ಹೊಸ ಮಾರುತಿ ಗ್ರಾಂಡ್ ವಿಟಾರಾ ಕಾರು ಇ-20 ಇಂಧನದಿಂದ ಪದೇ ಪದೇ ಕೈಕೊಟ್ಟ ಕಾರಣ, ಗ್ರಾಹಕನಿಗೆ ಹೊಸ ಕಾರು ನೀಡಿ ಅಥವಾ ₹20.50 ಲಕ್ಷ ಹಣವನ್ನು ಮರಳಿಸುವಂತೆ ರಾಯ್‌ಪುರ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
ಹೊಸದಾಗಿ ಖರೀದಿಸಿದ ಮಾರುತಿ ಸುಜುಕಿ 'ಗ್ರಾಂಡ್ ವಿಟಾರಾ' ಕಾರು ಪದೇ ಪದೇ ಕೈಕೊಟ್ಟ ಹಿನ್ನೆಲೆಯಲ್ಲಿ, ಗ್ರಾಹಕನಿಗೆ ಹೊಸ ಇ-20 (E20) ಇಂಧನ ಸ್ನೇಹಿ ಕಾರು ನೀಡಬೇಕು ಅಥವಾ ಸಂಪೂರ್ಣ ಹಣ ಮರಳಿಸಬೇಕು ಎಂದು ರಾಯ್‌ಪುರ ಗ್ರಾಹಕ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಇ-20 ಇಂಧನ ಬಳಕೆಯಿಂದ ಕಾರು ಕೆಟ್ಟುಹೋದ ಪ್ರಕರಣದಲ್ಲಿ ಗ್ರಾಹಕನಿಗೆ ಇಷ್ಟು ದೊಡ್ಡ ಮೊತ್ತದ ಪರಿಹಾರ ನೀಡಲು ಆದೇಶಿಸಿರುವುದು ದೇಶದಲ್ಲೇ ಇದೇ ಮೊದಲ ಪ್ರಕರಣ ಎನ್ನಲಾಗಿದೆ. ಆದರೆ, ಈ ಆದೇಶದಲ್ಲಿ ಹಲವು ಪ್ರಮುಖ ತಾಂತ್ರಿಕ ಸತ್ಯಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿರುವ ಮಾರುತಿ ಸುಜುಕಿ ಕಂಪನಿಯು, ಗ್ರಾಹಕ ನ್ಯಾಯಾಲಯದ ಈ ತೀರ್ಪನ್ನು ಮೇಲ್ಮನವಿ ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧರಿಸಿದೆ.
26
ಗ್ರಾಹಕ ನ್ಯಾಯಾಲಯ ನೀಡಿದ ಮಹತ್ವದ ತೀರ್ಪು ಮತ್ತು ದಂಡದ ವಿವರ
ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು ಪ್ರಕರಣದ ವಿಚಾರಣೆ ನಡೆಸಿ ಮಾರುತಿ ಸುಜುಕಿ ಕಂಪನಿಗೆ ಬಿಸಿ ಮುಟ್ಟಿಸಿದೆ. 45 ದಿನಗಳ ಒಳಗೆ ಗ್ರಾಹಕನಿಗೆ ಇ-20 ಇಂಧನಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಹೊಸ ಗ್ರಾಂಡ್ ವಿಟಾರಾ ಕಾರನ್ನು ಬದಲಾಯಿಸಿಕೊಡಬೇಕು ಎಂದು ಆದೇಶಿಸಿದೆ. ಒಂದು ವೇಳೆ ಕಾರು ಬದಲಾಯಿಸಿಕೊಡಲು ವಿಫಲವಾದರೆ, ಗ್ರಾಹಕ ಕಾರಿಗೆ ಪಾವತಿಸಿದ್ದ ನೋಂದಣಿ ಹಾಗೂ ವಿಮೆ ಸೇರಿದಂತೆ ಒಟ್ಟು ₹20.50 ಲಕ್ಷ ಹಣವನ್ನು