ಆನ್‌ಲೈನ್ ಆಹಾರ ವಿತರಣಾ ವೇದಿಕೆಗಳಾದ ಝೊಮ್ಯಾಟೋ ಮತ್ತು ಸ್ವಿಗ್ಗಿ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಇತ್ತೀಚೆಗೆ ದಸರಾ - ದೀಪಾವಳಿ ಹಬ್ಬ ಮಾತ್ರವಲ್ಲದೆ ವಿಶ್ವಕಪ್ ಕ್ರಿಕೆಟ್ ಸಮಯದಲ್ಲಿ ಈ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಆಫರ್‌ಗಳನ್ನು ಘೋಷಿಸಿತ್ತು. ಆದರೀಗ, ಕೆಂದ್ರದ ತೆರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಆನ್‌ಲೈನ್ ಆಹಾರ ವಿತರಣಾ ವೇದಿಕೆಗಳಾದ ಝೊಮ್ಯಾಟೋ ಮತ್ತು ಸ್ವಿಗ್ಗಿ ವಿತರಣಾ ಶುಲ್ಕದ ಮೇಲೆ ತಲಾ 500 ಕೋಟಿ ರೂ. ಮೌಲ್ಯದ ಜಿಎಸ್‌ಟಿ ನೋಟಿಸ್‌ಗಳನ್ನು ಸ್ವೀಕರಿಸಿವೆ ಎಂದು ಮಾಧ್ಯಮ ವರದಿಗಳು ಬುಧವಾರ ತಿಳಿಸಿವೆ.
ಈ ಎರಡೂ ಆನ್‌ಲೈನ್ ಆಹಾರ ವಿತರಣಾ ವೇದಿಕೆಗಳು ಡೆಲಿವರಿ ಫೀ ಅಥವಾ ವಿತರಣಾ ಶುಲ್ಕದ ಹೆಸರಿನಲ್ಲಿ ಗ್ರಾಹಕರಿಂದ ಹಣವನ್ನು ಪಡೆಯುತ್ತಿವೆ.
ಸುಮಾರು 1000 ಕೋಟಿ ರೂಪಾಯಿಗಳನ್ನು ಒಳಗೊಂಡಿರುವ ವಿತರಣಾ ಶುಲ್ಕಕ್ಕೆ ಸಂಬಂಧಿಸಿದಂತೆ ತೆರಿಗೆ ಅಧಿಕಾರಿಗಳು ಮತ್ತು ಆಹಾರ ವಿತರಣಾ ಅಪ್ಲಿಕೇಶನ್‌ಗಳ ನಡುವೆ ವಿವಾದವಿದೆ ಎಂದು ವರದಿಗಳು ಹೇಳುತ್ತಿವೆ.
ಡೆಲಿವರಿ ಶುಲ್ಕ ಎಂಬುದು ಮನೆಯಿಂದ ಮನೆಗೆ ಆಹಾರವನ್ನು ತಲುಪಿಸಲು ಹೋಗುವ ವಿತರಣಾ ಪಾಲುದಾರರು ಭರಿಸುವ ವೆಚ್ಚವನ್ನು ಹೊರತುಪಡಿಸಿ ಬೇರೇನೂ ಅಲ್ಲ. ಕಂಪನಿಗಳು ಗ್ರಾಹಕರಿಂದ ಆ ವೆಚ್ಚವನ್ನು ಸಂಗ್ರಹಿಸುತ್ತವೆ ಮತ್ತು ಅದನ್ನು ವಿತರಣಾ ಪಾಲುದಾರರಿಗೆ ವರ್ಗಾಯಿಸುತ್ತವೆ ಎಂದು Zomato ಮತ್ತು Swiggy ಹೇಳುತ್ತವೆ. ಆದರೆ, ತೆರಿಗೆ ಅಧಿಕಾರಿಗಳು ಇದನ್ನು ಒಪ್ಪುವುದಿಲ್ಲ ಎಂದು ತಿಳಿದುಬಂದಿದೆ.
ಆದರೆ ಡೆಲಿವರಿ ಶುಲ್ಕ ಮಾತ್ರವಲ್ಲದೆ, ಪ್ಲಾಟ್‌ಫಾರ್ಮ್ ಶುಲ್ಕವೆಂದೂ ಗ್ರಾಹಕರಿಂದ ವಸೂಲಿ ಮಾಡಲಾಗ್ತಿದೆ. ಕಳೆದ ತಿಂಗಳು, ಸ್ವಿಗ್ಗಿ ಆಹಾರ ಆರ್ಡರ್‌ಗಳಿಗಾಗಿ ಪ್ಲಾಟ್‌ಫಾರ್ಮ್ ಶುಲ್ಕವನ್ನು 2 ರೂ. ನಿಂದ 3 ರೂ.ಗೆ ಹೆಚ್ಚಿಸಿತ್ತು.
ಈ ಬಗ್ಗೆ ಸುದ್ದಿ ಸಂಸ್ಥೆ IANS ಗೆ ಪ್ರತಿಕ್ರಿಯೆ ನೀಡಿದ್ದ ಸ್ವಿಗ್ಗಿ ವಕ್ತಾರರೊಬ್ಬರು, ಪ್ಲಾಟ್‌ಫಾರ್ಮ್ ಶುಲ್ಕದಲ್ಲಿ ಯಾವುದೇ ಮಹತ್ವದ ಬದಲಾವಣೆ ಇಲ್ಲ, ಇದು ಹೆಚ್ಚಿನ ಸರ್ವೀಸ್ ಕಂಪನಿಗಳು ಮತ್ತು ಕೈಗಾರಿಕೆಗಳಾದ್ಯಂತ ಸಾಮಾನ್ಯ ಅಭ್ಯಾಸವಾಗಿದೆ ಎಂದು ಸಮರ್ಥಿಸಿಕೊಂಡಿದ್ದರು.
ಏಪ್ರಿಲ್‌ನಲ್ಲಿ, ಈ ಕಂಪನಿಯು ಕಾರ್ಟ್ ಮೌಲ್ಯವನ್ನು ಲೆಕ್ಕಿಸದೆ ಪ್ರತಿ ಆರ್ಡರ್‌ಗೆ 2 ರೂ. ಪ್ಲಾಟ್‌ಫಾರ್ಮ್ ಶುಲ್ಕವನ್ನು ಪರಿಚಯಿಸಿತ್ತು.
ಆಗಸ್ಟ್‌ನಲ್ಲಿ, ಝೊಮ್ಯಾಟೋ ಸಹ ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು 2 ರೂ. ನಿಂದ ಪ್ರತಿ ಆರ್ಡರ್‌ಗೆ 3 ರೂ. ಗೆ ಹೆಚ್ಚಿಸಿದೆ. ಅಲ್ಲದೆ, ಈ ಹಿಂದೆ ವಿನಾಯಿತಿ ಪಡೆದಿದ್ದ ಝೊಮ್ಯಾಟೋ ಗೋಲ್ಡ್ ಬಳಕೆದಾರರಿಂದಲೂ ಸಹ Zomato ಪ್ಲಾಟ್‌ಫಾರ್ಮ್ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿದೆ.