ಸ್ವಿಗ್ಗಿ ಸಂಸ್ಥೆಯು 'ಸ್ವಿಗ್ಗಿ ಬಿಲ್ಡರ್ಸ್ ಕ್ಲಬ್' ಎಂಬ ಹೊಸ ವೇದಿಕೆಯನ್ನು ಆರಂಭಿಸಿದ್ದು, ಡೆವಲಪರ್‌ಗಳು ಎಐ ಏಜೆಂಟ್‌ಗಳನ್ನು ನಿರ್ಮಿಸಲು ಆಹ್ವಾನಿಸಿದೆ. ಈ ತಂತ್ರಜ್ಞಾನವು ಗ್ರಾಹಕರ ಇಷ್ಟಗಳನ್ನು ಅರಿತು, 'ನನಗೆ ಹಸಿವಾಗ್ತಿದೆ' ಎಂದು ಟೈಪ್ ಮಾಡಿದರೆ ಸಾಕು, ತಾನಾಗಿಯೇ ಊಟವನ್ನು ಆರ್ಡರ್ ಮಾಡಲಿದೆ.
ಬೆಂಗಳೂರು: ನಾವು ಸಾಮಾನ್ಯವಾಗಿ ಯಾವುದಾದರೂ ಅಗ್ರಿಗೇಟರ್ ಆ್ಯಪ್ ಓಪನ್ ಮಾಡಿ, ನಮಗೆ ಬೇಕಾದ ಊಟವನ್ನು ಹುಡುಕಿ ಆರ್ಡರ್ ಮಾಡುತ್ತೇವೆ. ಆದರೆ ಮುಂದಿನ ದಿನಗಳಲ್ಲಿ ನೀವು ಕೇವಲ "ನನಗೆ ಹಸಿವಾಗ್ತಿದೆ" ಎಂದು ಟೈಪ್ ಮಾಡಿದರೆ ಸಾಕು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನವೇ ನಿಮ್ಮಿಷ್ಟದ ಊಟವನ್ನು ಸ್ವಿಗ್ಗಿಯಲ್ಲಿ ತಾನಾಗಿಯೇ ಆರ್ಡರ್ ಮಾಡಲಿದೆ!ಇಂಥಹದ್ದೊಂದು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸ್ವಿಗ್ಗಿ ಸಂಸ್ಥೆ ಇದೀಗ ಸಾಫ್ಟ್‌ವೇರ್ ಡೆವಲಪರ್‌ಗಳಿಗೆ, ಸ್ಟಾರ್ಟ್‌ಅಪ್‌ಗಳಿಗೆ ಮತ್ತು ಐಟಿ ಕಂಪನಿಗಳಿಗೆ ಮುಕ್ತ ಆಹ್ವಾನ ನೀಡಿದ್ದು, ಇದಕ್ಕಾಗಿ 'ಸ್ವಿಗ್ಗಿ ಬಿಲ್ಡರ್ಸ್ ಕ್ಲಬ್' ಎಂಬ ಹೊಸ ವೇದಿಕೆಯನ್ನು ಆರಂಭಿಸಿದೆ.
25
ಏನಿದು ಸ್ವಿಗ್ಗಿ ಬಿಲ್ಡರ್ಸ್ ಕ್ಲಬ್? ನಿಮ್ಮಿಷ್ಟದ ಆಹಾರ ಬುಕ್ ಆಗುವುದು ಹೇಗೆ?
ಸರಳವಾಗಿ ಹೇಳಬೇಕೆಂದರೆ, ಸ್ವಿಗ್ಗಿ ತನ್ನ ಒಳಗಿನ 'ಸಾಫ್ಟ್‌ವೇರ್ ಸಿಸ್ಟಮ್' ಅನ್ನು (ಇದನ್ನು ತಾಂತ್ರಿಕ ಭಾಷೆಯಲ್ಲಿ ಎಪಿಐ ಮತ್ತು ಎಂಸಿಪಿ ಎನ್ನುತ್ತಾರೆ) ಹೊರಗಿನ ಡೆವಲಪರ್‌ಗಳಿಗೆ ಬಳಸಲು ನೀಡುತ್ತಿದೆ. ಆರಂಭಿಕ ಹಂತದಲ್ಲಿ 3 ಎಂಸಿಪಿ ಸರ್ವರ್‌ಗಳು ಮತ್ತು 18ಕ್ಕೂ ಹೆಚ್ಚು ಎಪಿಐ ಟೂಲ್‌ಗಳನ್ನು ನೀಡಲಾಗುತ್ತದೆ.
ಇದನ್ನು ಬಳಸಿಕೊಂಡು ಸಾಫ್ಟ್‌ವೇರ್ ಎಂಜಿನಿಯರ್‌ಗಳು ಹೊಸ 'ಎಐ ಏಜೆಂಟ್' ಅಥವಾ ಸ್ಮಾರ್ಟ್ ಅಸಿಸ್ಟೆಂಟ್‌ಗಳನ್ನು ಸೃಷ್ಟಿಸಬಹುದು. ಈ ಎಐ ಏಜೆಂಟ್‌ಗಳು ಆಯಾ ಗ್ರಾಹಕರ ಅಭ್ಯಾಸಗಳನ್ನು ಗಮನಿಸಿ ನಂತರ ಮನುಷ್ಯರಂತೆಯೇ ಯೋಚಿಸಿ, ಸ್ವಿಗ್ಗಿಯಲ್ಲಿ ಊಟ ಆರ್ಡರ್ ಮಾಡುವುದು, ಇನ್‌ಸ್ಟಾಮಾರ್ಟ್‌ನಲ್ಲಿ ದಿನಸಿ ತರಿಸುವುದು ಅಥವಾ ಡೈನ್‌ಔಟ್ ಮೂಲಕ ಹೋಟೆಲ್‌ನಲ್ಲಿ ಟೇಬಲ್ ಬುಕ್ ಮಾಡುವಂತಹ ಕೆಲಸಗಳನ್ನು ಮಾಡಲಿವೆ.
35
ಡೆವಲಪರ್‌ಗಳಿಗೆ ಸಿಗಲಿದೆ 'ಅಮೆಜಾನ್' ತಂತ್ರಜ್ಞಾನದ ಬಲ
ಸ್ವಿಗ್ಗಿಯ ಈ ಬಿಲ್ಡರ್ಸ್ ಕ್ಲಬ್ ಸಂಪೂರ್ಣವಾಗಿ ಅಮೆಜಾನ್‌ನ ಎಂಟರ್‌ಪ್ರೈಸ್-ಗ್ರೇಡ್ ಎಐ ತಂತ್ರಜ್ಞಾನದ (ಎಡಬ್ಲ್ಯೂಎಸ್) ಮೇಲೆ ಕಾರ್ಯನಿರ್ವಹಿಸಲಿದೆ. ಡೆವಲಪರ್‌ಗಳಿಗೆ ಸುಲಭವಾಗಿ ತಂತ್ರಜ್ಞಾನವನ್ನು ಡೆವಲಪ್ ಮಾಡಲು ಮೂರು ಪ್ರಮುಖ ಸೌಲಭ್ಯಗಳನ್ನು ಸಹ ನೀಡಲಾಗಿದೆ.
ಅಮೆಜಾನ್ ಬೆಡ್‌ರಾಕ್: ಇದು ಮೆಟಾ, ಮಿಸ್ಟ್ರಲ್ ಎಐನಂತಹ ಜಗತ್ತಿನ ಟಾಪ್ ಎಐ ತಂತ್ರಜ್ಞಾನಗಳನ್ನು ಒಂದೇ ಕಡೆ ಒದಗಿಸಲಿದೆ.
ಎಡಬ್ಲ್ಯೂಎಸ್ ಟ್ರೈನಿಯಮ್: ಇವು ಎಐಗಾಗಿ ವಿನ್ಯಾಸಗೊಳಿಸಲಾದ ವಿಶೇಷ 'ಚಿಪ್'ಗಳಾಗಿದ್ದು, ಎಐ ತರಬೇತಿ ವೆಚ್ಚದಲ್ಲಿ ಶೇ. 50ರಷ್ಟು ಹಣ ಉಳಿಸುತ್ತವೆ. ಅಷ್ಟೇ ಅಲ್ಲದೆ ಶೇ. 30-40ರಷ್ಟು ವೇಗವಾಗಿ ಕೆಲಸ ಮಾಡುತ್ತವೆ.
ಅಮೆಜಾನ್ ಏಜೆಂಟ್‌ಕೋರ್: ಡೆವಲಪರ್‌ಗಳು ಸುಲಭವಾಗಿ ಎಐ ಏಜೆಂಟ್‌ಗಳನ್ನು (ಸ್ಮಾರ್ಟ್ ಅಸಿಸ್ಟೆಂಟ್) ನಿರ್ಮಿಸಲು ಸಹಾಯ ಮಾಡುವ ಸಾಫ್ಟ್‌ವೇರ್ ಇದಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಿಗ್ಗಿಯ ಸಿಟಿಒ ಮಧುಸೂಧನ್ ರಾವ್, "ನಾವು ಡೆವಲಪರ್‌ಗಳಿಗೆ ನಮ್ಮ ತಂತ್ರಜ್ಞಾನವನ್ನು ನೀಡುತ್ತಿದ್ದೇವೆ. ಅವರು ಸ್ವಿಗ್ಗಿಯ ಮೇಲೆ ದೊಡ್ಡ ಮಟ್ಟದ ಎಐ ಅಪ್ಲಿಕೇಶನ್‌ಗಳನ್ನು ನಿರ್ಮಿಸಬಹುದು. ಈ ಮೂಲಕ ಸ್ವಿಗ್ಗಿ ಕೇವಲ ಒಂದು ಆ್ಯಪ್ ಆಗಿ ಉಳಿಯದೆ, ಹೊಸ ತಂತ್ರಜ್ಞಾನಗಳು ಹುಟ್ಟುವ 'ಎಕೋಸಿಸ್ಟಮ್' ಆಗಿ ಬದಲಾಗುತ್ತಿದೆ,” ಎಂದರು.
ಎ"ಸ್ವಿಗ್ಗಿ ಬಿಲ್ಡರ್ಸ್ ಕ್ಲಬ್ ಎಐ-ಚಾಲಿತ ಕಾಮರ್ಸ್‌ನ ಮುಂದಿನ ಹಂತವಾಗಿದೆ. ಡೆವಲಪರ್‌ಗಳಿಗೆ ಮಿತಿಯಿಲ್ಲದೆ ಹೊಸ ಆವಿಷ್ಕಾರಗಳನ್ನು ಮಾಡಲು ನಾವು ಅಮೆಜಾನ್ ಬೆಡ್‌ರಾಕ್ ಮತ್ತು ಟ್ರೈನಿಯಮ್ ಮೂಲಕ ಮೂಲಸೌಕರ್ಯವನ್ನು ಒದಗಿಸುತ್ತಿದ್ದೇವೆ" ಎಂದು ಡಬ್ಲ್ಯೂಎಸ್ ಇಂಡಿಯಾದ ಅಧ್ಯಕ್ಷ ಸಂದೀಪ್ ದತ್ತಾ ತಿಳಿಸಿದರು.
55
ಯಾರಿಗೆಲ್ಲ ಅವಕಾಶ? ಇದರಿಂದ ಏನು ಲಾಭ?
ತಂತ್ರಜ್ಞಾನದ ಬಗ್ಗೆ ಅರಿವಿರುವ ಡೆವಲಪರ್‌ಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಕಂಪನಿಗಳು mcp.swiggy.com/builders ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು. ಸ್ವಿಗ್ಗಿ ಇದನ್ನು ಪರಿಶೀಲಿಸಿ ತನ್ನ ವೇದಿಕೆಗೆ ಪ್ರವೇಶವನ್ನು ನೀಡುತ್ತದೆ. ಆಯ್ಕೆಯಾದ ಟೆಕ್ಕಿಗಳಿಗೆ ಸ್ವಿಗ್ಗಿಯಿಂದಲೇ ನೇರ ಎಂಜಿನಿಯರಿಂಗ್ ಬೆಂಬಲ, ಜೊತೆಯಾಗಿ ಬ್ರ್ಯಾಂಡಿಂಗ್ ಮಾಡುವ ಅವಕಾಶ ಮತ್ತು ವ್ಯಾಪಾರ ಬೆಳೆಸಲು ಪಾಲುದಾರಿಕೆ ಕೂಡ ಸಿಗಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.