ಸಂಪೂರ್ಣವಾಗಿ ಮರಳಿಸಬೇಕು ಎಂದು ಸ್ಪಷ್ಟಪಡಿಸಿದೆ. ಇದರೊಂದಿಗೆ ಗ್ರಾಹಕ ಅನುಭವಿಸಿದ ಮಾನಸಿಕ ಕಿರುಕುಳಕ್ಕೆ ₹1 ಲಕ್ಷ ಮತ್ತು ಕಾನೂನು ಹೋರಾಟದ ವೆಚ್ಚವಾಗಿ ₹10,000 ಪರಿಹಾರ ನೀಡುವಂತೆಯೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
36
ಏನಿದು ಇ-20 ಕಾರು ವಿವಾದ? ಹಿನ್ನೆಲೆ ಇಲ್ಲಿದೆ
ರಾಯ್‌ಪುರ ನಿವಾಸಿಯಾದ ವೈದ್ಯ ಡಾ. ಪ್ರೇಮರಾಜ್ ಡೇಬ್ಟಾ ಅವರು ಜೂನ್ 2024 ರಲ್ಲಿ ಮಾರುತಿ ಸುಜುಕಿಯ ಅಧಿಕೃತ ನೆಕ್ಸಾ ಡೀಲರ್‌ಶಿಪ್‌ನಿಂದ 'ಗ್ರಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್ ಜೇಟಾ ಪ್ಲಸ್' ಕಾರನ್ನು ಖರೀದಿಸಿದ್ದರು. ಕಾರು ಡಿಸೆಂಬರ್ 2023 ರಲ್ಲಿ ತಯಾರಿಸಲ್ಪಟ್ಟಿದೆ ಎಂದು ಡೀಲರ್‌ಗಳು ಭರವಸೆ ನೀಡಿದ್ದರು. ಆದರೆ ಬಳಿಕ ಆರ್‌ಟಿಒ ಮತ್ತು ಗ್ರಾಹಕ ಆಯೋಗದ ದಾಖಲೆಗಳ ಮೂಲಕ ಈ ಕಾರು ಜನವರಿ 2023 ರಲ್ಲಿ ತಯಾರಾಗಿದ್ದ ಹಳೆಯ ಮಾಡೆಲ್ ಎನ್ನುವುದು ಬಯಲಿಗೆ ಬಂದಿತ್ತು. ಹೊಸ ಇ-20 ಇಂಧನ ನೀತಿ ಜಾರಿಗೆ ಬರುವ ಮುನ್ನ ತಯಾರಾದ ಈ ಕಾರು, ಶೇ.20 ರಷ್ಟು ಎಥನಾಲ್ ಮಿಶ್ರಿತ ಪೆಟ್ರೋಲ್‌ಗೆ ಪೂರಕವಾಗಿರಲಿಲ್ಲ ಎನ್ನಲಾಗಿದೆ.
ಕಾರು ಖರೀದಿಸಿದ ಕೆಲವೇ ತಿಂಗಳುಗಳಲ್ಲಿ (ನವೆಂಬರ್ 2024 ರಲ್ಲಿ) ಇಂಜಿನ್ ಮಾಲ್‌ಫಂಕ್ಷನ್ ಸೂಚನೆ ಡ್ಯಾಶ್‌ಬೋರ್ಡ್‌ನಲ್ಲಿ ಕಾಣಿಸಿಕೊಂಡು ಕಾರು ಹಾದಿ ಮಧ್ಯದಲ್ಲೇ ಆಫ್ ಆಗಲಾರಂಭಿಸಿತು. ಡೀಲರ್‌ಶಿಪ್‌ನವರು ಪೆಟ್ರೋಲ್‌ನಲ್ಲಿ ಕಲಬೆರಕೆ ಇರುವುದೇ ಇದಕ್ಕೆ ಕಾರಣ ಎಂದು ಹೇಳಿ ಇಡೀ ಟ್ಯಾಂಕ್ ಖಾಲಿ ಮಾಡಿ ಹೊಸ ಪೆಟ್ರೋಲ್ ತುಂಬಿಸಿಕೊಟ್ಟಿದ್ದರು. ಆದರೆ ಪೆಟ್ರೋಲ್ ಬಂಕ್ ಮಾಲೀಕರು ತಮ್ಮ ಇಂಧನದಲ್ಲಿ ಯಾವುದೇ ದೋಷವಿಲ್ಲ ಎಂದು ಲಿಖಿತವಾಗಿ ಸ್ಪಷ್ಟಪಡಿಸಿದ್ದರು. ಇದಾದ ಮೇಲೆಯೂ ಕಾರು ಪದೇ ಪದೇ ಕೆಟ್ಟುಹೋಗಿ ಸುಮಾರು ಒಂದು ತಿಂಗಳ ಕಾಲ ವರ್ಕ್‌ಶಾಪ್‌ನಲ್ಲೇ ಧೂಳು ಹಿಡಿಯುವಂತಾಯಿತು.
