿ, ಸ್ಕಿನ್ ಕೇರ್ ಕ್ಲಿನಿಕ್ ಹೊಂದಿದ್ದಾರೆ . ಅವರು ಹೈದರಾಬಾದ್ ಮೂಲದ ಕೈಗಾರಿಕೋದ್ಯಮಿ ಜುಲ್ಫಿ ರಾವ್ಜಿ ಅವರ ಪುತ್ರಿ ಮತ್ತು ಭಾರತ, ದುಬೈ ಮತ್ತು ಲಂಡನ್‌ನಲ್ಲಿ ಪ್ರದರ್ಶನಗಳ ಮೂಲಕ ಖ್ಯಾತಿಯನ್ನು ಗಳಿಸಿದ್ದಾರೆ.