56
ವಾರಂಟಿ ನಿರಾಕರಣೆ ಮತ್ತು ₹5.30 ಲಕ್ಷ ಬೇಡಿಕೆ
ಕಾರಿನ ಸಮಸ್ಯೆ ಮುಂದುವರಿದಾಗ ಡೀಲರ್‌ಗಳು ಗ್ರಾಹಕನಿಗೆ ಇಮೇಲ್ ಕಳುಹಿಸಿ, "ಕಲಬೆರಕೆ ಪೆಟ್ರೋಲ್ ಬಳಕೆಯಿಂದ ಇಂಜಿನ್ ಹಾಳಾಗಿದೆ. ಇದನ್ನು ವಾರಂಟಿ ಅಡಿಯಲ್ಲಿ ಉಚಿತವಾಗಿ ಸರಿಪಡಿಸಲು ಬರಲ್ಲ. ಇಂಜಿನ್ ಬದಲಾಯಿಸಲು ₹5.30 ಲಕ್ಷ ವೆಚ್ಚವಾಗುತ್ತದೆ, ಅದನ್ನು ಗ್ರಾಹಕರೇ ಭರಿಸಬೇಕು" ಎಂದು ತಿಳಿಸಿದ್ದರು. ಕಾರು ಕಂಪನಿಯ ಈ ಉದ್ಧಟತನದ ವರ್ತನೆಯಿಂದ ಬೇಸತ್ತ ವೈದ್ಯ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಕಂಪನಿಯ ವಾದಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ ಗ್ರಾಹಕರ ಪರವಾಗಿ ತೀರ್ಪು ಪ್ರಕಟಿಸಿತು.
66
ತೀರ್ಪನ್ನು ಬಲವಾಗಿ ವಿರೋಧಿಸಿದ ಮಾರುತಿ ಸುಜುಕಿ
ಈಗ ಈ ಆದೇಶವನ್ನು ದೇಶದ ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲು ಮಾರುತಿ ಸುಜುಕಿ ನಿರ್ಧರಿಸಿದೆ. ಗ್ರಾಹಕನಿಗೆ ನೀಡಲಾದ ಕಾರು ಸಂಪೂರ್ಣವಾಗಿ ಇ-20 ಹೊಂದಾಣಿಕೆ (E20 Compliant) ಹೊಂದಿತ್ತು ಮತ್ತು ಈ ಬಗ್ಗೆ ಕಾರಿನ ಯೂಸರ್ ಮ್ಯಾನ್ಯುವಲ್‌ನಲ್ಲೇ ವಿವರಣೆ ನೀಡಲಾಗಿತ್ತು ಎಂದು ಕಂಪನಿ ಸಮರ್ಥಿಸಿಕೊಂಡಿದೆ. ತಾಂತ್ರಿಕ ತಪಾಸಣೆಯ ವೇಳೆ ಇಂಧನದಲ್ಲಿ ಕಲಬೆರಕೆ ದ್ರವ ಇರುವುದು ಪತ್ತೆಯಾಗಿತ್ತು. ನ್ಯಾಯಾಲಯವು ಈ ಪ್ರಮುಖ ವೈಜ್ಞಾನಿಕ ಸಾಕ್ಷ್ಯಗಳನ್ನು ಮತ್ತು ಪ್ರಮುಖ ವಾಸ್ತವಾಂಶಗಳನ್ನು ಆದೇಶದಲ್ಲಿ ಪರಿಗಣಿಸಿಲ್ಲ ಎಂದು ಮಾರುತಿ ಸುಜುಕಿ ಆರೋಪಿಸಿದೆ.